20/05/2025

Law Guide Kannada

Online Guide

ವಕೀಲರೊಬ್ಬರಿಗೆ 5 ಲಕ್ಷ ರೂ. ದಂಡ ವಿಧಿಸಿದ ಸುಪ್ರೀಂ ಕೋರ್ಟ್: ಕಾರಣ..?

ನವದೆಹಲಿ: ಅನಗತ್ಯ ಅರ್ಜಿ ಹಾಕಿ ನ್ಯಾಯಪೀಠಕ್ಕೆ ಕಿರಿಕಿರಿ ಉಂಟು ಮಾಡಿದ ವಕೀಲರೊಬ್ಬರಿಗೆ ಸುಪ್ರೀಂಕೋರ್ಟ್ 5 ಲಕ್ಷ ರೂ. ದಂಡ ವಿಧಿಸಿದೆ.

ಕೌಟುಂಬಿಕ ಕಲಹ ಪ್ರಕರಣದಲ್ಲಿ ವ್ಯಕ್ತಿಯೊಬ್ಬರಿಗೆ ನೀಡಿದ್ದ ಪರಿಹಾರವನ್ನು ತಡೆ ಹಿಡಿಯುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ವಕೀಲರಿಗೆ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ವಿಕ್ರಂ ನಾಥ್ ಹಾಗೂ ನ್ಯಾಯಮೂರ್ತಿ ಸಂದೀಪ್ ಮೆಹ್ರಾ ಅವರಿದ್ದ ನ್ಯಾಯಪೀಠ 5 ಲಕ್ಷ ರೂ. ದಂಡ ವಿಧಿಸಿ ಈ ಆದೇಶ ಹೊರಡಿಸಿದೆ.

ಮುಂಬೈನ ಕೌಟುಂಬಿಕ ನ್ಯಾಯಾಲಯವು ನೇಹಾ ಸೀತಾರಾಮ್ ಅಗರ್ವಾಲ್ ಪರವಾಗಿ ನೀಡಿದ್ದ ತೀರ್ಪಿಗೆ ತಡೆ ನೀಡುವಂತೆ ಕೋರಿ ವಕೀಲರಾದ ಸಂದೀಪ್ ತೋಡಿ ಎಂಬುವವರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಅವರು ಕೇಂದ್ರ ಸರಕಾರ, ಮುಂಬೈ ಹೈಕೋರ್ಟ್ ಹಾಗೂ ಕೌಟುಂಬಿಕ ನ್ಯಾಯಾಲಯವನ್ನು ಪ್ರತಿವಾದಿಯನ್ನಾಗಿ ನಮೂದಿಸಿದ್ದರು.

ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಪೀಠ ಸಂವಿಧಾನದ 12ನೇ ವಿಧಿಯ ಅಡಿ ಯಾವುದೇ ವಿವೇಕಯುಕ್ತ ವಕೀಲರು ಇಂತಹ ಅರ್ಜಿ ಸಲ್ಲಿಸುವುದಿಲ್ಲ. ಮೂಲಭೂತ ಹಕ್ಕುಗಳನ್ನು ಖಾತರಿಪಡಿಸಲು 32ನೇ ವಿಧಿ ರೂಪಿಸಲಾಗಿದೆ ಹಕ್ಕುಗಳ ಉಲ್ಲಂಘನೆಯಾಗಿದ್ದಲ್ಲಿ ಮಾತ್ರ ಕೋರ್ಟ್ ಮಧ್ಯಪ್ರವೇಶ ಮಾಡಬಹುದು. ಆದರೆ, ನಿಮ್ಮ ಅರ್ಜಿ ಇದಕ್ಕೆ ತದ್ವಿರುದ್ಧವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿತು.

ಅಲ್ಲದೆ ನಿಮ್ಮ ಅರ್ಜಿಯಿಂದ ನ್ಯಾಯಾಲಯದ ಸಮಯ ವ್ಯರ್ಥವಾಗಿದೆ ಕೋರ್ಟ್ ವಾತಾವರಣವನ್ನು ಹಾಳು ಮಾಡಿದೆ ಅನಗತ್ಯವಾಗಿ ಸಲ್ಲಿಸಿರುವ ಅರ್ಜಿಯನ್ನು ಕೂಡಲೆ ಹಿಂದಕ್ಕೆ ಪಡೆಯಿರಿ ತಾಕೀತು ಮಾಡಿದ ನ್ಯಾಯಪೀಠವು, ಅನಗತ್ಯ ಅರ್ಜಿ ಹಾಕಿ ಕೋರ್ಟ್ ಸಮಯ ವ್ಯರ್ಥ ಮಾಡಿದ ನಿಮ್ಮ ಕೃತ್ಯಕ್ಕೆ ದಂಡ ವಿಧಿಸದೆ ಅನ್ಯ ಮಾರ್ಗವಿಲ್ಲ ಎಂದು 5 ಲಕ್ಷ ರೂ.ಗಳ ದಂಡ ವಿಧಿಸಿತು.

ಹಾಗೆಯೇ ಮುಂದಿನ ನಾಲ್ಕು ವಾರಗಳಲ್ಲಿ 5 ಲಕ್ಷ ರೂಪಾಯಿ ದಂಡದ ಹಣವನ್ನು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸುವಂತೆ ಆದೇಶ ನೀಡಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.