19/05/2025

Law Guide Kannada

Online Guide

1996ರ ಕಾಯ್ದೆಯಡಿ ಕೋರ್ಟ್ ಮಧ್ಯಸ್ಥಿಕೆ ತೀರ್ಪು ಬದಲಾಯಿಸಬಹುದು- ಸುಪ್ರೀಂಕೋರ್ಟ್

ನವದೆಹಲಿ: ಮಧ್ಯಸ್ಥಿಕೆ ಮತ್ತು ರಾಜಿ ಸಂಧಾನ ಕಾನೂನು 1996ರ ಅನ್ವಯ ನೀಡಲಾಗುವ ಮಧ್ಯಸ್ಥಿಕೆ ನ್ಯಾಯಮಂಡಳಿಯ ತೀರ್ಪುಗಳಿಗೆ ತಿದ್ದುಪಡಿ ತರುವ ಸೀಮಿತ ಅಧಿಕಾರ ನ್ಯಾಯಾಲಯಗಳಿಗೆ ಇದೆ. 1996ರ ಕಾಯ್ದೆಯಡಿ ಕೋರ್ಟ್ ಮಧ್ಯಸ್ಥಿಕೆ ತೀರ್ಪು ಬದಲಾಯಿಸಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮುಖ್ಯನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು 4:1 ಅನುಪಾತದಲ್ಲಿ ಈ ತೀರ್ಪು ಪ್ರಕಟಿಸಿದೆ. ಮಧ್ಯಸ್ಥಿಕೆ ಮತ್ತು ರಾಜೀಸಂಧಾನ ಕಾಯ್ದೆ-1996ರ ಅಡಿಯಲ್ಲಿ ನ್ಯಾಯಾಲಯಗಳು ಮಧ್ಯಸ್ಥಿಕೆ ತೀರ್ಪುಗಳನ್ನು ಬದಲಾಯಿಸಬಹುದು. 1996ರ ಕಾಯ್ದೆಯ ಅಡಿಯಲ್ಲಿ, ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ, ಮಧ್ಯಸ್ಥಿಕೆ ತೀರ್ಪುಗಳಲ್ಲಿ ನ್ಯಾಯಾಲಯ ಬದಲಾವಣೆ ತರಬಹುದು ಎಂದು ಬಹುಮತದ ತೀರ್ಪಿನಲ್ಲಿ ಹೇಳಿದೆ.

ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಸಂಜಯ್ ಕುಮಾರ್, ಆಗಸ್ಟೀನ್ ಜಾರ್ಜ್ ಮಸೀಹ್, ಕೆ.ವಿ. ವಿಶ್ವನಾಥನ್ ಅವರೂ ಈ ಪೀಠದಲ್ಲಿ ಇದ್ದರು.ಆದರೆ ನ್ಯಾಯಮೂರ್ತಿ ವಿಶ್ವನಾಥನ್ ಅವರು ಮಾತ್ರ ಭಿನ್ನ ತೀರ್ಪು ಬರೆದಿದ್ದು, ಮಧ್ಯಸ್ಥಿಕೆ ತೀರ್ಪುಗಳನ್ನು ನ್ಯಾಯಾಲಯಗಳು ಬದಲಾಯಿಸುವಂತಿಲ್ಲ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಈ ತೀರ್ಪು ವಾಣಿಜ್ಯ ವಿಚಾರಗಳಿಗೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ದೇಶದ ಹಾಗೂ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರಗಳು ನೀಡಿದ ತೀರ್ಪುಗಳ ಮೇಲೆ ಪರಿಣಾಮ ಬೀರಲಿದೆ. ತೀರ್ಪು ಪ್ರಕಟಿಸಿದ ಸಿಜೆಐ ಸಂಜೀವ್ ಖನ್ನಾ ಅವರು, ಮಧ್ಯಸ್ಥಿಕೆ ಕೇಂದ್ರಗಳು ನೀಡಿದ ತೀರ್ಪುಗಳಲ್ಲಿ ಬದಲಾವಣೆ ತರುವಾಗ ನ್ಯಾಯಾಲಯಗಳು ಎಚ್ಚರಿಕೆ ವಹಿಸಬೇಕು. ‘ಸಂವಿಧಾನದ 142ನೆಯ ವಿಧಿಯು ಸುಪ್ರೀಂ ಕೋರ್ಟ್ಗೆ ನೀಡಿರುವ ವಿಶೇಷ ಅಧಿಕಾರವನ್ನು ಬಳಸಿ ಮಧ್ಯಸ್ಥಿಕೆ ಕೇಂದ್ರಗಳ ತೀರ್ಪುಗಳಲ್ಲಿ ಬದಲಾವಣೆ ತರಬಹುದು. ಆದರೆ ಈ ಅಧಿಕಾರವನ್ನು ಸಂವಿಧಾನದ ಚೌಕಟ್ಟಿನ ಒಳಗೆ ಬಹಳ ಎಚ್ಚರಿಕೆಯಿಂದ ಬಳಸಬೇಕು’ ಎಂದು ಹೇಳಿದರು.

‘ಮಧ್ಯಸ್ಥಿಕೆ ಮತ್ತು ರಾಜೀಸಂಧಾನ ಕಾಯ್ದೆಯ ಸೆಕ್ಷನ್ 34 ಹಾಗೂ 37ರ ಅಡಿಯಲ್ಲಿ, ಮಧ್ಯಸ್ಥಿಕೆ ಕೇಂದ್ರದ ತೀರ್ಪು ಬದಲಾವಣೆ ಮಾಡಲು ನ್ಯಾಯಾಲಯಗಳಿಗೆ ಸೀಮಿತ ಅಧಿಕಾರ ಇದೆ’ ಎಂದು ಸಿಜೆಐ ಖನ್ನಾ ತಿಳಿಸಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.