19/05/2025

Law Guide Kannada

Online Guide

ಅಕ್ರಮ, ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳನ್ನ ಕೆಡವಬೇಕು: ಸುಪ್ರೀಂ ಕೋರ್ಟ್

ನವದೆಹಲಿ: ಅಕ್ರಮ ಮತ್ತು ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳ ಬಗ್ಗೆ ಯಾವುದೇ ದಯೆ ತೋರಿಸಬಾರದು ಅಂತಹ ಕಟ್ಟಡಗಳನ್ನ ಕೆಡವಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

“ಕಾನೂನಿನ ಕಡೆಗಣಿಸಿ ಅನುಮತಿ ಪಡೆಯದೇ ಅರ್ಜಿದಾರರಾದ ಕನಿಜ್ ಅಹ್ಮದ್ ಕೋಲ್ಕತ್ತಾದಲ್ಲಿ ಎರಡು ಅಂತಸ್ತಿನ ಅನಧಿಕೃತ ಕಟ್ಟಡವನ್ನು ನಿರ್ಮಿಸಿದ್ದರು. ಈ ಅನಧಿಕೃತ ಕಟ್ಟಡವನ್ನ ಕೆಡವಲು ಕಲ್ಕತ್ತಾ ಹೈಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಇದನ್ನ ಪ್ರಶ್ನಿಸಿ ಕನಿಜ್ ಅಹ್ಮದ್ ಅವರು ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್ ಮೊರೆ ಹೋದರು.

ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರನ್ನೊಳಗೊಂಡ ಪೀಠವು, ಅಹ್ಮದ್ ಅವರ ಮನವಿಯನ್ನು ತಿರಸ್ಕರಿಸಿ, ಅನಧಿಕೃತ ನಿರ್ಮಾಣವನ್ನು ಕ್ರಮಬದ್ಧಗೊಳಿಸಲು ಅವಕಾಶ ನೀಡಲು ನಿರಾಕರಿಸಿ, ಅದನ್ನು ಕೆಡವಲು ಆದೇಶಿಸಿದ ಕಲ್ಕತ್ತಾ ಹೈಕೋರ್ಟ್ ನ ತೀರ್ಪನ್ನು ಎತ್ತಿಹಿಡಿದಿದೆ.

ಈ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್ , ಪರಿಣಾಮ ಶುಲ್ಕ ಪಾವತಿಯ ಆಧಾರದ ಮೇಲೆ ಅನಧಿಕೃತ ಅಭಿವೃದ್ಧಿ ಕಾಯ್ದೆಗಳನ್ನು ಸಕ್ರಮಗೊಳಿಸುವ ಸಂದರ್ಭದಲ್ಲಿ ಅನೇಕ ರಾಜ್ಯ ಸರ್ಕಾರಗಳು ಈ ಅಂಶವನ್ನು ಪರಿಗಣಿಸಿಲ್ಲ ಎಂದು ಗಮನಿಸಲು ನಮಗೆ ನೋವಾಗಿದೆ. ಕಾನೂನು ಉಲ್ಲಂಘಿಸುವವರ ರಕ್ಷಣೆಗೆ ಕಾನೂನು ಬರಬಾರದು, ಏಕೆಂದರೆ ಅಂತಹ ಉಲ್ಲಂಘನೆಗಳಿಗೆ ಅವಕಾಶ ನೀಡುವುದರಿಂದ ಶಿಕ್ಷೆಯಿಂದ ಮುಕ್ತಿ ಪಡೆಯುವ ಸಂಸ್ಕೃತಿ ಬೆಳೆಯುತ್ತದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿತು.

“ಕಾನೂನು ತನ್ನನ್ನು ನಿರ್ಲಕ್ಷಿಸಲು ಪ್ರಯತ್ನಿಸುವವರನ್ನು ರಕ್ಷಿಸುವುದಾದರೆ, ಅದು ನ್ಯಾಯಯುತ ಮತ್ತು ಕ್ರಮಬದ್ಧ ಸಮಾಜದ ಮೂಲಾಧಾರವಾಗಿರುವ ಕಾನೂನುಗಳ ಪ್ರತಿಬಂಧಕ ಪರಿಣಾಮವನ್ನು ದುರ್ಬಲಗೊಳಿಸುತ್ತದೆ” ಎಂದು ನ್ಯಾಯಾಲಯ ಗಮನಿಸಿತು.

ಅಕ್ರಮ ನಿರ್ಮಾಣಗಳನ್ನು ಸಹಿಸಲಾಗುವುದಿಲ್ಲ ಎಂದು ಕಟ್ಟುನಿಟ್ಟಾಗಿ ಪ್ರತಿಪಾದಿಸಿದ ಸುಪ್ರೀಂ ಕೋರ್ಟ್, “ಅಕ್ರಮ ನಿರ್ಮಾಣದ ಪ್ರಕರಣಗಳನ್ನು ನಿರ್ವಹಿಸುವಾಗ ನಾವು ಕಟ್ಟುನಿಟ್ಟಿನ ವಿಧಾನವನ್ನು ಅಳವಡಿಸಿಕೊಳ್ಳಬೇಕು ಮತ್ತು ಸಕ್ಷಮ ಪ್ರಾಧಿಕಾರದಿಂದ ಅಗತ್ಯ ಅನುಮತಿಗಳಿಲ್ಲದೆ ನಿರ್ಮಿಸಲಾದ ಕಟ್ಟಡಗಳನ್ನು ಸಕ್ರಮಗೊಳಿಸುವುದನ್ನು ಸುಲಭವಾಗಿ ಒಪ್ಪಿಕೊಳ್ಳಬಾರದು” ಎಂದು ಹೇಳಿದೆ.

“ಕಾನೂನಿನ ನಿಯಮವನ್ನು ಎತ್ತಿಹಿಡಿಯುವ ನ್ಯಾಯಾಲಯಗಳ ಮೇಲಿನ ಉಲ್ಲಂಘಿಸಲಾಗದ ಕರ್ತವ್ಯದಿಂದ ಮಾತ್ರವಲ್ಲದೆ, ಸಾರ್ವಜನಿಕರ ಯೋಗಕ್ಷೇಮವನ್ನು ರಕ್ಷಿಸುವ ಅಗತ್ಯದಿಂದಲೂ ಅಂತಹ ದೃಢ ನಿಲುವನ್ನು ಕಾಯ್ದುಕೊಳ್ಳುವ ಅಗತ್ಯವು ಉದ್ಭವಿಸುತ್ತದೆ” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಹೈಕೋರ್ಟ್ ಅವಲೋಕನಗಳೊಂದಿಗೆ ಸಂಪೂರ್ಣವಾಗಿ ಒಪ್ಪಿದ ಸುಪ್ರೀಂ ಕೋರ್ಟ್, ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ತನ್ನ ನ್ಯಾಯವ್ಯಾಪ್ತಿಯನ್ನು ಚಲಾಯಿಸುವ ಮೂಲಕ ಅನಧಿಕೃತ ಕಟ್ಟಡ ನಿರ್ಮಾಣದ ವಿರುದ್ಧ ಹೈಕೋರ್ಟ್ ನಡೆಸಿದ ಧೈರ್ಯ ಮತ್ತು ದೃಢನಿಶ್ಚಯವನ್ನು ಶ್ಲಾಘಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.