ಹೈಕೋರ್ಟ್ ಗಳಲ್ಲಿ 7 ಲಕ್ಷ ಕ್ರಿಮಿನಲ್ ಕೇಸ್ ಗಳು ಬಾಕಿ: ನ್ಯಾಯಮೂರ್ತಿಗಳ ನೇಮಕಕ್ಕೆ ಸುಪ್ರೀಂ ನಿರ್ದೇಶನ

ನವದೆಹಲಿ: ದೇಶದ ವಿವಿಧ ಹೈಕೋರ್ಟ್ಗಳಲ್ಲಿ ಸುಮಾರು ಏಳು ಲಕ್ಷ ಕ್ರಿಮಿನಲ್ ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದು, ಹೀಗಾಗಿ ಹೈಕೋರ್ಟ್ ಗಳಲ್ಲಿ ನ್ಯಾಯಮೂರ್ತಿಗಳ ನೇಮಕಕ್ಕೆ ಸುಪ್ರೀಂ ಕೋರ್ಟ್ ಒತ್ತಾಯಿಸಿದೆ.
ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿರುವ ಸುಪ್ರೀಂಕೋರ್ಟ್ ನ ನ್ಯಾ. ಅಭಯ್ ಎಸ್. ಒಕಾ ಮತ್ತು ನ್ಯಾ. ಉಜ್ಜಲ್ ಭುಯಾನ್ ಅವರಿದ್ದ ಪೀಠವು, ದೇಶದ ವಿವಿಧ ಹೈಕೋರ್ಟ್ ಗಳಲ್ಲಿ ಸುಮಾರು ಏಳು ಲಕ್ಷ ಕ್ರಿಮಿನಲ್ ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದು, ನೇಮಕಗೊಂಡ ಹೈಕೋರ್ಟ್ ನ್ಯಾಯಮೂರ್ತಿಗಳ ಹೆಸರುಗಳನ್ನು ಕೇಂದ್ರ ಸರ್ಕಾರವು ತ್ವರಿತವಾಗಿ ಅಂತಿಮಗೊಳಿಸಬೇಕು ಎಂದು ಹೇಳಿದೆ.
‘ಕೊಲಿಜಿಯಂ ಶಿಫಾರಸುಗಳನ್ನು ತ್ವರಿತವಾಗಿ ಅಂತಿಮಗೊಳಿಸುವ ಖಾತ್ರಿಯನ್ನು ಕೇಂದ್ರ ಸರ್ಕಾರ ನೀಡಬೇಕು. ಬಾಕಿ ಇರುವ ಶಿಫಾರಸುಗಳ ಪಟ್ಟಿಯನ್ನು ಕೇಂದ್ರ ಸರ್ಕಾರವು ಬೇಗನೆ ಅಂತಿಮಗೊಳಿಸಲಿದೆ ಎಂಬ ನಂಬಿಕೆ ಮತ್ತು ಭರವಸೆ ಇದೆ’ ಎಂದು ನ್ಯಾಯಪೀಠ ತಿಳಿಸಿದೆ.
ಅಲಹಾಬಾದ್ ನ್ಯಾಯಾಲಯದಲ್ಲಿ ಗರಿಷ್ಠ ಪ್ರಮಾಣದಲ್ಲಿ ಪ್ರಕರಣಗಳು ಬಾಕಿ ಇವೆ. ಇಲ್ಲಿಗೆ 160 ನ್ಯಾಯಮೂರ್ತಿಗಳ ಮಂಜೂರಾತಿ ಇದ್ದು, ಸದ್ಯ 79 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೆಯೇ ಬಾಂಬೆ ಹೈಕೋರ್ಟ್ನಲ್ಲಿ ಮಂಜೂರಾದ ಹುದ್ದೆಗಳು 94. ಸದ್ಯ ಇರುವ ನ್ಯಾಯಮೂರ್ತಿಗಳ ಸಂಖ್ಯೆ 66, ಕಲ್ಕತ್ತಾ ಹೈಕೋರ್ಟ್ ನ ಒಟ್ಟು ನ್ಯಾಯಮೂರ್ತಿಗಳ ಸಂಖ್ಯೆ 72. ಹಾಲಿ ಇರುವುದು 44, ದೆಹಲಿ ಹೈಕೋರ್ಟ್ ಗೆ ಅಗತ್ಯ ಇರುವುದು 60 ನ್ಯಾಯಮೂರ್ತಿಗಳು; ಸದ್ಯ ಇರುವುದು 41 ಮಾತ್ರ.
ಹೈಕೋರ್ಟ್ಗಳ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ ಹೆಸರುಗಳನ್ನು ನ್ಯಾಯಾಲಯದ ಅಂತರ್ಜಾಲ ಪುಟದಲ್ಲಿ ಪ್ರಕಟಿಸಲಾಗಿದೆ. ಇಂತಹ ಹಲವು ಶಿಫಾರಸುಗಳು ಕೇಂದ್ರದ ಮುಂದಿದ್ದು, ಅವುಗಳು ಅಂತಿಮಗೊಳ್ಳಬೇಕಿದೆ.
2023ರಲ್ಲಿ ನಾಲ್ಕು ಶಿಫಾರಸುಗಳು, 2024ರಲ್ಲಿ 13 ಶಿಫಾರಸುಗಳು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಕಳುಹಿಸಿತ್ತು. ಆದರೆ ಈವರೆಗೂ ಅವು ಅಂತಿಮಗೊಂಡಿಲ್ಲ. 2024ರ ಸೆ. 24ರಂದು ಕಳುಹಿಸಿದ ಶಿಫಾರಸು ಕೂಡಾ ಕೇಂದ್ರದ ಮುಂದಿದೆ ಎನ್ನಲಾಗಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ