19/05/2025

Law Guide Kannada

Online Guide

ಪತ್ನಿಯ ವಿವಾಹೇತರ ಲೈಂಗಿಕ ಸಂಬಂಧ ಅಪರಾಧ ಎಂದು ಪರಿಗಣಿಸಲು ಸಾಧ್ಯವಿಲ್ಲ: ಹೈಕೋರ್ಟ್

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮದುವೆಯಾದ ನಂತರ ಪತಿ ಅಥವಾ ಪತ್ನಿಯ ವಿವಾಹೇತರ ಸಂಬಂಧದಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಈ ಮಧ್ಯೆ ಇದೀಗ ಇಂತಹದ್ದೇ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಸಂವೇದನಾಶೀಲ ತೀರ್ಪೊಂದನ್ನು ನೀಡಿದೆ.

ಪತ್ನಿಯ ವಿವಾಹೇತರ ಲೈಂಗಿಕ ಸಂಬಂಧ ಅಪರಾಧವಲ್ಲ ಎಂದು ದೆಹಲಿ ಹೈಕೋರ್ಟ್ ಸಂವೇದನಾಶೀಲ ತೀರ್ಪನ್ನು ನೀಡಿದೆ. ಹೈಕೋರ್ಟ್ನ ನೀನಾ ಬನ್ಸಾಲ್ ಕೃಷ್ಣ ಅವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪನ್ನು ನೀಡಿದೆ.

ಪತಿ ಪತ್ನಿಯನ್ನು ತನ್ನ ಆಸ್ತಿ ಎಂದು ಪರಿಗಣಿಸುತ್ತಿದ್ದ ಕಾಲ ಈಗ ಮುಗಿದಿದೆ. ವಿವಾಹೇತರ ಸಂಬಂಧಗಳನ್ನು ಅಪರಾಧ ಎಂದು ಪರಿಗಣಿಸಲಾಗದು ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಪತಿಯೊಬ್ಬರು ತನ್ನ ಪತ್ನಿ ಹೊಟೇಲಿನ ರೂಮ್ ನಲ್ಲಿ ಪರ ಪುರುಷನೊಂದಿಗೆ ಲೈಂಗಿಕ ಸಂಬಂಧದಲ್ಲಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಳು ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪತ್ನಿಯ ಪ್ರಿಯಕರನನ್ನು ಅಪರಾಧಿ ಎಂದು ಪರಿಗಣಿಸುವುದು ಸೂಕ್ತವಲ್ಲ ಎಂದು ತೀರ್ಪು ಪ್ರಕಟಿಸಿತ್ತು.

ಇದನ್ನು ಪ್ರಶ್ನಿಸಿ ಪತಿ ಸೆಷನ್ಸ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಸೆಷನ್ಸ್ ಕೋರ್ಟ್ ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಪಡಿಸಿ ಪತ್ನಿಯ ಪ್ರಿಯಕರನಿಗೆ ನೋಟೀಸ್ ಜಾರಿಗೊಳಿಸಿತ್ತು.

ಈ ನೋಟೀಸ್ ಅನ್ನು ಪ್ರಶ್ನಿಸಿ ಪ್ರಿಯಕರ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಮೇಲ್ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಪೀಠ, ಪತಿ ತನ್ನ ಪತ್ನಿಯನ್ನು ಖಾಸಗಿ ಆಸ್ತಿ ಎಂದು ಪರಿಗಣಿಸುವುದು ಅದು ಅಪಾಯಕಾರಿ ಪ್ರವೃತ್ತಿ ಎಂದು ತೀರ್ಪು ನೀಡಿತು.

ಇದೇ ವೇಳೇ ಮಹಾಭಾರತದ ದ್ರೌಪದಿಯ ಕಥೆಯನ್ನು ಉಲ್ಲೇಖಿಸಿದ ನ್ಯಾಯಪೀಠ, ಐದು ಜನ ಗಂಡಂದಿರಿದ್ದರೂ ಧರ್ಮರಾಜ ಮಾತ್ರ ಆಕೆಯನ್ನು ಜೂಜಿನಲ್ಲಿ ಪಣಕ್ಕಿಟ್ಟ. ಉಳಿದ ಗಂಡಂದಿರು ಮೂಕಪ್ರೇಕ್ಷಕರಾಗಿದ್ದರು. ಇದರಿಂದ ದೌಪದಿಯ ಘನತೆಗೆ ಧಕ್ಕೆ ಉಂಟಾಯಿತು. ಮಹಿಳೆಯನ್ನು ಆಸ್ತಿ ಎಂದು ಅಪಾಯಕಾರಿ ಎಂಬುದನ್ನು ಮಹಾಭಾರತದ ಯುದ್ಧವೇ ಸಾಬೀತುಪಡಿಸಿದೆ ಎಂದು ನ್ಯಾಯಮೂರ್ತಿ ನೀನಾ ಬನ್ಸಾಲ್ ಹೇಳಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.