ಗಂಡನ ಪಿಂಚಣಿ ಹಣ ಕೇಳಲು ಬಂದ ಮಹಿಳೆ ಬಳಿ ಲಂಚಕ್ಕೆ ಬೇಡಿಕೆ : ಖಜಾನೆ ಅಧಿಕಾರಿಗಳಿಬ್ಬರ ಬಂಧನ

ಮಂಗಳೂರು: ಗ್ರಾಮ ಪಂಚಾಯತಿ ಕಾರ್ಯದರ್ಶಿ ಹುದ್ದೆಯಿಂದ ನಿವೃತ್ತರಾಗಿ ಬಳಿಕ ಮೃತಪಟ್ಟ ತನ್ನ ಗಂಡನ ಪಿಂಚಣಿ ಹಣವನ್ನ ಕೇಳಲು ಹೋದ ಮಹಿಳೆಯ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಂದಾಯ ಇಲಾಖೆಯ ಇಬ್ಬರು ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಬಸವೇಗೌಡ ಮತ್ತು ಭಾಸ್ಕರ್ ಬಂಧಿತ ಖಜಾನೆ ಸಿಬ್ಬಂದಿಗಳು. ನಿವೃತ್ತ ಅಧಿಕಾರಿಯ ಮರಣದ ಹಿನ್ನೆಲೆಯಲ್ಲಿ ಪತ್ನಿಗೆ ದೊರೆಯಬೇಕಾದ ಮರಣ ಉಪಧನದಲ್ಲೂ ಲಂಚಕ್ಕೆ ಕೈಚಾಚಿದ ಆರೋಪದಲ್ಲಿ ಖಜಾನೆಯ ಈ ಇಬ್ಬರು ಸಿಬ್ಬಂದಿಗಳನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಏನಿದು ಪ್ರಕರಣ..
ದೂರುದಾರ ಮಹಿಳೆಯ ಪತಿ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತಿ ಕಾರ್ಯದರ್ಶಿ ಹುದ್ದೆಯಲ್ಲಿದ್ದು, 2023ರ ಅಕ್ಟೋಬರ್ ನಲ್ಲಿ ವಯೋನಿವೃತ್ತಿ ಹೊಂದಿದ್ದರು. 2024ರ ಜೂನ್ ನಲ್ಲಿ ಮೃತಪಟ್ಟಿದ್ದರು.
ದೂರುದಾರ ಮಹಿಳೆ ತನ್ನ ಗಂಡನ ಮರಣ ಉಪದಾನದ ಬಗ್ಗೆ ಬಂಟ್ವಾಳ ತಾಲೂಕು ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ ಬಳಿ ಎರಡು ಬಾರಿ ವಿಚಾರಿಸಿದರು. ಆದರೆ, ಆತನಿಂದ ಯಾವುದೇ ಕೆಲಸ ಆಗಿಲ್ಲ ಎಂದು ದೂರುದಾರರು ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಕೊನೆಗೂ ಉಪದಾನವನ್ನು ಜಮೆ ಮಾಡಿದ್ದಕ್ಕೆ ಪ್ರತಿಫಲವಾಗಿ ಬಂಟ್ವಾಳ ತಾಲೂಕು ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ 5,000/- ಹಾಗೂ ಬಂಟ್ವಾಳ ಖಜಾನೆಯ ಪ್ರಥಮ ದರ್ಜೆ ಸಹಾಯಕ ಬಸವೇಗೌಡ ಬಿಎನ್ 5000/- ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಹಿಳೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಸಂಬಂಧ ಮೃತ ಸರ್ಕಾರಿ ಅಧಿಕಾರಿಯ ಪತ್ನಿ ನೀಡಿದ ದೂರಿನಂತೆ ಲೋಕಾಯುಕ್ತ ಅಧಿಕಾರಿಗಳು ಬಂಟ್ವಾಳ ತಾಲೂಕು ಖಜಾನೆ (ಟ್ರಶರಿ) ಕಚೇರಿಗೆ ದಾಳಿ ನಡೆಸಿದ್ದು. ಈ ಸಂದರ್ಭದಲ್ಲಿ ಭಾಸ್ಕರ್ ಹಾಗೂ ಪ್ರಥಮ ದರ್ಜೆ ಸಹಾಯಕ ಬಸವಗೌಡ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಇಬ್ಬರ ವಿರುದ್ಧವು ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ