21/05/2025

Law Guide Kannada

Online Guide

ಗಂಡ, ಮಕ್ಕಳಿದ್ದರೂ ಎರಡನೇ ಮದುವೆ: ಮಹಿಳೆಗೆ ಕೋರ್ಟ್ ಕೊಟ್ಟ ಶಿಕ್ಷೆಯಿದು..?

ಬಳ್ಳಾರಿ: ತನಗೆ ಗಂಡ ಮಕ್ಕಳಿದ್ದರೂ ಎರಡನೇ ಮದುವೆಯಾದ ಮಹಿಳೆಗೆ ಹೊಸಪೇಟೆಯ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ಪ್ರಕಟಿಸಿದೆ.

ಹೊಸಪೇಟೆ ನಗರದ ಟಿಬಿ ಡ್ಯಾಮ್ ನ ದೇವಿಕಾ ಎಂಬ ಮಹಿಳೆ ಶಿಕ್ಷೆಗೊಳಗಾದವರು. ದೇವಿಕಾ ಮೊದಲ ಮದುವೆಯಾಗಿ ಇಬ್ಬರು ಮಕ್ಕಳನ್ನೂ ಹೊಂದಿದ್ದರು. ಆದರೆ 2014ರ ಜನವರಿ 25ರಂದು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಹಳ್ಳಿ ಗ್ರಾಮದ ಅಂಬರೀಶ್ ಎಂಬುವರೊಂದಿಗೆ 2ನೇ ಮದುವೆಯಾಗಿದ್ದರು.

ಅಲ್ಲದೆ 2014ರ ಮಾರ್ಚ್ ಆರರಂದು ಬಾಲ್ಕಿ ನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹವನ್ನು ನೋಂದಣಿ ಕೂಡ ಮಾಡಿಸಲಾಗಿತ್ತು. ಈ ಕುರಿತು ಟಿ ಬಿ ಡ್ಯಾಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಠಾಣೆಯ ಅಂದಿನ ಎಎಸ್ಐ ಜಿ. ಟಿ. ನಾಗರಾಜ ಮತ್ತು ಪೊಲೀಸ್ ಕಾನ್ಸೆಬಲ್ ಗಳಾದ ವಸಂತಕುಮಾರ ಯರಿಸ್ವಾಮಿಯವರು ನ್ಯಾಯಾಲಯಕ್ಕೆ ಈ ಬಗ್ಗೆ ದೋಷಾರೋಪ ಪಟ್ಟಿ ಸಲ್ಲಿಸಿದರು.

ಪ್ರಕರಣವನ್ನು ವಿಚಾರಣೆ ನಡೆಸಿದ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅಶೋಕ್ ಆರ್ ಎಚ್ ಅವರು ದೇವಿಕಾ ಅಪರಾಧ ಎಸಗಿರುವುದು ಋಜುವಾಗಿದೆ ಎಂದು ತೀರ್ಮಾನಿಸಿ ಐಪಿಸಿ ಕಲಂ 494ರ ಅಡಿಯಲ್ಲಿ ಎರಡು ವರ್ಷ ಜೈಲು ಶಿಕ್ಷೆ ಮತ್ತು 5,000 ದಂಡ ವಿಧಿಸಿ ತೀರ್ಪು ನೀಡಿದರು.

ದಂಡ ಕಟ್ಟಲು ವಿಫಲರಾದರೆ ಒಂದು ತಿಂಗಳು ಜೈಲು ಶಿಕ್ಷೆ ಹೆಚ್ಚುವರಿಯಾಗಿ ಅನುಭವಿಸತಕ್ಕದ್ದು. ಪ್ರಕರಣದ ಇನ್ನುಳಿದ ಆರೋಪಿಗಳ ವಿರುದ್ಧ ಆರೋಪ ಸಾಬೀತಾಗಿಲ್ಲ. ಹಾಗಾಗಿ ಉಳಿದವರನ್ನು ಪ್ರಕರಣದಿಂದ ಬಿಡುಗಡೆ ಮಾಡಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಅಭಿಯೋಜಕ ಎಂ ಟಿ ರೇವಣ ಸಿದ್ದಪ್ಪ ಅವರು ವಾದ ಮಂಡಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.