07/03/2026

Law Guide Kannada

Online Guide

ಗೃಹ ಖರೀದಿದಾರರಿಗೆ ಗುಡ್ ನ್ಯೂಸ್: ಇನ್ಮುಂದೆ ಗ್ರಾಹಕ ನ್ಯಾಯಾಲಯಗಳಲ್ಲೂ ದಾವೆ ಹೂಡಲು ಅವಕಾಶ

ಬೆಂಗಳೂರು: ದೇಶಾದ್ಯಂತ ರೇರಾ ಕಾಯಿದೆ ಜಾರಿಯಾಗಿದ್ದರೂ ಬಿಲ್ಡರ್ ಗಳಿಂದ ತೊಂದರೆಗೊಳಗಾಗುವ ಗೃಹ ಖರೀದಿದಾರರಿಗೆ ಸಿಹಿಸುದ್ದಿ ಸಿಕ್ಕಿದ್ದು ಇನ್ಮಂದೆ ರೇರಾ ಪ್ರಾಧಿಕಾರವಷ್ಟೇ ಅಲ್ಲ. ಗ್ರಾಹಕ ನ್ಯಾಯಾಲಯಗಳಲ್ಲೂ ದಾವೆ ಹೂಡಿ ಪರಿಹಾರ ಕಂಡುಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ರೇರಾ ಕಾಯಿದೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಇತ್ಯರ್ಥ ಆಯೋಗ(ಎನ್ಸಿಡಿಆರ್ಸಿ) ಸೇರಿದಂತೆ ಯಾವ ಗ್ರಾಹಕ ನ್ಯಾಯಾಲಯಗಳಿಗೂ ಗೃಹ ಖರೀದಿದಾರರ ದೂರುಗಳನ್ನು ಆಲಿಸುವ ಅಧಿಕಾರವಿಲ್ಲ ಎಂದು ರಿಯಲ್ ಎಸ್ಟೇಟ್ ಸಂಸ್ಥೆ ಮೆಸರ್ಸ್ ಇಂಪೀರಿಯಾ ಸ್ಟ್ರಕ್ಚರ್ಸ್ ಲಿಮಿಟೆಡ್ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಮತ್ತು ವಿನೀತ್ ಸರಣ್ ಅವರಿದ್ದ ವಿಭಾಗೀಯ ಪೀಠವು , ಗೃಹ ಖರೀದಿದಾರರು ಇನ್ಮುಂದೆ ಗ್ರಾಹಕ ನ್ಯಾಯಾಲಯಗಳಲ್ಲೂ ದಾವೆ ಹೂಡಲು ಅವಕಾಶವಿದೆ ಎಂದು ತಿಳಿಸಿದೆ.

ಈ ಮೂಲಕ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯಿದೆ-2016 ಜಾರಿ ನಂತರ ನೊಂದ ಗೃಹ ಖರೀದಿದಾರರು ಗ್ರಾಹಕ ನ್ಯಾಯಾಲಯಗಳಲ್ಲಿ ದಾವೆ ಹೂಡಬೇಕೋ ಅಥವಾ ಬೇಡವೋ ಎಂಬ ಗೊಂದಲಕ್ಕೆ ತೆರೆ ಬಿದ್ದಿದೆ. ಜತೆಗೆ ರೇರಾ ಕಾಯಿದೆ ಜಾರಿ ನಂತರ ಗೃಹ ಖರೀದಿದಾರರ ದೂರುಗಳನ್ನು ಆಲಿಸುವಂತಹ ಅಧಿಕಾರ ಗ್ರಾಹಕ ನ್ಯಾಯಾಲಯಗಳಿಗಿಲ್ಲ ಎಂಬ ಬಿಲ್ಡರ್ ಗಳ ವಾದಕ್ಕೆ ತೀವ್ರ ಹಿನ್ನಡೆಯಾಗಿದೆ. ಸುಪ್ರೀಂ ತೀರ್ಪಿನಿಂದಾಗಿ ಸಕಾಲಕ್ಕೆ ಫ್ಲ್ಯಾಟ್ಗಳನ್ನು ಹಸ್ತಾಂತರಿಸದ ಬಿಲ್ಡರ್ಗಳ ವಿರುದ್ಧಗೃಹ ಖರೀದಿದಾರರು ರೇರಾದಲ್ಲಿ ದೂರು ಸಲ್ಲಿಸುವ ಜತೆಗೆ ಗ್ರಾಹಕ ನ್ಯಾಯಾಲಯಗಳಲ್ಲೂ ದಾವೆ ಹೂಡಿ ತಮ್ಮ ಹಣ ವಾಪಸಾತಿ ಮತ್ತು ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗಲಿದೆ.

“ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯಿದೆ-2016 ಮತ್ತು ಗ್ರಾಹಕ ರಕ್ಷಣಾ ಕಾಯಿದೆಯ ಅಂಶಗಳನ್ನು ಪರಿಶೀಲಿಸಿದ ನ್ಯಾಯಾಲಯ, ಗ್ರಾಹಕ ನ್ಯಾಯಾಲಯಗಳ ಮುಂದಿರುವ ವ್ಯಾಜ್ಯಗಳು ನ್ಯಾಯಾಂಗ ಪ್ರಕ್ರಿಯೆಯ ಭಾಗವಾಗಿವೆ. ನ್ಯಾಯಾಲಯಗಳು ಸಿವಿಲ್ ಕೋರ್ಟ್ಗಳಲ್ಲ. ಆದರೂ ಅವು ನಾಗರಿಕ ಪ್ರಕ್ರಿಯೆ ಸಂಹಿತೆ(ಕೋಟ್ ಆಫ್ ಸಿವಿಲ್ ಪ್ರೊಸೀಜರ್) ಭಾಗವಾಗಿರುವುದರಿಂದ ನ್ಯಾಯಾಲಯಗಳಿಗೆ ಗೃಹ ಖರೀದಿದಾರರ ದೂರುಗಳನ್ನು ಆಲಿಸಿ ಪರಿಹಾರ ನೀಡುವ ಎಲ್ಲಾ ಅಧಿಕಾರವಿದೆ” ಎಂದು ಆದೇಶಿಸಿದೆ.

ಈ ಕುರಿತು ತನ್ನ ಅಭಿಪ್ರಾಯ ಹಂಚಿಕೊಂಡಿರುವ ನೊಂದ ಗೃಹ ಖರೀದಿದಾರ ರಾಮಚಂದ್ರ ಅವರು, ಸುಪ್ರೀಂಕೋರ್ಟ್ ತೀರ್ಪು ಸ್ವಲ್ಪ ಸಮಾಧಾನ ತಂದಿದೆ. ಏಕೆಂದರೆ ಇಷ್ಟು ದಿನ ಬಿಲ್ಡರ್ ಗಳು ಅತ್ತ ಗ್ರಾಹಕ ನ್ಯಾಯಾಲಯಕ್ಕೆ ಅಧಿಕಾರವಿಲ್ಲವೆಂದು ವಾದಿಸುತ್ತಾ ಆ ದೂರುಗಳಿಗೆ ಉತ್ತರವೂ ನೀಡದೆ ತಪ್ಪಿಸಿಕೊಳ್ಳುತ್ತಿದ್ದರು. ಇದೀಗ ಗ್ರಾಹಕ ನ್ಯಾಯಾಲಯಗಳಲ್ಲಾದರೂ ತಮ್ಮಂತಹ ನೊಂದ ಗ್ರಾಹಕರಿಗೆ ನ್ಯಾಯ ಸಿಗುವ ಭರವಸೆ ಮೂಡಿದೆ ಎಂದಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.