ಕ್ರಿಮಿನಲ್ ಆರೋಪ ಹೊತ್ತ ಸರಕಾರಿ ನೌಕರ ಉದ್ಯೋಗಕ್ಕೆ ಕಂಟಕ; ಆತನ ವಜಾಗೆ ಯಾವುದೇ ಅಡ್ಡಿ ಇಲ್ಲ- ಹೈಕೋರ್ಟ್
ಬೆಂಗಳೂರು: ಕ್ರಿಮಿನಲ್ ಆರೋಪ ಹೊತ್ತ ಸರ್ಕಾರಿ ನೌಕರರು ಉದ್ಯೋಗಕ್ಕೆ ಕಂಟಕ. ಆತನನ್ನು ಸೇವೆಯಿಂದ ವಜಾಗೊಳಿಸಲು ಯಾವುದೇ ಅಡ್ಡಿ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹೈಕೋರ್ಟಿನ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಹುದ್ವಾರ ಅವರಿದ್ದ ನ್ಯಾಯಪೀಠವು ಈ ತೀರ್ಪು ನೀಡಿದ್ದು, ಬೆಂಗಳೂರು ನಗರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರ ಕಚೇರಿಯ ದ್ವಿತೀಯ ದರ್ಜೆ ಸಹಾಯಕ (ಎಸ್ ಡಿಎ) ಆಗಿ ಸೇವೆ ಸಲ್ಲಿಸಿ ಶಿಕ್ಷೆಗೆ ಒಳಗಾದ ನಂಜೇಗೌಡ ಎಂಬವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ನಂಜೇಗೌಡ ಹೈಕೋರ್ಟಿನ ಮೆಟ್ಟಿಲೇರಿದ್ದರು. ಅವರ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಪೀಠ, ಸರಕಾರಿ ನೌಕರರಾಗಿ ನೇಮಕಗೊಳ್ಳಲು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರಬಾರದು ಎಂಬ ನಿಯಮವಿದೆ. ಅದೇ ರೀತಿಯ ಆರೋಪ ಹೊತ್ತ ಸರಕಾರಿ ನೌಕರರನ್ನು ವಜಗೊಳಿಸಲು ಯಾವುದೇ ಅಡ್ಡಿ ಇಲ್ಲ ಎಂದು ಹೇಳಿದೆ.
ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ ಶಿಕ್ಷೆಗೆ ಗುರಿಯಾದವರನ್ನು ಸರ್ಕಾರಿ ನೌಕರರನ್ನಾಗಿ ನೇಮಕ ಮಾಡಿಕೊಳ್ಳುವುದಕ್ಕೆ ಅಡ್ಡಿಯಾಗುವಂತಿದ್ದರೆ, ಅದೇ ರೀತಿಯ ಆರೋಪ ಹೊತ್ತವರನ್ನು ಸರ್ಕಾರಿ ನೌಕರಿಯಿಂದ ತೆಗೆದುಹಾಕುವುದಕ್ಕೆ ಆಧಾರವಾಗಲಿದೆ. ಗಂಭೀರ ಕ್ರಿಮಿನಲ್ ಅಪರಾಧ ಆರೋಪ ಹೊತ್ತಿರುವ ಅರ್ಜಿದಾರರ ಕೃತ್ಯ ಅವರ ಅಧಿಕೃತ ಕರ್ತವ್ಯಗಳು ಅಥವಾ ಸೇವಾ ಷರತ್ತಿನೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಆ ಕಾರಣದಿಂದ ಅವರನ್ನು ಸರಕಾರಿ ನೌಕರರನ್ನಾಗಿ ಮುಂದುವರಿಸಬೇಕು. ಜೊತೆಗೆ ಗಂಭೀರ ಅಪರಾಧದ ಆರೋಪ ಹೊತ್ತವರನ್ನು ಸರಕಾರಿ ನೌಕರರನ್ನಾಗಿ ಸೇವೆಯಲ್ಲಿ ಮುಂದುವರಿಸಬೇಕು ಎಂದು ಬಯಸುವುದು ಸರಿಯಲ್ಲ. ಇದು ಒಪ್ಪತಕ್ಕ ವಿಷಯವಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಅರ್ಜಿದಾರರ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಪೀಠ, ಕ್ರಿಮಿನಲ್ ಪ್ರಕರಣಗಳಲ್ಲಿ ಸರಕಾರಿ ನೌಕರರನ್ನು ಖುಲಾಸೆಗೊಳಿಸಿದರೆ ಅವರ ವಿರುದ್ಧ ಶಿಸ್ತು ಕ್ರಮಕ್ಕಾಗಿ ವಿಚಾರಣೆಗೆ ಒಳಪಡಿಸಬಹುದಾಗಿದೆ ಆದರೆ ಅಪರಾಧ ಕೃತ್ಯದಲ್ಲಿ ವಿಚಾರಣೆ ನಡೆದು ಶಿಕ್ಷೆ ವಿಧಿಸಿರುವ ಸಂದರ್ಭದಲ್ಲಿ ಶಿಸ್ತು ಕ್ರಮಕ್ಕಾಗಿ ವಿಚಾರಣೆ ನಡೆಸಬೇಕಾದ ಅಗತ್ಯತೆ ಉಂಟಾಗುವುದಿಲ್ಲ ಎಂದು ನ್ಯಾಯ ಪೀಠ ಪ್ರತಿಪಾದಿಸಿದೆ. ನೈತಿಕತೆಗೆ ಅಸ್ಥಿರತೆಯನ್ನು ಉಂಟುಮಾಡುವಂತಹ ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆ ವಿಧಿಸಿರುವ ಆಧಾರದಲ್ಲಿ ಸೇವೆಯಿಂದ ವಜಾಗೊಳಿಸುವುದನ್ನು ತಡೆಯುವುದಕ್ಕೆ ಅವಕಾಶ ಇಲ್ಲ ಎಂದು ಕರ್ನಾಟಕ ನಾಗರೀಕ ಸೇವೆಗಳ (ವರ್ಗಿಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ 14ರಲ್ಲಿ ಸ್ಪಷ್ಟಪಡಿಸಲಾಗಿದೆ. ಶಿಕ್ಷೆಯ ಹೊರತಾಗಿಯೂ ಅರ್ಜಿದಾರರನ್ನು ಸೇವೆಯಿಂದ ವಜಾಗೊಳಿಸುವುದಕ್ಕೆ ಕಾರಣ ನೀಡಬೇಕಾಗಿ ಇತ್ತು ಎಂಬ ಅರ್ಜಿದಾರರ ಪರ ವಾದವನ್ನು ನಿಯಮಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯ ಪೀಠ ತಿರಸ್ಕರಿಸಿದೆ.
ಪ್ರಕರಣದ ವಿವರ
ಬೆಂಗಳೂರು ನಗರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರ ಕಚೇರಿಯಲ್ಲಿ ಎಸ್ಡಿಎ ಆಗಿ ಅರ್ಜಿದಾರ ನಂಜೇಗೌಡ ಸೇವೆ ಸಲ್ಲಿಸುತ್ತಿದ್ದಾಗ 2001ರಲ್ಲಿ ಹಲ್ಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 2011ರಲ್ಲಿ ಮಾಗಡಿಯ ವಿಚಾರಣಾ ನ್ಯಾಯಾಲಯ ವಿಚಾರಣೆ ನಡೆಸಿ ಆರೋಪಿಗೆ ಎರಡು ವರ್ಷಗಳ ಕಾಲ ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು.
ಈ ಆದೇಶದ ಅನ್ವಯ ಸರ್ಕಾರ 2023ರ ನವೆಂಬರ್ 18ರಂದು ಅವರನ್ನು ಸೇವೆಯಿಂದ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು 2024ರ ಅಕ್ಟೋಬರ್ 25ರಂದು ಕೆಎಟಿ ವಜಾಗೊಳಿಸಿತ್ತು. ಆಡಳಿತಾತ್ಮಕ ನ್ಯಾಯಮಂಡಳಿಯ ಆದೇಶವನ್ನು ಪ್ರಶ್ನಿಸಿ ನಂಜೇಗೌಡ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
