07/03/2026

Law Guide Kannada

Online Guide

13ರ ಬಾಲಕನ ಮೇಲೆ 52ರ ಮಹಿಳೆ ಲೈಂಗಿಕ ದೌರ್ಜನ್ಯ: ಪೋಕ್ಸೊ ಕೇಸ್ ರದ್ದಿಗೆ ಹೈಕೋರ್ಟ್ ನಕಾರ

ಬೆಂಗಳೂರು: 13 ವರ್ಷದ ಅಪ್ರಾಪ್ತ ಬಾಲಕನ ಮೇಲೆ 52 ವರ್ಷದ ಮಹಿಳೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ದಾಖಲಾಗಿರುವ ಪೋಕ್ಸೋ ಕೇಸ್ ರದ್ದುಗೊಳಿಸಲು ನಿರಾಕರಿಸಿರುವ ಹೈಕೋರ್ಟ್, ಪೋಕ್ಸೋ ಕಾಯ್ದೆಗೆ ಬಾಲಕ, ಬಾಲಕಿ ಎಂಬ ಲಿಂಗ ಭೇದವಿಲ್ಲ ಎಂದು ಮಹತ್ವದ ತೀರ್ಪು ನೀಡಿದೆ.

ತನ್ನ ವಿರುದ್ಧದ ಪೋಕ್ಸೋ ಪ್ರಕರಣ ರದ್ದುಗೊಳಿಸುವಂತೆ ಕೋರಿ 52 ವರ್ಷದ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ. ದೇಶದಲ್ಲೇ ಮೊದಲು ಎನ್ನಬಹುದಾದ ಪ್ರಕರಣವೊಂದರಲ್ಲಿ ಮಧ್ಯವಯಸ್ಸಿನ ಮಹಿಳೆಯ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ರದ್ದುಪಡಿಸಲು ನಿರಾಕರಿಸಿದೆ.

ಘಟನೆ ನಡೆದು 4 ವರ್ಷಗಳ ಬಳಿಕ ಕೇಸ್ ದಾಖಲಾಗಿದೆ. ಮಹಿಳೆಗೆ ಪೋಕ್ಸೋ ಕಾಯ್ದೆ ಅನ್ವಯವಾಗಲ್ಲ ಎಂದು ಮಹಿಳೆಯ ಪರ ವಕೀಲರು ವಾದ ಮಂಡಿಸಿದ್ದರು. ಅಲ್ಲದೇ ಮಹಿಳೆ ಬಾಲಕನ ಮೇಲೆ ಅತ್ಯಾಚಾರ ಎಸಗಲು ಸಾಧ್ಯವಿಲ್ಲ ಎಂದು ವಾದಿಸಿದ್ದರು. ಈವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ.

‘ಪೋಕ್ಸೊ ಕಾಯ್ದೆಗೆ ಬಾಲಕ-ಬಾಲಕಿ ಎಂಬ ಲಿಂಗಬೇಧವಿಲ್ಲ. ಹೂವಿನಂತೆ ಅರಳಬೇಕಾದ ವಯೋಮಾನದಲ್ಲಿ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ತಡೆಯಲು ರೂಪಿಸಿರುವ ಕಠಿಣ ಶಾಸನವಾಗಿದೆ’ ಎಂದು ಹೈಕೋರ್ಟ್ ಅಭಿಪ್ರಾಯಿಸಿತು.

18 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪೋಕ್ಸೋ ಕಾಯ್ದೆಯ ರಕ್ಷಣೆಯಿದೆ. ಹೆಣ್ಣುಮಕ್ಕಳ ರೀತಿ ಗಂಡುಮಕ್ಕಳಿಗೂ ರಕ್ಷಣೆ ಇದೆ. ವರದಿಗಳ ಪ್ರಕಾರ ಗಂಡು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಶೇ. 54.4ರಷ್ಟಿದೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಶೇ.45.6 ರಷ್ಟಿದೆ. ಪೋಕ್ಸೋ ಕಾಯ್ದೆಗೆ ಲಿಂಗ ಬೇಧವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.