07/03/2026

Law Guide Kannada

Online Guide

ದತ್ತು ಮಗುವಿಗೆ ಕುಟುಂಬದ ಆಸ್ತಿಯಲ್ಲಿ ಪಾಲು ಸಿಗುತ್ತಾ..? ಮಹತ್ವದ ತೀರ್ಪು ಪ್ರಕಟಿಸಿದ ಹೈಕೋರ್ಟ್

ಬೆಂಗಳೂರು: ದತ್ತು ಪಡೆದ ಮಗುವಿಗೆ ಕುಟುಂಬದ ಆಸ್ತಿಯಲ್ಲಿ ಪಾಲು ಸಿಗುತ್ತಾ ಎಂಬ ಗೊಂದಲಗಳಿಗೆ ಉತ್ತರ ಸಿಗುವಂತೆ ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಕಟಿಸಿದೆ.

ಹೌದು ದತ್ತು ಪಡೆದ ಪೋಷಕರಿಗೆ ಹುಟ್ಟಿದ ಮಕ್ಕಳಂತೆ ದತ್ತು ಪಡೆದ ಕುಟುಂಬದಲ್ಲಿ ಆ ಮಗುವಿಗೆ ಎಲ್ಲ ಹಕ್ಕುಗಳು, ಕಟ್ಟುಪಾಡುಗಳು ಮತ್ತು ಅನುವಂಶಿಕ ಹಕ್ಕುಗಳು ದೊರೆಯುತ್ತವೆ ಎಂದು ಹೈಕೋರ್ಟ್ ಧಾರವಾಡ ವಿಭಾಗೀಯ ನ್ಯಾಯಪೀಠ ತೀರ್ಪು ನೀಡಿದೆ.

“ಸಿ.ಬಿ. ವೆಂಕಟೇಶುಲು ಮತ್ತಿತರರು ವಿರುದ್ಧ ಜಿ. ಧನಲಕ್ಷ್ಮಿ ಮತ್ತಿತರರು” ಪ್ರಕರಣ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಸಚಿನ್ ಶಂಕರ್ ಮಗೂಮ್ ಮತ್ತು ಜಿ. ಬಸವರಾಜ ಅವರಿದ್ದ ವಿಭಾಗೀಯ ನ್ಯಾಯಪೀಠವು, ದತ್ತು ಪಡೆದ ಬಳಿಕ ಜೈವಿಕ ಕುಟುಂಬದೊಂದಿಗಿನ ಸಂಬಂಧಗಳ ವಿಭಜನೆಯು ಶಾಶ್ವತವಾಗಿದೆ ಮತ್ತು ಬದಲಾಯಿಸಲಾಗದು. ದತ್ತು ಸ್ವೀಕಾರವು ಒಮ್ಮೆ ಮಾನ್ಯವಾಗಿ ನೋಂದಾಯಿಸಿದ ನಂತರ, ಅದನ್ನು ನೋಂದಾಯಿತ ರದ್ದತಿ ಪತ್ರದ ಮೂಲಕ ರದ್ದುಗೊಳಿಸಲಾಗುವುದಿಲ್ಲ ಒಂದು ವೇಳೆ ಅಂತಹ ಪ್ರಯತ್ನ ನಡೆಸಿದರೂ ಅದು ಕಾಯ್ದೆಯ ಸೆಕ್ಷನ್ 15ಕ್ಕೆ ವಿರುದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ.

ಒಮ್ಮೆ ದತ್ತು ಪ್ರಕ್ರಿಯೆ ಪೂರ್ಣಗೊಂಡ ನಂತರ ಅದನ್ನು ದತ್ತು ಪೋಷಕರಾಗಲೀ ದತ್ತು ಮಕ್ಕಳಾಗಲೀ ರದ್ದು ಮಾಡಲಾಗದು. ಇದು ಸಾರ್ವಜನಿಕ ನೀತಿಗೆ ಮತ್ತು ಕಾನೂನು ಬದ್ಧತೆಗೆ ವಿರುದ್ಧವಾಗಿದೆ. ಹಾಗೆಯೇ, ದತ್ತಕ ಪ್ರಕ್ರಿಯೆಯಲ್ಲಿ ಇದು ವೈಯಕ್ತಿಕ ಸಂಬಂಧ, ವಾರೀಸು ಹಕ್ಕು ಮತ್ತು ಮಗುವಿನ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಸ್ಥಿರವಾದ ಕಾನೂನಿನ ನಿಲುವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.