ಭೀಮಾ ಕೋರೆಗಾಂವ್ ಕೇಸ್: ಆರೋಪಿ ಕ್ರಾಂತಿಕಾರಿ ಕವಿ ವರವರ ರಾವ್ ರ ನಿಯಮ ಸಡಿಲ ಮನವಿ ತಿರಸ್ಕರಿಸಿದ ಸುಪ್ರೀಂ
ನವದೆಹಲಿ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಯಾಗಿರುವ ಆಂಧ್ರಪ್ರದೇಶದ ಕ್ರಾಂತಿಕಾರಿ ಕವಿ ಪಿ.ವರವರ ರಾವ್ (85) ಅವರು ಜಾಮೀನು ಷರತ್ತುನ್ನು ಸಡಿಲಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ಪರಿಗಣಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
‘ಬೃಹತ್ ಮುಂಬೈ ಪ್ರದೇಶವನ್ನು ತೊರೆಯುವ ಮೊದಲು ಅನುಮತಿ ಪಡೆಯಬೇಕು’ ಎಂಬ ನಿಯಮವನ್ನು ಸಡಿಲಗೊಳಿಸುವಂತೆ ಕೋರಿ ಆರೋಪಿ ಕ್ರಾಂತಿಕಾರಿ ಕವಿ ವರವರ ರಾವ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರ ಪೀಠವು ತಿರಸ್ಕರಿಸಿದೆ.
ತಮ್ಮ ವಯಸ್ಸು ಮತ್ತು ಆರೋಗ್ಯದ ಕಾರಣದಿಂದ ಮುಂಬೈಯಿಂದ ಹೈದರಾಬಾದ್ಗೆ ಹೋಗಲು ಅನುಮತಿ ಕೋರಿ ವರವರ ರಾವ್ ಅವರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ವಾದ ವರವರ ರಾವ್ ಪರ ವಾದ ಮಂಡಿಸಿದ ವಕೀಲ ಆನಂದ್ ಗ್ರೋವರ್ ಅವರು, ರಾವ್ ಅವರ ಪತ್ನಿ ಹೈದರಾಬಾದ್ ಗೆ ಸ್ಥಳಾಂತರಗೊಂಡಿರುವುದರಿಂದ ಅವರಿಗೆ ಮುಂಬೈನಲ್ಲಿ ನೋಡಿಕೊಳ್ಳಲು ಯಾರೂ ಇಲ್ಲ. ಅಲ್ಲದೆ, ಮುಂಬೈನಲ್ಲಿ ಅವರ ಆರೋಗ್ಯದ ಖರ್ಚುಗಳು ಅವರ ಮಾಸಿಕ ರೂ. 50,000 ಪಿಂಚಣಿಗಿಂತ ಹೆಚ್ಚು, ಅಂದರೆ ಸುಮಾರು ರೂ. 76,000 ಆಗುತ್ತದೆ ಎಂದರು. ಇದಕ್ಕೆ ವ್ಯತಿರಿಕ್ತವಾಗಿ, ತೆಲಂಗಾಣದಲ್ಲಿ ಅವರಿಗೆ ಉಚಿತ ಆರೋಗ್ಯ ಸೇವೆ ಲಭ್ಯವಿದೆ ಎಂದು ವಾದಿಸಿದರು.
ನ್ಯಾಯಮೂರ್ತಿ ಮಹೇಶ್ವರಿ ಅವರು, “ಸರ್ಕಾರ ಅವರ ಆರೋಗ್ಯವನ್ನು ನೋಡಿಕೊಳ್ಳುತ್ತದೆ. ಇಲ್ಲವಾದರೆ ಅದೇ ಕೋರ್ಟ್ಗೆ ಹೋಗಿ, ನಮಗೆ ಆಸಕ್ತಿ ಇಲ್ಲ” ಎಂದು ಹೇಳಿ, ಅರ್ಜಿಯನ್ನು ವಾಪಸ್ ಪಡೆಯಲು ಸೂಚಿಸಿದರು. ಈ ಅರ್ಜಿಯನ್ನು ರಾವ್ ಅವರು ನಂತರ ಮತ್ತೆ ಸಲ್ಲಿಸಲು ಅನುಮತಿ ನೀಡಬೇಕು ಎಂಬ ವಕೀಲರ ಕೋರಿಕೆಯನ್ನು ಸಹ ನ್ಯಾಯಾಲಯ ದಾಖಲಿಸಲು ನಿರಾಕರಿಸಿತು.
ಏನಿದು ಪ್ರಕರಣ…
ಭೀಮಾ ಕೋರೆಗಾಂವ್ ಪ್ರಕರಣವು ಜನವರಿ 2018ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಘಟನೆಯನ್ನು ಸೂಚಿಸುತ್ತದೆ. ಭೀಮಾ ಕೋರೆಗಾಂವ್ ಕದನದ 200ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ದಲಿತ ಮತ್ತು ಮರಾಠಾ ಗುಂಪುಗಳ ನಡುವೆ ಘರ್ಷಣೆಗಳು ನಡೆದವು. ರಾಹುಲ್ ಫಟಂಗಲೆ ಎಂಬವರು ಈ ಗಲಭೆಯ ಸಂದರ್ಭದಲ್ಲಿಯೇ ಸಾವನ್ನಪ್ಪಿದರು. ಅವರ ಸಾವು ಕಲ್ಲು ತೂರಾಟದ ಘಟನೆಯಲ್ಲಿ ಸಂಭವಿಸಿತು ಎಂದು ವರದಿಯಾಗಿತ್ತು. ಈ ಘಟನೆಯ ನಂತರ, ಅವರ ಸಾವನ್ನು ತನಿಖೆ ಮಾಡಲು ಅಪರಾಧ ತನಿಖಾ ಇಲಾಖೆ (CID)ಗೆ ಹಸ್ತಾಂತರಿಸಲಾಗಿತ್ತು. ಮಹಾರಾಷ್ಟ್ರ ಸರ್ಕಾರ ಅವರ ಕುಟುಂಬಕ್ಕೆ ಪರಿಹಾರವನ್ನೂ ಘೋಷಿಸಿತ್ತು
ನಂತರ ಪೊಲೀಸರು ಈ ಹಿಂಸಾಚಾರಕ್ಕೆ ‘ಮಾವೋವಾದಿ ಪಿತೂರಿ’ ಕಾರಣ ಎಂದು ಹೇಳಿಕೊಂಡರು ಮತ್ತು ಬಂಧಿತ ಕಾರ್ಯಕರ್ತರು ಈ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು. ಈ ಪ್ರಕರಣವನ್ನು ನಂತರ ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ವರ್ಗಾಯಿಸಲಾಯಿತು. ಹಿಂಸಾಚಾರಕ್ಕೆ ಪ್ರಚೋದನೆ ನೀಡಲು ಮತ್ತು ಸರ್ಕಾರವನ್ನು ಉರುಳಿಸಲು ಪಿತೂರಿ ನಡೆಸಿದ ಆರೋಪವನ್ನು ಎನ್ಐಎ ಬಂಧಿತರ ಮೇಲೆ ಹೊರಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 16 ಕಾರ್ಯಕರ್ತರು, ವಕೀಲರು ಮತ್ತು ಶಿಕ್ಷಣ ತಜ್ಞರನ್ನು ಬಂಧಿಸಲಾಗಿತ್ತು. ಅವರಲ್ಲಿ ಕೆಲವರು ಬಿಡುಗಡೆಯಾಗಿದ್ದಾರೆ, ಆದರೆ ಇತರರು ಇನ್ನೂ ಬಂಧನದಲ್ಲಿದ್ದಾರೆ.
ವರವರ ರಾವ್ ಅವರಿಗೆ ಆಗಸ್ಟ್ 2022ರಲ್ಲಿ, ಅವರ ವಯಸ್ಸು ಮತ್ತು ಅನಾರೋಗ್ಯದ ಕಾರಣಗಳನ್ನು ಪರಿಗಣಿಸಿ, ಆಗಿನ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಅವರ ನೇತೃತ್ವದ ಪೀಠ ವೈದ್ಯಕೀಯ ಜಾಮೀನು ನೀಡಿತ್ತು. ಆದರೆ, ಈ ಜಾಮೀನು ಕೇವಲ ವೈದ್ಯಕೀಯ ಕಾರಣಗಳ ಮೇಲೆ ನೀಡಲಾಗಿದೆ, ಪ್ರಕರಣದ ಅರ್ಹತೆಗಳ ಆಧಾರದ ಮೇಲೆ ಅಲ್ಲ ಎಂದು ಸ್ಪಷ್ಟಪಡಿಸಿತ್ತು. ಆ ಆದೇಶದಲ್ಲಿ, ಅವರು ವಿಶೇಷ ಎನ್ಐಎ ನ್ಯಾಯಾಲಯದ ಅನುಮತಿಯಿಲ್ಲದೆ ಬೃಹತ್ ಮುಂಬೈಯನ್ನು ತೊರೆಯಬಾರದು ಎಂಬ ಷರತ್ತನ್ನು ವಿಧಿಸಲಾಗಿತ್ತು. ಅಂತಿಮವಾಗಿ, ಈ ಅರ್ಜಿಯನ್ನು ವಾಪಸ್ ಪಡೆಯಲಾಗಿದ್ದು, ಸುಪ್ರೀಂ ಕೋರ್ಟ್ ರಾವ್ ಅವರ ಜಾಮೀನು ಷರತ್ತುಗಳನ್ನು ಸಡಿಲಗೊಳಿಸಲು ನಿರಾಕರಿಸಿತು.
ರಾವ್ ಅವರು ನಾಲ್ಕು ವರ್ಷಗಳಿಂದ ಜಾಮೀನಿನ ಮೇಲೆ ಇದ್ದರೂ, ಬೃಹತ್ ಮುಂಬೈ ಪ್ರದೇಶವನ್ನು ತೊರೆಯುವ ಮೊದಲು ವಿಚಾರಣಾ ನ್ಯಾಯಾಲಯದಿಂದ ಅನುಮತಿ ಪಡೆಯುವುದನ್ನು ಮುಂದುವರಿಸಬೇಕೆಂದು ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣದ ವಿಚಾರಣೆಯು ಇನ್ನೂ ಆರಂಭಿಕ ಹಂತದಲ್ಲಿದ್ದು, ತನಿಖೆ ಮುಂದುವರಿದಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
