06/03/2026

Law Guide Kannada

Online Guide

ಸಿವಿಲ್ ಕೋರ್ಟ್ನಿಂದ ರೇರಾ ಆದೇಶ ಜಾರಿಗೊಳಿಸಲು ಸಾಧ್ಯವೇ..? ಮಹತ್ವದ ತೀರ್ಪು ಪ್ರಕಟಿಸಿದ ಹೈಕೋರ್ಟ್

ಬೆಂಗಳೂರು: ರಿಯಲ್ ಎಸ್ಟೇಟ್ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯದಿಂದ ರೇರಾ ಆದೇಶ ಜಾರಿಗೊಳಿಸಲು ಸಾಧ್ಯವಿಲ್ಲ. ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ‘ಕೆ-ರೇರಾ’ ಮತ್ತು ಅದರ ಮೇಲ್ಮನವಿ ಪ್ರಾಧಿಕಾರ ಹೊರಡಿಸಿರುವ ಆದೇಶಗಳನ್ನು ಸಿವಿಲ್ ನ್ಯಾಯಾಲಯಗಳಲ್ಲಿ ಜಾರಿ ಅರ್ಜಿ (ಎಕ್ಸಿಕ್ಯೂಷನ್ ಪೆಟಿಷನ್) ಸಲ್ಲಿಸುವ ಮೂಲಕ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಆದೇಶಗಳನ್ನು ಜಾರಿಗೊಳಿಸುವ ಅಧಿಕಾರ ಸಿವಿಲ್ ನ್ಯಾಯಾಲಯಗಳಿಗೆ ಇಲ್ಲಎಂದು ಪ್ರತಿಪಾದಿಸಿ ಸಿವಿಲ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ತಿರಸ್ಕರಿಸಿದ್ದ ಆದೇಶವನ್ನು ಪ್ರಶ್ನಿಸಿ ಮಂತ್ರಿ ಡೆವಲಪರ್ಸ್ ಪ್ರೈವೆಟ್ ಲಿಮಿಟೆಡ್ ಹೈಕೋರ್ಟ್ ಮೆಟ್ಟಿಲೇರಿ ಮೂರು ಅರ್ಜಿಗಳನ್ನು ಸಲ್ಲಿಸಿತ್ತು. ಈ ಅರ್ಜಿಗಳ್ಳನ್ನು ಮಾನ್ಯ ಮಾಡಿರುವ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ರೇರಾ ಕಾಯಿದೆಯ ಕಾನೂನು ಚೌಕಟ್ಟನ್ನು ಸಮಗ್ರವಾಗಿ ಪರಿಶೀಲಿಸಿರುವ ನ್ಯಾಯಾಲಯ, ”ಸೆಕ್ಷನ್ 40(1)ರಡಿ ರೇರಾ ವಿಧಿಸುವ ಪರಿಹಾರದ ಮೊತ್ತ ಅಥವಾ ದಂಡವನ್ನು ಬಡ್ಡಿ ಸಹಿತ ವಸೂಲು ಮಾಡಬಹುದು. ಅದನ್ನು ಭೂ ಕಂದಾಯ ಎಂದು ಪರಿಗಣಿಸಬಹುದೆಂದು ತಿಳಿಸಲಾಗಿದೆ. ಅಂತೆಯೇ, ಸೆಕ್ಷನ್ 79ರಡಿ ರೇರಾದ ಆದೇಶಗಳು ಮತ್ತು ದಾವೆಗಳನ್ನು ಪುರಸ್ಕರಿಸಲು ಸಿವಿಲ್ ಕೋರ್ಟ್ಗೆ ನಿರ್ಬಂಧವಿದೆ,” ಎಂದು ಆದೇಶಿಸಿದೆ.

ರೇರಾ ನಿಯಮ 26ರಲ್ಲಿ ಡಿಕ್ರಿ ಆದೇಶಗಳಂತೆ ರೇರಾ ಆದೇಶಗಳನ್ನೂ ಜಾರಿಗೊಳಿಸಬಹುದಾಗಿದೆ ಎಂದು ಹೇಳಲಾಗಿದೆ. ಆದರೆ, ರೇರಾ ತನ್ನ ಆದೇಶವನ್ನು ತಾನೇ ಜಾರಿಗೊಳಿಸಲು ಸಾಧ್ಯವಾಗದೇ ಇದ್ದಾಗ ಅಂತಹ ಅರ್ಜಿಗಳನ್ನು ಪ್ರಧಾನ ಸಿವಿಲ್ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಬಹುದೆಂದು ಹೇಳಲಾಗಿದೆ. ಆದರೆ, ರೇರಾದ ಆದೇಶಗಳು ಕಾನೂನು ವಿಶ್ಲೇಷಣೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ತಹಸೀಲ್ದಾರ್ ರೇರಾ ಆದೇಶಗಳನ್ನು ಜಾರಿಗೊಳಿಸಲು ಸಂಪೂರ್ಣ ವಿಫಲರಾದಾಗ ಮಾತ್ರ ಸಂಬಂಧಿಸಿದ ನ್ಯಾಯಾಲಯದ ಮೊರೆ ಹೋಗಲು ಅವಕಾಶಗಳಿವೆ,” ಎಂದು ನ್ಯಾಯಪೀಠ ತಿಳಿಸಿದೆ.

2023ರಲ್ಲಿ’ಕೆ-ರೇರಾ’ ಗೃಹ ಖರೀದಿದಾರರ ಪರ ಹಲವು ಆದೇಶಗಳನ್ನು ನೀಡಿತ್ತು. ಆ ಆದೇಶಗಳನ್ನು ಜಾರಿಗೊಳಿಸಲು ಗೃಹ ಖರೀದಿದಾರರು ಸಿವಿಲ್ ಕೋರ್ಟ್ನಲ್ಲಿ ಎಕ್ಸಿಕ್ಯೂಷನ್ ಪೆಟಿಷನ್ ಗಳನ್ನು ಸಲ್ಲಿಸಿ, ಆ ಆದೇಶಗಳನ್ನು ಜಾರಿಗೊಳಿಸುವಂತೆ ಮನವಿ ಮಾಡಿದ್ದರು ಆದರೆ, ಅದಕ್ಕೆ ತೀವ್ರ ಆಕ್ಷೇಪವೆತ್ತಿದ್ದ ಬಿಲ್ಡರ್, ‘ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ‘ಕೆ-ರೇರಾ’ ಮತ್ತು ಅದರ ಮೇಲ್ಮನವಿ ಪ್ರಾಧಿಕಾರ ಹೊರಡಿಸಿರುವ ಆದೇಶಗಳನ್ನು ಸಿವಿಲ್ ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗದು. ಸಿವಿಲ್ ಕೋರ್ಟ್ಗಳಿಗೆ ಸೆಕ್ಷನ್ 79ರಡಿ ಅಂತಹ ಅರ್ಜಿಗಳನ್ನು ಪುರಸ್ಕರಿಸುವ ಅಧಿಕಾರವಿಲ್ಲ. ಕರ್ನಾಟಕ ರೇರಾ ನಿಯಮ 26ರಡಿ ಹೇಗೆ ಆದೇಶಗಳನ್ನು ಜಾರಿಗೊಳಿಸಬಹುದೆಂಬುದು ಸ್ಪಷ್ಟವಾಗಿದೆ” ಎಂದು ವಾದಿಸಿದ್ದರು. ಆದರೆ, ಗೃಹ ಖರೀದಿದಾರರು, ‘ರೇರಾ ಆದೇಶಗಳು ಡಿಕ್ರಿ ಇದ್ದಂತೆ. ಹಾಗಾಗಿ, ಎಕ್ಸಿಕ್ಯೂಷನ್ ಅರ್ಜಿಗಳು ಸ್ವೀಕಾರಾರ್ಹ ಮತ್ತು ಅವುಗಳನ್ನು ಸಿವಿಲ್ ಕೋರ್ಟ್ಗಳು ಜಾರಿಗೊಳಿಸುವ ಅಧಿಕಾರವನ್ನು ಹೊಂದಿವೆ,” ಎಂದು ಪ್ರತಿಪಾದಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.