06/03/2026

Law Guide Kannada

Online Guide

ಪೋಷಕರ ಆದಾಯ ನಿಗದಿತ ಮಿತಿ ದಾಟಿದ್ರೆ ಮೀಸಲಾತಿ ಪತ್ರ ಪಡೆಯಲು ಅನರ್ಹ- ಹೈಕೋರ್ಟ್

ಬೆಂಗಳೂರು,ಡಿಸೆಂಬರ್,8,2025 (www.justkannada.in): ಪ್ರವರ್ಗ 2ಎ (ಹಿಂದುಳಿದ ವರ್ಗ) ಅಡಿ ಪೋಷಕರ ವಾರ್ಷಿಕ ಆದಾಯ 8 ಲಕ್ಷ ರೂ. ಮಿತಿ ಮೀರಿದರೆ ಅಭ್ಯರ್ಥಿ ಕೆನೆ ಪದರಕ್ಕೆ ಸೇರುತ್ತಾರೆ. ಹೀಗಾಗಿ ಅವರು ಮೀಸಲಾತಿ ಪತ್ರ ಪಡೆಯಲು ಅನರ್ಹರಾಗುತ್ತಾರೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ ಹುದ್ದೆಗೆ ಪ್ರವರ್ಗ 2ಎ (ಕುರುಬ ಜಾತಿ) ಅಡಿ ಆಯ್ಕೆಯಾಗಿದ್ದ ರಾಘವೇಂದ್ರ ಚಂದ್ರಣ್ಣನವರ್ ಎಂಬುವರಿಗೆ ಮೀಸಲಾತಿಗೆ ಅನ್ವಯಿಸುವ ಜಾತಿ ಸಿಂಧುತ್ವ ಪ್ರಮಾಣಪತ್ರ ವಿತರಿಸುವಂತೆ ಏಕಸದಸ್ಯ ನ್ಯಾಯಪೀಠ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಾತಿ, ಆದಾಯ ಪರಿಶೀಲನಾ ಮೇಲ್ಮನವಿ ಪ್ರಾಧಿಕಾರ ಮತ್ತು ಧಾರವಾಡ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿ ಅಧ್ಯಕ್ಷರು ಸಲ್ಲಿಸಿದ್ದ ರಿಟ್ ಮೇಲ್ಮನವಿ ಮತ್ತು ನ್ಯಾಯಾಂಗ ನಿಂದನಾ ಅರ್ಜಿಗಳ (ಡಬ್ಲ್ಯು.ಎ 301/2025 ಜಿ-ಎಂ ಸಿಸಿ ಮತ್ತು ಸಿಸಿಪಿ 74/2025) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠವು ಪ್ರವರ್ಗ 2ಎ (ಹಿಂದುಳಿದ ವರ್ಗ) ಅಡಿ ಪೋಷಕರ ಆದಾಯ ನಿಗದಿತ ಮಿತಿ ದಾಟಿದರೆ ಮೀಸಲಾತಿ ಪತ್ರ ಪಡೆಯಲು ಅನರ್ಹರಾಗುತ್ತಾರೆ ಎಂದು ತೀರ್ಪು ನೀಡಿದರು.

ಧಾರವಾಡದ ರಾಘವೇಂದ್ರ ಫಕ್ಕೀರಪ್ಪ ಚಂದ್ರಣ್ಣನವರ ಅವರು ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಿ ಪ್ರವರ್ಗ 2-ಎ (ಕುರುಬ ಜಾತಿ) ಅಡಿ ಆಯ್ಕೆಯಾಗಿದ್ದರು. ಅದರಂತೆ ಮೀಸಲಾತಿ ಪತ್ರಕ್ಕಾಗಿ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನೆ ಸಮಿತಿಗೆ ಅರ್ಜಿ ಸಲ್ಲಿಸಿದ್ದರು.

ಸಮಿತಿಯು, ‘ಅಭ್ಯರ್ಥಿಯ ಪೋಷಕರ ಆದಾಯವು ಪ್ರವರ್ಗ-2ಎಗೆ ನಿಗದಿಪಡಿಸಿರುವ ವಾರ್ಷಿಕ ಆದಾಯ ಮಿತಿಯಾದ ₹8 ಲಕ್ಷ ಮೀರುತ್ತಿರುವ ಕಾರಣ ಅವರು ಹಿಂದುಳಿದ ವರ್ಗಗಳಡಿ ಮೀಸಲಾತಿ ಪಡೆಯಲು ಅರ್ಹರಲ್ಲ’ ಎಂದು ಆದೇಶಿಸಿತ್ತು.

ಇದನ್ನು ಪ್ರಶ್ನಿಸಿ ರಾಘವೇಂದ್ರ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ 2024ರ ಅಕ್ಟೋಬರ್ ನಲ್ಲಿ, ‘ಅಭ್ಯರ್ಥಿಯು ಮೀಸಲಾತಿ ಸೌಲಭ್ಯ ಪಡೆಯಲು ಅರ್ಹ’ ಎಂದು ತೀರ್ಪು ನೀಡಿತ್ತು. ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ಸರ್ಕಾರ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು ‘ಅಭ್ಯರ್ಥಿಯ ಪೋಷಕರ ಸಂಬಳವೂ ಸೇರಿದಂತೆ ಎಲ್ಲ ಮೂಲಗಳ ಆದಾಯವನ್ನು ಪರಿಗಣಿಸಬೇಕು. ಒಂದು ವೇಳೆ ಆದಾಯವು ನಿಗದಿತ ಮಿತಿಯನ್ನು ದಾಟಿದ್ದರೆ, ಆದಾಯ ತೆರಿಗೆ ಪಾವತಿದಾರ ಆಗಿದ್ದರೆ ಆಗ ಆತನಿಗೆ ಕೆನೆ ಪದರ ನಿಯಮ ಅನ್ವಯ ಆಗುತ್ತದೆ. ಅಭ್ಯರ್ಥಿಯು ಪ್ರವರ್ಗ 2-ಎ ಅಡಿ ಮೀಸಲಾತಿಯ ಅಧಿಕಾರ ಹೊಂದುವ ಬೇಡಿಕೆ ಸಲ್ಲಿಸಲು ಅವಕಾಶ ಹೊಂದಿರುವುದಿಲ್ಲ’ ಎಂದು ತೀರ್ಪಿನಲ್ಲಿ ವಿವರಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.