06/03/2026

Law Guide Kannada

Online Guide

ಅಪ್ರಾಪ್ತ ಬಾಲಕಿ ಕಿಡ್ನಾಪ್, ಅತ್ಯಾಚಾರ ಕೇಸ್: ಆರೋಪಿ ಖುಲಾಸೆಗೊಳಿಸಿದ ಕೋರ್ಟ್

ಮಂಗಳೂರು: ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿ ಅತ್ಯಾಚಾರವೆಸಗಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಖುಲಾಸೆಗೊಳಿಸಿ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಪೋಕೋ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್. ಮಾನು ಅವರು ಈ ತೀರ್ಪು ಪ್ರಕಟಿಸಿದ್ದು, ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ವಿರುದ್ಧ ಹೊರಿಸಲಾದ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ತೀರ್ಮಾನಿಸಿ ಆರೋಪಿಯನ್ನ ಖುಲಾಸೆಗೊಳಿಸಿ ಆದೇಶಿಸಿದ್ದಾರೆ.

ಪ್ರಕರಣದ ಹಿನ್ನೆಲೆ..
2025ರ ಜುಲೈನಲ್ಲಿ ಆರೋಪಿಯು ಅಪ್ರಾಪ್ತ ಬಾಲಕಿಯನ್ನು ಮೂಲ್ಕಿ ಬಪ್ಪನಾಡು ದೇವಸ್ಥಾನದ ಬಳಿಯಿಂದ ತನ್ನ ಬೈಕ್ ನಲ್ಲಿ ಉಡುಪಿ ಜಿಲ್ಲೆಯ ಕಾಪು ಬೀಚ್ ಗೆ ಕರೆದುಕೊಂಡು ಅಲ್ಲಿನ ಅರಣ್ಯ ಪ್ರದೇಶದಲ್ಲಿ ಅತ್ಯಾಚಾರ ಎಸಗಿದ್ದ ಮತ್ತು ಈ ವಿಷಯವನ್ನು ಮನೆಯವರಿಗೆ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆಯನ್ನೂ ಹಾಕಿದ್ದ ಎಂಬ ಆರೋಪ ಕೇಳಿ ಬಂದಿತ್ತು.

ಘಟನೆಗೆ ಸಂಬಂಧಿಸಿದಂತೆ ದಿನಾಂಕ 23-07-2025ರಂದು ಆರೋಪಿ ವಿರುದ್ದ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರು ದಾಖಲಿಸಿಕೊಂಡ ಮೂಲ್ಕಿ ಪೊಲೀಸರು, ಆರೋಪಿಯನ್ನು ಅದೇ ದಿನ ಬಂಧಿಸಿದ್ದರು. ನೊಂದ ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ, ಆಕೆ ಗರ್ಭಿಣಿ ಎಂದು ಗೊತ್ತಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದ್ದರು. ಪ್ರಕರಣವನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಿದ ಪೋಕ್ಸೋ ನ್ಯಾಯಾಲಯ, ನೊಂದ ಬಾಲಕಿ ಮತ್ತು ಆಕೆಯ ಪೋಷಕರ ಹೇಳಿಕೆಯನ್ನು ದಾಖಲಿಸಿತ್ತು. ಪ್ರಾಸಿಕ್ಯೂಷನ್ ಪರವಾಗಿ ಎಂಟು ಮಂದಿಯನ್ನು ಸಾಕ್ಷಿ ವಿಚಾರಣೆ ನಡೆಸಿದ್ದು, 26 ದಾಖಲೆಗಳನ್ನು ಹಾಗೂ ಒಂದು ಮೊಬೈಲ್ನ್ನು ನಿಶಾನೆಯಾಗಿ ಗುರುತಿಸಿತ್ತು.

ಅಭಿಯೋಜನೆಯ ಪರವಾಗಿ ಸಾಕ್ಷಿ ನೀಡಿದ್ದ ನೊಂದ ಬಾಲಕಿ ಹಾಗೂ ಪೋಷಕರು ಅತ್ಯಾಚಾರ ನಡೆದಿದೆ ಎಂಬುದನ್ನು ಹೇಳಿದ್ದರು. ಸಾಕ್ಷಿಗಳೂ ಅಭಿಯೋಜನೆಗೆ ಪೂರಕವಾಗಿ ಸಾಕ್ಷಿ ನೀಡಿದ್ದರು. ಆದರೆ, ಬಲವಾದ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಆರೋಪಿ ಮೇಲೆ ಹೊರೆಸಲಾದ ಆರೋಪವನ್ನು ಸಾಬೀತುಪಡಿಸುವಲ್ಲಿ ಅಭಿಯೋಜನೆ ವಿಫಲವಾಗಿದೆ ಎಂದು ತೀರ್ಮಾನಿಸಿದ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್. ಮಾನು ಅವರು ಆರೋಪಿಯನ್ನು ಆರೋಪದಿಂದ ಖುಲಾಸೆಗೊಳಿಸಿ ತೀರ್ಪು ನೀಡಿದರು. ಆರೋಪಿಯ ಪರವಾಗಿ ಮಂಗಳೂರಿನ ನ್ಯಾಯವಾದಿ ಸುಕೇಶ್ ಕುಮಾರ್ ಶೆಟ್ಟಿ ವಾದ ಮಂಡಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.