06/03/2026

Law Guide Kannada

Online Guide

ಪತಿಯ ವೇತನ ವಿವರ ‘ವೈಯಕ್ತಿಕ’: ಪತ್ನಿಯ RTI ಅರ್ಜಿ ತಿರಸ್ಕರಿಸಿದ ಆದೇಶ ಎತ್ತಿಹಿಡಿದ ಹೈಕೋರ್ಟ್

ಜೈಪುರ: ತನ್ನ ಪತಿಗೆ ಪಾವತಿಸಲಾದ ವೇತನದ ವಿವರ ನೀಡಲು ಕೋರಿ ಪತ್ನಿ ಸಲ್ಲಿಸಿದ್ದ ಆರ್.ಟಿಐ ಅರ್ಜಿಯನ್ನು ತಿರಸ್ಕರಿಸಿದ ರಾಜ್ಯ ಮಾಹಿತಿ ಆಯೋಗದ ಆದೇಶವನ್ನು ರಾಜಸ್ಥಾನ ಹೈಕೋರ್ಟ್ ಎತ್ತಿ ಹಿಡಿದಿದೆ.

ಪತಿಯ ವೇತನ ವಿವರಗಳು ‘ವೈಯಕ್ತಿಕ ಮಾಹಿತಿ’ ಎಂಬುದಾಗಿ ಪರಿಗಣಿಸಿ ಪತ್ನಿಯ RTI ಅರ್ಜಿಯನ್ನು ತಿರಸ್ಕರಿಸಿದ ರಾಜ್ಯ ಮಾಹಿತಿ ಆಯೋಗದ ಕ್ರಮವನ್ನು ರಾಜಸ್ಥಾನ ಹೈಕೋರ್ಟ್ ನ ನ್ಯಾಯಮೂರ್ತಿ ಕುಲದೀಪ್ ಮಾಥುರ್ ಅವರ ಪೀಠವು ಸಮರ್ಥಿಸಿದೆ.

ಪತಿಯು ಕೆಲಸ ಮಾಡುತ್ತಿದ್ದ ಇಲಾಖೆಯಲ್ಲಿ ತನ್ನ ಪತಿ ಪಾವತಿಸಲಾದ ವೇತನದ ವಿವರಗಳನ್ನು ಕೇಳಿ ಪತ್ನಿಯು RTI ಅರ್ಜಿಯನ್ನು ಸಲ್ಲಿಸಿದ್ದರು. ನಿರ್ದಿಷ್ಟ ಅವಧಿಗೆ ತನ್ನ ಪತಿಗೆ ಪಾವತಿಸಲಾದ ವೇತನದ ಪೇಸ್ಲಿಪ್/ವಿವರಗಳ ಪ್ರತಿಗಳನ್ನು ಪಡೆಯಲು ಸಂಬಂಧಿತ ಇಲಾಖೆಗೆ RTI ಅರ್ಜಿ ಸಲ್ಲಿಸಿದ್ದರು.

ಆದರೆ ಕೇಳಲಾದ ಮಾಹಿತಿ ವೈಯಕ್ತಿಕ ಸ್ವಭಾವದ್ದಾಗಿದ್ದು ತೃತೀಯ ವ್ಯಕ್ತಿಗೆ ಸಂಬಂಧಿಸಿದ್ದು, RTI ಅರ್ಜಿಯಿಂದ ವಿನಾಯಿತಿ ಹೊಂದಿದೆ ಎಂಬ ಕಾರಣದಿಂದ ಆ ಅರ್ಜಿಯನ್ನು ರಾಜ್ಯ ಮಾಹಿತಿ ಆಯೋಗ ತಿರಸ್ಕರಿಸಿತು. ಈ ಹಿನ್ನೆಲೆಯಲ್ಲಿ ಪತ್ನಿಯು ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು, ಸಂಸ್ಥೆಯಲ್ಲಿರುವ ಉದ್ಯೋಗಿ ಅಥವಾ ಅಧಿಕಾರಿಯ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಮಾಹಿತಿ “ವೈಯಕ್ತಿಕ ಮಾಹಿತಿ” ವ್ಯಾಪ್ತಿಗೆ ಬರುತ್ತದೆ ಎಂದು ಅಭಿಪ್ರಾಯಪಟ್ಟಿತು.

ವಾದಗಳನ್ನು ಆಲಿಸಿದ ನಂತರ ನ್ಯಾಯಮೂರ್ತಿ ಕುಲದೀಪ್ ಮಾಥುರ್ ಅವರ ಪೀಠವು, ತೃತೀಯ ವ್ಯಕ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಅರ್ಜಿದಾರರಿಗೆ ನೀಡಲು ನಿರಾಕರಿಸಿದ ರಾಜ್ಯದ ಆದೇಶದಲ್ಲಿ ಯಾವುದೇ ಅಕ್ರಮವಿಲ್ಲ ಎಂದು ತೀರ್ಮಾನಿಸಿತು.

ಇಂತಹ ಮಾಹಿತಿ ಮುಖ್ಯವಾಗಿ ಉದ್ಯೋಗದಾತ ಮತ್ತು ಉದ್ಯೋಗಿಯ ನಡುವಿನ ವಿಷಯವಾಗಿದ್ದು, ಅದು ಸೇವಾ ನಿಯಮಗಳಿಂದ ನಿಯಂತ್ರಿತವಾಗಿರುತ್ತದೆ. ಯಾವುದೇ ಮೇಲ್ಮಟ್ಟದ ಸಾರ್ವಜನಿಕ ಹಿತಾಸಕ್ತಿ ಇಲ್ಲದ ಸಂದರ್ಭದಲ್ಲಿ ಇಂತಹ ಮಾಹಿತಿಯನ್ನು ಬಹಿರಂಗಪಡಿಸುವುದು ಯಾವುದೇ ಸಾರ್ವಜನಿಕ ಚಟುವಟಿಕೆ ಅಥವಾ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದುದಲ್ಲ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದ್ದು ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.