ಕಾನೂನು ಪದವಿಯೇ ಇಲ್ಲದೆ 5 ವರ್ಷ ಸೇವೆ: ನಕಲಿ ನ್ಯಾಯಮೂರ್ತಿಯ ಅಸಲಿಯತ್ತು ಬಯಲು, ಹುದ್ದೆಯಿಂದ ವಜಾ
ಇಸ್ಲಾಮಾಬಾದ್: ಕಾನೂನು ಪದವಿಯನ್ನೇ ಪಡೆಯದೇ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ನಕಲಿ ನ್ಯಾಯಾಧೀಶರೊಬ್ಬರ ಅಸಲಿಯತ್ತು ಕೊನೆಗೂ ಬಹಿರಂಗವಾಗಿದ್ದು ಇದೀಗ ಸೇವೆಯಿಂದ ವಜಾಗೊಳಿಸಲಾಗಿದೆ.
ಹೌದು ಕಾನೂನು ಪದವಿ ಹೊಂದಿಲ್ಲದಿದ್ದರೂ ವಕೀಲರಾಗಿ ವೃತ್ತಿ ನಡೆಸಿ, ನಂತರ ಉನ್ನತ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ವ್ಯಕ್ತಿಯೊಬ್ಬರ ಅಸಲಿಯತ್ತು ಕೊನೆಗೂ ಬಯಲಾಗಿದ್ದು, ಈಗ ಅವರನ್ನ ಸೇವೆಯಿಂದಲೇ ವಜಾಗೊಳಿಸಲಾಗಿದೆ.
ಪಾಕಿಸ್ತಾನದ ಇಸ್ಲಾಮಾಬಾದ್ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿದ್ದ ತಾರಿಕ್ ಮಹಮೂದ್ ಜಹಾಂಗೀರಿ ಎಂಬುವವರೇ ನಕಲಿ ಕಾನೂನು ಪದವಿ ಪಡೆದು ಐದು ವರ್ಷ ಸೇವೆ ಸಲ್ಲಿಸಿ ಈಗ ಹುದ್ದೆಯಿಂದ ವಜಾಗೊಂಡಿರುವುದು. 116 ಪುಟಗಳ ಸುದೀರ್ಘ ತೀರ್ಪಿನಲ್ಲಿ, ತಾರಿಕ್ ಮಹಮೂದ್ ಜಹಾಂಗೀರಿ ಅವರ ಕಾನೂನು ಪದವಿಯು ‘ಅಸಿಂಧು’ ಎಂದು ಇಸ್ಲಾಮಾಬಾದ್ ಹೈಕೋರ್ಟ್ನ್ಯಾಯಪೀಠ ಘೋಷಿಸಿದ್ದು, ಪದವಿಯೇ ನಕಲಿಯಾಗಿರುವುದರಿಂದ, ಹೈಕೋರ್ಟ್ ನ್ಯಾಯಾಧೀಶರಾಗಿ ಅವರ ನೇಮಕಾತಿಯು ಕಾನೂನುಬದ್ದವಾಗಿ ಅಮಾನ್ಯವಾಗಿದೆ ಎಂದು ಕೋರ್ಟ್ ತಿಳಿಸಿದೆ.
ಡಿಸೆಂಬರ್ 2020ರಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ಇವರನ್ನು, ಕಳೆದ ವರ್ಷದ ಸೆಪ್ಟೆಂಬರ್ ನಲ್ಲೇ ನ್ಯಾಯಾಂಗ ಕರ್ತವ್ಯಗಳಿಂದ ದೂರ ಇಡಲಾಗಿತ್ತು. ಈಗ ಅಂತಿಮ ತೀರ್ಪಿನ ಮೂಲಕ ಅವರನ್ನು ಅಧಿಕೃತವಾಗಿ ಹುದ್ದೆಯಿಂದ ಕಿತ್ತೊಗೆಯಲಾಗಿದೆ.
ಕರಾಚಿ ವಿಶ್ವವಿದ್ಯಾನಿಲಯದ ದಾಖಲೆಗಳ ಪ್ರಕಾರ, ಜಹಾಂಗೀರಿ ಅವರು ನೀಡಿದ್ದ ಎನ್ ರೋಲ್ ಮೆಂಟ್ ಸಂಖ್ಯೆ ಬೇರೊಬ್ಬ ವಿದ್ಯಾರ್ಥಿಯ ಹೆಸರಿನಲ್ಲಿತ್ತು. ಪದವಿ ಪ್ರಮಾಣಪತ್ರದಲ್ಲಿನ ಸಹಿ ಮತ್ತು ದಾಖಲೆಗಳು ತಾಳೆಯಾಗದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದಾಗ ಸತ್ಯ ಹೊರ ಬಿದ್ದಿದೆ. 1988ರಲ್ಲಿ ಜಹಾಂಗೀರಿ ಅವರು ನಕಲಿ ನೋಂದಣಿ ಸಂಖ್ಯೆ ಬಳಸಿ ಪರೀಕ್ಷೆಗೆ ಕುಳಿತಿದ್ದರು. ಆಗ ಪರೀಕ್ಷೆಯಲ್ಲಿ ನಕಲು ಮಾಡುತ್ತಾ ಸಿಕ್ಕಿಬಿದ್ದಿದ್ದರು, ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಅವರನ್ನು 1989ರಲ್ಲಿ ಮೂರು ವರ್ಷಗಳ ಕಾಲ ಪರೀಕ್ಷೆ ಬರೆಯದಂತೆ ನಿಷೇಧ ವಿಧಿಸಿತ್ತು. ಆದರೆ ಈ ವೇಳೆ ಶಿಕ್ಷೆಗೆ ಒಳಗಾಗುವ ಬದಲು, ಜಹಾಂಗೀರಿ ಮತ್ತೊಂದು ಅಡ್ಡದಾರಿ ಹಿಡಿದು ಮರು ವರ್ಷವೇ ‘ಇಮ್ಮಿಯಾಜ್ ಅಹ್ಮದ್’ ಎಂಬ ವಿದ್ಯಾರ್ಥಿಗೆ ಸೇರಿದ್ದ ನೋಂದಣಿ ಸಂಖ್ಯೆಯನ್ನು ಬಳಸಿ ‘ತಾರಿಕ್ ಜಹಾಂಗೀರಿ’ ಎಂಬ ಹೆಸರಿನಲ್ಲಿ ಪರೀಕ್ಷೆ ಬರೆದಿದ್ದರು. ಇನ್ನು ಇವರು ಓದಿದ್ದಾರೆನ್ನಲಾದ ‘ಗವರ್ನಮೆಂಟ್ ಇಸ್ಲಾಮಿಯಾ ಲಾ ಕಾಲೇಜ್’ನ ಪ್ರಾಂಶುಪಾಲರು ನೀಡಿದ ಮಾಹಿತಿಯಂತೆ, ಜಹಾಂಗೀರಿ ಎಂದಿಗೂ ತಮ್ಮ ಸಂಸ್ಥೆಯಲ್ಲಿ ಪ್ರವೇಶ ಪಡೆದಿರಲಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ತಮ್ಮ ವಿರುದ್ಧದ ಆರೋಪಗಳಿಗೆ ಸಮರ್ಥನೆ ನೀಡಲು ಜಹಾಂಗೀರಿ ಅವರಿಗೆ ಕೋರ್ಟ್ ಹಲವು ಅವಕಾಶಗಳನ್ನು ನೀಡಿತ್ತು. ಆದರೆ ದಾಖಲೆಗಳನ್ನು ನೀಡುವಲ್ಲಿ ಜಹಾಂಗೀರ್ ವಿಫಲರಾಗಿದ್ದು, ಅದರಂತೆ ಡಿಸೆಂಬರ್ 2025ರಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ ಇಸ್ಲಾಮಾಬಾದ್ ಹೈಕೋರ್ಟ್ನ ದ್ವಿಸದಸ್ಯ ಪೀಠವು, ಜಹಾಂಗೀರಿ ಅವರು ನ್ಯಾಯಾಧೀಶರಾಗಿ ಮುಂದುವರಿಯಲು ಅನರ್ಹರು ಎಂದು ತೀರ್ಪು ನೀಡಿತು. ಅಲ್ಲದೆ, ಅವರ ನೇಮಕಾತಿಯನ್ನು ‘ಅಕ್ರಮ’ ಎಂದು ಘೋಷಿಸಿ, ತಕ್ಷಣವೇ ಅಧಿಕಾರದಿಂದ ಕೆಳಗಿಳಿಯುವಂತೆ ಆದೇಶಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
