07/03/2026

Law Guide Kannada

Online Guide

ಸ್ಥಿರಾಸ್ತಿ ರೇಟ್ ಪರಿಷ್ಕರಣೆಗೆ ಸಿದ್ದತೆ: ಮತ್ತೆ ಮಾರ್ಗಸೂಚಿ ದರ ಏರಿಕೆ?

ಬೆಂಗಳೂರು: ರಾಜ್ಯ ಸರ್ಕಾರ ರಾಜ್ಯದಲ್ಲಿ ಸ್ಥಿರಾಸ್ತಿ ರೇಟ್ ಪರಿಷ್ಕರಣೆ ಮಾಡಲು ಸಿದ್ಧತೆ ನಡೆಸಿದ್ದು ಮೂರು ವರ್ಷದ ಬಳಿಕ ಮತ್ತೆ ಮಾರ್ಗಸೂಚಿ ದರ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

2023ರ ಅಕ್ಟೋಬರ್ ನಲ್ಲಿ ರಾಜ್ಯಾದ್ಯಂತ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಶೇ. 30ರಷ್ಟು ಹೆಚ್ಚಳ ಮಾಡಲಾಗಿತ್ತು. ಈಗ ಎರಡೂವರೆ ವರ್ಷಗಳ ಬಳಿಕ ಮತ್ತೆ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಎಪ್ರಿಲ್ 1ರಿಂದ ಅನ್ವಯವಾಗುವಂತೆ ಶೇ.15ರಿಂದ ಶೇ.20ರಷ್ಟು ಮಾರ್ಗಸೂಚಿ ದರ ಹೆಚ್ಚಳವಾಗುವ ನಿರೀಕ್ಷೆ ಇದೆ. ಇತ್ತೀಚೆಗೆ ನಿವೇಶನ, ಜಮೀನು ಮಾರುಕಟ್ಟೆ ಮೌಲ್ಯವು ಏರುಮುಖವಾಗಿದ್ದು, ಮಾರ್ಗಸೂಚಿ ದರಕ್ಕೆ ಪೂರಕವಾಗಿ ಮಾರುಕಟ್ಟೆ ದರ ನಿರ್ಧಾರವಾಗುತ್ತದೆ. ಈ ಪರಿಷ್ಕರಣೆಯಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 2,500 ಕೋಟಿ ರೂ. ಹೆಚ್ಚುವರಿ ಆದಾಯ ಸಂಗ್ರಹಿಸುವ ಗುರಿ ಹೊಂದಿದೆ. ರಾಜ್ಯ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಸರ್ಕಾರಕ್ಕೂ ಸವಾಲಿನ ಕೆಲಸವಾಗಿದ್ದು. ಹೀಗಾಗಿ ಸರ್ಕಾರ ಸಂಪನ್ಮೂಲ ಕ್ರೋಢೀಕರಣಕ್ಕೆ ವಿಶೇಷ ಒತ್ತು ನೀಡುತ್ತಿದೆ.

ಈ ಹಿನ್ನೆಲೆಯಲ್ಲಿ ಪರಿಷ್ಕರಣೆ ಏಪ್ರಿಲ್ ನಿಂದ ಅನ್ವಯವಾಗುವಂತೆ ನೂತನ ಮಾರ್ಗಸೂಚಿ ದರ ಜಾರಿಗೆ ಬರಲಿದೆ ಎನ್ನಲಾಗಿದೆ. ಪ್ರಸಕ್ತ 2025-26 ಆರ್ಥಿಕ ವರ್ಷದಲ್ಲಿ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಮೂಲದಿಂದ ಸರಕಾರ 28,000 ಕೋಟಿ ರೂ. ಆದಾಯ ನಿರೀಕ್ಷಿಸಿದ್ದು, 25,000 ಕೋಟಿ ರೂ. ಮಾತ್ರ ಸಂಗ್ರಹವಾಗುವ ನಿರೀಕ್ಷೆ ಇದೆ. ಅಂದರೆ ವಾರ್ಷಿಕ ಗುರಿಯಲ್ಲಿ 3000 ಕೋಟಿ ರೂ. ಖೋತಾ ಆಗುವ ಸಾಧ್ಯತೆ ಕಾಣುತ್ತಿದೆ.

ರಾಜ್ಯಾದ್ಯಂತ 259 ಉಪ ನೋಂದಣಿ ಕಚೇರಿಗಳಿದ್ದು ಅದರಲ್ಲಿ 43 ಕಚೇರಿಗಳು ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿವೆ. ರಾಜ್ಯದಲ್ಲಿ ವಾರ್ಷಿಕವಾಗಿ 22ರಿಂದ 24 ಲಕ್ಷ ಸ್ಥಿರಾಸ್ತಿ ನೋಂದಣಿ, ಇತರೆ ದಸ್ತಾವೇಜು ಪ್ರಕ್ರಿಯೆಗಳಾಗುತ್ತಿದ್ದು, ಅದರಲ್ಲಿ ಶೇ.60ರಷ್ಟು ನೋಂದಣಿ, ದಸ್ತಾವೇಜುಗಳು ಬೆಂಗಳೂರಿನ ಕಚೇರಿಗಳಲ್ಲಿ ನಡೆಯುತ್ತಿವೆ. ಮಾರ್ಗಸೂಚಿ ದರ ಪರಿಷ್ಕರಣೆಯಿಂದ ಸ್ಥಿರಾಸ್ತಿಗಳ ಮೌಲ್ಯವೂ ಪರಿಷ್ಕರಣೆಯಾಗಲಿದೆ ಎಂದು ತಿಳಿಸಿವೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.