23/04/2026

Law Guide Kannada

Online Guide

ITI, ಡಿಪ್ಲೊಮಾ ಪಡೆದ ವಿದ್ಯಾರ್ಥಿಗಳೂ ಎಲ್ಎಲ್ ಬಿಗೆ ಅರ್ಹರು – ಹೈಕೋರ್ಟ್

ಬೆಂಗಳೂರು: ಪಿಯುಸಿ ಮಾಡಿಲ್ಲ ಎಂಬ ಕಾರಣಕ್ಕೆ ಎಲ್ ಎಲ್ ಬಿ ಪದವಿಗೆ ಸೇರಲು ಅರ್ಹರಲ್ಲ ಎಂದು ನಿರಾಕರಿಸುವಂತಿಲ್ಲ ಐಟಿಐ, ಡಿಪ್ಲೊಮಾ ಪಡೆದ ವಿದ್ಯಾರ್ಥಿಗಳೂ ಸಹ ಎಲ್ ಎಲ್ ಬಿಗೆ ಸೇರಲು ಅರ್ಹರು ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟ ತೀರ್ಪು ನೀಡಿದೆ.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ (ಕೆಎಸ್ಎಲ್ಯು) ವಿರುದ್ಧ ಮೈಸೂರಿನ ಜಾವೇದ್ ಖಾನ್ ಎಂಬುವರು ಸೇರಿ 9 ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್, ಐಟಿಐ, ಡಿಪ್ಲೊಮಾ ಅಥವಾ ಉದ್ಯೋಗ ಆಧಾರಿತ ಕೋರ್ಸ್ ಗಳನ್ನು (ಜೆಒಸಿ) ಪೂರೈಸಿರುವ ವಿದ್ಯಾರ್ಥಿಗಳು ಎಲ್ ಎಲ್ ಬಿ ಪದವಿಗೆ ಸೇರಲು ಅರ್ಹರು ಎಂದು ತಿಳಿಸಿದೆ.

ಈ ಕೋರ್ಸ್ಗಳನ್ನು ಪೂರೈಸಿದ್ದ ವಿದ್ಯಾರ್ಥಿಗಳು ರಾಜ್ಯದ ವಿವಿಧ ಕಾನೂನು ಕಾಲೇಜುಗಳಲ್ಲಿ ಎಲ್ ಎಲ್ಬಿಗೆ ಪ್ರವೇಶ ಪಡೆದಿದ್ದರು. ಇವರು ಪಿಯುಸಿ ಶಿಕ್ಷಣ ಪಡೆಯದ ಕಾರಣ ಪ್ರವೇಶಾತಿಯನ್ನು ಅಸಿಂಧು ಎಂದು ಕೆಎಸ್ ಎಲ್ಯು ಘೋಷಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕೆಎಸ್ ಎಲ್ ಯು ಘೋಷಣೆ ವಿರುದ್ದ ದ್ಧ ವಿದ್ಯಾರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಇದರಲ್ಲಿ 3 ವರ್ಷದ ಎಲ್ಎಲ್ ಬಿ ಮತ್ತು 5 ವರ್ಷದ ಇಂಟಿಗ್ರೇಟೆಡ್ ಎಲ್ಎಲ್ ಬಿ ಕೋರ್ಸ್ಗಳಿಗೆ ಸಂಬಂಧಿಸಿದ ಅರ್ಜಿಗಳು ಸೇರಿತ್ತು. ಅರ್ಜಿದಾರರ ಪರವಾಗಿ ನ್ಯಾಯವಾದಿ ನಮನ್ ವಂಕ್ಖಾರಿ ವಾದಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಏಕಸದಸ್ಯ ಪೀಠವು, ವಿದ್ಯಾರ್ಥಿಯು ಐಟಿಐ ಆಧಾರದ ಮೇಲೆ ಪದವಿ ಪಡೆಯಲು ಅರ್ಹನಾಗಿದ್ದರೆ , ಅದೇ ಆಧಾರದಲ್ಲಿ ಎಲ್ ಎಲ್ಬಿ ಪ್ರವೇಶ ನಿರಾಕರಿಸಲು ಸಾಧ್ಯವಿಲ್ಲ. ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಲೀಗಲ್ ಎಜುಕೇಶನ್ ರೂಲ್ಸ್ ಅನ್ವಯ ಜೆಒಸಿ ಅಥವಾ ಐಟಿಐ ಕೋರ್ಸ್ ಗಳನ್ನು ಸೀನಿಯರ್ ಸ್ಕೂಲ್ ಸರ್ಟಿಫಿಕೇಟ್ (10+2) ಕೋರ್ಸ್ಗಳಿಗೆ ಸಮಾನ ಎಂದು ಪರಿಗಣಿಸಬೇಕು ಎಂದು ನಿರ್ದೇಶಿಸಿತು.

ಜೆಒಸಿ, ಐಟಿಐ ಅಥವಾ ಡಿಪ್ಲೊಮಾ ಕೋರ್ಸ್ಗಳು ಪಿಯುಸಿಗೆ ಸಮಾನವಾದ ಸೀನಿಯರ್ ಸ್ಕೂಲ್ ಸರ್ಟಿಫಿಕೇಟ್ ಎಂದು ಪರಿಗಣಿಸಲ್ಪಡುವುದರಿಂದ, ಈ ವಿದ್ಯಾರ್ಥಿಗಳು ನೇರವಾಗಿ 5 ವರ್ಷದ ಕೋರ್ಸ್ಗೆ ಸೇರಲು ಕಾನೂನಾತ್ಮಕ ಅಡ್ಡಿಯಿಲ್ಲ. ಅಭ್ಯರ್ಥಿಗಳು ಜೆಒಸಿ, ಐಟಿಐ ಅಥವಾ ಡಿಪ್ಲೊಮಾ ಆಧಾರದ ಮೇಲೆ ಪದವಿ ಪಡೆದಿದ್ದರೆ, ಆ ಪದವಿಯೇ 3 ವರ್ಷದ ಎಲ್ಎಲ್ಬಿ ಕೋರ್ಸ್ಗೆ ಸೇರಲು ಅರ್ಹತೆಯಾಗುತ್ತದೆ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.

ಹಾಗೆಯೇ ನ್ಯಾಯಾಲಯದ ಮಧ್ಯಂತರ ಆದೇಶದ ಮೇರೆಗೆ ಜನವರಿ ಮತ್ತು ಫೆಬ್ರವರಿಯಲ್ಲಿ ನಡೆದ ಮೊದಲ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶವನ್ನು ತಕ್ಷಣವೇ ಪ್ರಕಟಿಸುವಂತೆ ಕೆಎಸ್ಎಲ್ ಯುಗೆ ನ್ಯಾಯಪೀಠ ಸೂಚನೆ ನೀಡಿತು. ಅಲ್ಲದೆ, ಮುಂದಿನ ಸೆಮಿಸ್ಟರ್ ಗಳಿಗೆ ಮುಂದುವರಿಯಲು ವಿದ್ಯಾರ್ಥಿಗಳಿಗೆ ಅನುಮತಿ ನೀಡಬೇಕು ಎಂದು ಆದೇಶಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.