ಸುಪ್ರೀಂ ನ್ಯಾಯಮೂರ್ತಿಗಳ ಸಂಖ್ಯೆ 37ಕ್ಕೆ ಏರಿಕೆಗೆ ಸುಗ್ರೀವಾಜ್ಞೆ: ರಾಷ್ಟ್ರಪತಿಗಳಿಂದ ಅನುಮೋದನೆ
ನವದೆಹಲಿ: ಸುಪ್ರೀಂ ಕೋರ್ಟ್ನ ಹೆಚ್ಚುತ್ತಿರುವ ಕೆಲಸದ ಹೊರೆ ಮತ್ತು ಬಾಕಿ ಇರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು 33ರಿಂದ 37ಕ್ಕೆ (ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಹೊರತುಪಡಿಸಿ) ತ್ವರಿತವಾಗಿ ಹೆಚ್ಚಿಸಲು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಈ ಕುರಿತು ಸಂಸತ್ತಿನಲ್ಲಿ ಮಸೂದೆ ಮಂಡಿಸಲು ಕೇಂದ್ರ ಸಚಿವ ಸಂಪುಟ ಮೇ 5ರಂದು ನಿರ್ಧಾರ ತೆಗೆದುಕೊಂಡಿತ್ತು. ಅದರ ಬೆನ್ನಲ್ಲೇ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ‘ಸುಪ್ರೀಂ ಕೋರ್ಟ್ (ನ್ಯಾಯಮೂರ್ತಿಗಳ ಸಂಖ್ಯೆ) ತಿದ್ದುಪಡಿ ಸುಗ್ರೀವಾಜ್ಞೆ-2026’ಕ್ಕೆ ರಾಷ್ಟ್ರಪತಿ ದೌಪದಿ ಮುರ್ಮು ಅವರು ಶನಿವಾರ ಸಹಿ ಮಾಡಿದ್ದಾರೆ. ಈ ಮೂಲಕ ಅನುಮೋದನೆ ನೀಡಿದ್ದಾರೆ.
ಆದಾಗ್ಯೂ, ಆರು ತಿಂಗಳೊಳಗೆ ಈ ಸುಗ್ರೀವಾಜ್ಞೆ ಸಂಸತ್ತಿನಲ್ಲಿ ಅಂಗೀಕಾರ ಪಡೆಯಬೇಕು. ಇಲ್ಲದಿದ್ದರೆ ಅದು ರದ್ದಾಗುತ್ತದೆ. ಜುಲೈನಲ್ಲಿ ಮಳೆಗಾಲದ ಅಧಿವೇಶನ ನಡೆಯುವ ಸಾಧ್ಯತೆಯಿದೆ. ನ್ಯಾಯಮೂರ್ತಿಗಳ ಸಂಖ್ಯೆಯ ಹೆಚ್ಚಳವು ತ್ವರಿತ ಮತ್ತು ಪರಿಣಾಮಕಾರಿ ನ್ಯಾಯವನ್ನು ಖಾತರಿಪಡಿಸುತ್ತದೆ ಎಂದು ಸರ್ಕಾರ ಈ ಹಿಂದೆ ಹೇಳಿತ್ತು.
ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ಸಂಖ್ಯೆ 37 ಕ್ಕೆ ಹೆಚ್ಚಿಸುವ ಕೇಂದ್ರ ಸಚಿವ ಸಂಪುಟದ ನಿರ್ಧಾರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದಿಸಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ತಿಳಿಸಿದ್ದಾರೆ.
‘ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ಸುಗ್ರೀವಾಜ್ಞೆ, 2026 ಅನ್ನು ಪ್ರಕಟಿಸುವ ಮೂಲಕ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ಸಂಖ್ಯೆಯನ್ನು 33 ರಿಂದ 37 ಕ್ಕೆ (ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಹೊರತುಪಡಿಸಿ) ಹೆಚ್ಚಿಸಲು ಸಂತೋಷಪಡುತ್ತಾರೆ, ಇದು ‘ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ಕಾಯ್ದೆ, 1956’ ಅನ್ನು ಮತ್ತಷ್ಟು ತಿದ್ದುಪಡಿ ಮಾಡಿದೆ ಎಂದು ಸಚಿವರು ಎಕ್ಸ್ನಲ್ಲಿ ಪೋಸ್ಟ್ ಮಾಡಿ ತಿಳಿಸಿದ್ದಾರೆ.
ಸಂವಿಧಾನವು ಒಬ್ಬ ಮುಖ್ಯ ನ್ಯಾಯಮೂರ್ತಿ ಮತ್ತು ಇತರ ಏಳು ನ್ಯಾಯಮೂರ್ತಿಗಳಿಗೆ ಅವಕಾಶ ನೀಡಿದ್ದರೂ, ‘ಸುಪ್ರೀಂ ಕೋರ್ಟ್ (ನ್ಯಾಯಮೂರ್ತಿಗಳ ಸಂಖ್ಯೆ) ಕಾಯ್ದೆ-1956’ ನ್ಯಾಯಮೂರ್ತಿಗಳ ಸಂಖ್ಯೆಯನ್ನು 10ಕ್ಕೇರಿಸಲು ಅವಕಾಶ ಮಾಡಿಕೊಟ್ಟಿತು. ಈ ಕಾಯ್ದೆಗೆ ಹಲವು ಬಾರಿ ತಿದ್ದುಪಡಿಗಳಾಗಿದ್ದು, 1960ರಲ್ಲಿ ನ್ಯಾಯಮೂರ್ತಿಗಳ ಸಂಖ್ಯೆ 13ಕ್ಕೆ, 1977ರಲ್ಲಿ 17ಕ್ಕೆ, 1986ರಲ್ಲಿ 25ಕ್ಕೆ, 2008ರಲ್ಲಿ 30ಕ್ಕೆ ಹಾಗೂ 2019ರಲ್ಲಿ ತಿದ್ದುಪಡಿ ಮೂಲಕ ನ್ಯಾಯಮೂರ್ತಿಗಳ ಸಂಖ್ಯೆಯನ್ನು 33ಕ್ಕೆ ಹೆಚ್ಚಿಸಲಾಯಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
