19/06/2026

Law Guide Kannada

Online Guide

ತಾತನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಹಕ್ಕಿಲ್ಲ: ಮಹತ್ವದ ತೀರ್ಪು ಪ್ರಕಟಿಸಿದ ಹೈಕೋರ್ಟ್

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆಸ್ತಿ ವಿಚಾರದಲ್ಲಿ ಅಣ್ಣ-ತಮ್ಮಂದಿರ ನಡುವೆ, ಸಂಬಂಧಿಕರ ನಡುವೆ ಗಲಾಟೆ, ಗದ್ದಲಗಳೇ ನಡೆಯುತ್ತದೆ. ಯಾರ ಆಸ್ತಿ ಯಾರಿಗೆ ಸೇರಿದ್ದು, ಎಲ್ಲದರಲ್ಲೂ ನಮಗೂ ಪಾಲು ಬೇಕು ಹೀಗೆ ಸಂಘರ್ಷಗಳು ಹಿಂದಿನಿಂದಲೂ ಸರ್ವೇ ಸಾಮಾನ್ಯ ಆಗಿದೆ. ಈ ಮಧ್ಯೆ ಇದೀಗ ತಾತನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಪಾಲು ಇದೆಯಾ?, ಇಲ್ವಾ ಎಂಬ ಗೊಂದಲಗಳಿಗೆ ಉತ್ತರವಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪೊಂದನ್ನು ಪ್ರಕಟಿಸಿದೆ.

ಹೌದು, ತಾತನಿಂದ ಬಂದ ಆಸ್ತಿ ಅದು ತಂದೆಯ ವೈಯಕ್ತಿಕ ಆಸ್ತಿ. ಅದರಲ್ಲಿ ಮೊಮ್ಮಕ್ಕಳಿಗೆ ಹಕ್ಕಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಅಮೆರಿಕದಲ್ಲಿ ನೆಲೆಸಿರುವ ಉಷಾ ಎನ್.ಸ್ವಾಮಿ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಡಿ.ಕೆ.ಸಿಂಗ್ ಅವರ ನೇತೃತ್ವದ ವಿಭಾಗೀಯ ಪೀಠವು, ತಾತ ತನ್ನ ಜೀವಿತಾವಧಿಯಲ್ಲಿ ಸ್ವಂತವಾಗಿ ಸಂಪಾದಿಸಿದ ಆಸ್ತಿಯು, ವಿಭಜನೆ ನಂತರ ತಂದೆಯ ಕೈಸೇರಿದರೂ ಅದು ತಂದೆಯ ವೈಯಕ್ತಿಕ ಆಸ್ತಿಯಾಗುತ್ತದೆಯೇ ಹೊರತು ಹಿಂದೂ ಅವಿಭಕ್ತ ಕುಟುಂಬದ ಆಸ್ತಿಯಾಗುವುದಿಲ್ಲ, ಈ ರೀತಿ ವಿಭಜನೆಯಾದ ಆಸ್ತಿಯಲ್ಲಿ ಪಾಲು ಕೇಳಲು ಮೊಮ್ಮಗಳಿಗೆ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಆಸ್ತಿಗಳು ಹಿಂದೂ ಅವಿಭಕ್ತ ಕುಟುಂಬದ ಆಸ್ತಿಗಳಾಗಿದ್ದವು ಎಂಬುದನ್ನು ಸಾಬೀತುಪಡಿಸಲು ಮೇಲ್ಮನವಿದಾರೆ ಉಷಾ ಅವರು ಅಗತ್ಯ ಸಾಕ್ಷ್ಯಗಳನ್ನು ಒದಗಿಸಿಲ್ಲ. ತಾತನ ಸ್ವಯಂ ಸಂಪಾದಿತ ಆಸ್ತಿಗಳನ್ನು ಜಂಟಿ ಕುಟುಂಬದ ಆಸ್ತಿಗಳೆಂದು ಹೇಳಿ, ತಾನು ಭಾಗ ಪಡೆಯಬಹುದು ಎಂದು ವಾದಿಸಲು ಸಾಧ್ಯವಿಲ್ಲ. ಆದ್ದರಿಂದ ಅವರಿಗೆ ಈ ಆಸ್ತಿಗಳಲ್ಲಿ ಯಾವುದೇ ಕಾನೂನಾತ್ಮಕ ಹಕ್ಕು ಇರುವುದಿಲ್ಲ. ಹಾಗೆಯೇ ತಂದೆಗೆ ತನ್ನ ಸ್ವಯಾರ್ಜಿತ ಆಸ್ತಿಯನ್ನು ಯಾರಿಗಾದರೂ ವಿಲೇವಾರಿ ಮಾಡುವ ಸಂಪೂರ್ಣ ಹಕ್ಕಿರುತ್ತದೆ ಎಂದು ಎಂದು ನ್ಯಾಯಪೀಠ ತಿಳಿಸಿದೆ.

ಉಷಾ ಅವರು ಉಲ್ಲೇಖಿಸಿರುವ ಆಸ್ತಿಗಳನ್ನು ಆಕೆಯ ತಾತ, ಅಂದರೆ ತಂದೆಯ ತಂದೆ ಸ್ವಂತವಾಗಿ ಸಂಪಾದಿಸಿದ್ದರು ಎಂಬುದು ದಾಖಲೆಗಳಿಂದ ಗೊತ್ತಾಗಲಿದೆ. ಈ ಆಸ್ತಿಯನ್ನು ಅವರ ತಾತ, ಅವರ ಮಕ್ಕಳಿಗೆ ಕೌಟುಂಬಿಕ ಒಪ್ಪಂದದ ಮೂಲಕ ಆಸ್ತಿ ಹಂಚಿಕೆ ಮಾಡಿದ್ದಾರೆ. ತಾತನ ಸ್ವಯಾರ್ಜಿತ ಆಸ್ತಿ ಭಾಗವಾಗಿ ತಂದೆಗೆ ಬಂದಾಗ, ಅದು ಆ ತಂದೆಯ ವೈಯಕ್ತಿಕ ಆಸ್ತಿಯಾಗುತ್ತದೆ. ಆದರೆ, ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ
1979ರಲ್ಲಿ ವೈದ್ಯರಾಗಿರುವ ಜವರಯ್ಯ ಎನ್ .ಸ್ವಾಮಿ ಎಂಬುವರನ್ನು ಉಷಾ ಎನ್. ಸ್ವಾಮಿ ಅವರು ವಿವಾಹವಾಗಿ ತನ್ನ ಪತಿಯೊಂದಿಗೆ ಅಮೆರಿಕದಲ್ಲಿ ವಾಸಿಸುತ್ತಿದ್ದರು. ಈ ಮಧ್ಯೆ ಅವರ ಗಮನಕ್ಕೆ ಬಾರದೆ ಕುಟುಂಬಕ್ಕೆ ಸೇರಿದ 10 ಎಕರೆ ಜಮೀನನ್ನು ಪೋಷಕರು ಮಾರಾಟ ಮಾಡಿದ್ದಾರೆ. ತಂದೆಗೆ ಸೇರಿದ ಪಿತ್ರಾರ್ಜಿತ ಆಸ್ತಿಯಲ್ಲಿ ಕಲ್ಲುಗಣಿಗಾರಿಕೆ ನಡೆಸಿ ಲಾಭ ಗಳಿಸಿದ್ದು ಈ ಲಾಭಾಂಶದ ಹಣದಲ್ಲಿ ಇತರೆ ಆಸ್ತಿಗಳನ್ನು ಗಳಿಸಿದ್ದಾರೆ. ಈ ಮೂಲ ಆಸ್ತಿಗಳು ಪೂರ್ವಜರಿಂದ ಬಂದ ಜಂಟಿ ಕುಟುಂಬದ ಆಸ್ತಿಗಳಾಗಿದ್ದು, ತಮಗೆ ಪಾಲು ಸಿಗಬೇಕು. ಈ ಎಲ್ಲ ಆಸ್ತಿಗಳು ಮತ್ತು ಬ್ಯಾಂಕ್ ಠೇವಣಿಯಲ್ಲಿಯೂ ತಾನೂ ಭಾಗ ಪಡೆಯುವುದಕ್ಕೆ ಅಧಿಕಾರವಿದೆ. ಆದ್ದರಿಂದ ಆಸ್ತಿಯಲ್ಲಿ ತನಗೆ ಭಾಗ ನೀಡಲು ನಿರ್ದೇಶನ ನೀಡಬೇಕು ಎಂದು ಕೋರಿ ಅಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅಧೀನ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಉಷಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಗೆ ಅಕ್ಷೇಪಿಸಿದ್ದ ಪೋಷಕರು, ಅರ್ಜಿದಾರರು ತಿಳಿಸಿರುವ ಆಸ್ತಿಗಳು ಪೂರ್ವಜರಿಂದ ಬಂದಿಲ್ಲ. ಅಲ್ಲದೆ, ಹಿಂದೂ ಅವಿಭಜಿತ ಕುಟುಂಬಕ್ಕೆ ಸೇರಿದ ಆಸ್ತಿಯಲ್ಲ. ಆದ್ದರಿಂದ ಮೇಲ್ಮನವಿ ವಜಾಗೊಳಿಸಬೇಕು ಎಂದು ಮನವಿ ಮಾಡಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.