25/06/2026

Law Guide Kannada

Online Guide

ಸರಕಾರಿ ನೌಕರರಿಗೆ ಗುಡ್ ನ್ಯೂಸ್: ನಗದು ರಹಿತ ಆರೋಗ್ಯ ತಪಾಸಣೆಗೆ ಅವಕಾಶ

ಬೆಂಗಳೂರು: ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಟ್ಟ, 40 ವರ್ಷ ವಯಸ್ಸು ದಾಟಿದ ಸರಕಾರಿ ನೌಕರರಿಗೆ ಆರೋಗ್ಯ ಇಲಾಖೆಯು ಸಿಹಿಸುದ್ದಿ ನೀಡಿದ್ದು, ವಾರ್ಷಿಕ ವೈದ್ಯಕೀಯ ತಪಾಸಣೆ ಯೋಜನೆಯಡಿ ವರ್ಷದಲ್ಲಿ ಒಂದು ಬಾರಿ ನಗದು ರಹಿತ ವೈದ್ಯಕೀಯ ತಪಾಸಣೆ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದೆ.

ನೌಕರರು ರಕ್ತದೊತ್ತಡ, ಮಧುಮೇಹ ಸೇರಿ ಸಾಮಾನ್ಯ ಪರೀಕ್ಷೆ, ನೇತ್ರ ತಪಾಸಣೆ, ಹೃದಯ, ಶ್ವಾಸಕೋಶ, ಕರುಳು, ಕಿಡ್ನಿ, ದಂತ ಸೇರಿ ಅಗತ್ಯ ಪರೀಕ್ಷೆಗಳು, ಇಎನ್ ಟಿ, ಕ್ಯಾನ್ಸರ್ ಸೇರಿ ಅಗತ್ಯ ಪರೀಕ್ಷೆ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಸರಕಾರಿ ಆಸ್ಪತ್ರೆ (ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳು ಸೇರಿದಂತೆ), ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ ನೋಂದಣಿಯಾದ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ತಪಾಸಣೆ ಮಾಡಿಸಿಕೊಳ್ಳಬೇಕಿದ್ದು, ಒಂದೇ ಸಂಸ್ಥೆಯಲ್ಲಿ ಒಂದೇ ಕ್ಲೈಮ್ ಲ್ಲಿ ಪರೀಕ್ಷೆಗೆ ಒಳಪಡಬೇಕು. ಇದಕ್ಕಾಗಿ ಸರಕಾರ ನಿಗದಿಪಡಿಸಿರುವ ವಾರ್ಷಿಕ ವೈದ್ಯಕೀಯ ದರ (ಪುರುಷರಿಗೆ 2 ಸಾವಿರ/ಮಹಿಳೆಯರಿಗೆ 2,200) ಮಿತಿಗೊಳಪಟ್ಟು ಮಂಜೂರಾತಿ ನೀಡುವಂತೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಗೆ ಸೂಚಿಸಲಾಗಿದೆ.

ಒತ್ತಡ, ಕಚೇರಿ ಕೆಲಸದ ಭ್ರಮೆ ಹಾಗೂ ವ್ಯಾಯಾಮದ ಕೊರತೆಯಿಂದಾಗಿ 40 ವರ್ಷ ದಾಟಿದ ಸರ್ಕಾರಿ ನೌಕರರು ಸಾಮಾನ್ಯವಾಗಿ ಮಧುಮೇಹ, ರಕ್ತದೊತ್ತಡ (ಬಿಪಿ), ಹೃದಯಾಘಾತದಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಹೀಗಾಗಿ, ಆರಂಭಿಕ ಹಂತದಲ್ಲಿಯೇ ಕಾಯಿಲೆಗಳನ್ನು ಪತ್ತೆಹಚ್ಚಿ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ನೌಕರರ ಆರೋಗ್ಯವನ್ನು ರಕ್ಷಿಸುವ ಸದುದ್ದೇಶದಿಂದ ಈ ವಾರ್ಷಿಕ ಆರೋಗ್ಯ ತಪಾಸಣೆಯನ್ನು ಜಾರಿಗೆ ತರಲಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.