08/07/2026

Law Guide Kannada

Online Guide

ಕೋರ್ಟ್ ನಲ್ಲಿ ಸಿಬ್ಬಂದಿಗಳಿಗೆ ‘ಜಿಯೋ ಫೆನ್ಸಿಂಗ್ ಹಾಜರಾತಿ’ ಜಾರಿ

ಮಂಗಳೂರು: ನ್ಯಾಯಾಂಗ ಆಡಳಿತದಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯನ್ನು ವಿಸ್ತರಿಸುವ ಹಾಗೂ ಸಿಬ್ಬಂದಿಯ ಹಾಜರಾತಿ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ, ವಿಶ್ವಾಸಾರ್ಹ ಮತ್ತು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ‘ಕರ್ತವ್ಯ (KAAMS)’ ಮೊಬೈಲ್ ಅಪ್ಲಿಕೇಶನ್ ಮಹತ್ವದ ಹೆಜ್ಜೆಯಾಗಿದೆ. ನ್ಯಾಯಾಲಯಗಳಲ್ಲಿ ‘ಕರ್ತವ್ಯ (KAAMS)’ ಮೊಬೈಲ್ ಆಪ್ ಮೂಲಕ ಬಯೋಮೆಟ್ರಿಕ್ ಹಾಜರಾತಿ ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ.

ಈ ನಡುವೆ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಂಗ ಘಟಕದ ಎಲ್ಲಾ ನ್ಯಾಯಾಲಯಗಳಲ್ಲಿ ಈ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ. ಹಾಜರಾತಿಯನ್ನು ಹೆಚ್ಚು ಪಾರದರ್ಶಕ ಹಾಗೂ ತಾಂತ್ರಿಕವಾಗಿ ಸಮರ್ಥವಾಗಿ ನಿರ್ವಹಿಸುವ ಉದ್ದೇಶದಿಂದ ‘ಕರ್ತವ್ಯ (Kartavya)’ ಮೊಬೈಲ್ ಅಪ್ಲಿಕೇಶನ್ ಮೂಲಕ ಕರ್ನಾಟಕ ಅಡ್ವಾನ್ಸ್ ಅಟೆಂಡೆನ್ಸ್ ಮ್ಯಾನೇಜ್ ಮೆಂಟ್ ಸಿಸ್ಟಮ್ (KAAMS) ಅನ್ನು ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಂಗ ಘಟಕದ ಎಲ್ಲಾ ನ್ಯಾಯಾಲಯಗಳಲ್ಲಿ ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ.

ಈ ಕುರಿತು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ದಕ್ಷಿಣ ಕನ್ನಡ, ಮಂಗಳೂರು ಅವರು ಸುತ್ತೋಲೆ ಹೊರಡಿಸಿದ್ದು, ಕರ್ನಾಟಕ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಈ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವಂತೆ ಸೂಚಿಸಿದ್ದಾರೆ.

ಈ ಹೊಸ ವ್ಯವಸ್ಥೆಯಡಿ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ತಮ್ಮ ಮೊಬೈಲ್ ನಲ್ಲಿ Kartavya (KAAMS) ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಿ, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ KGID ಸಂಖ್ಯೆಯ ಮೂಲಕ ನೋಂದಣಿ ಪೂರ್ಣಗೊಳಿಸಬೇಕು. ಬಳಿಕ ಮುಖದ (Face Authentication) ದೃಢೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ತಮ್ಮ ನೌಕರರ ಪ್ರೊಫೈಲ್ ಗೆ ಜೋಡಿಸಬೇಕು. ದೈನಂದಿನ ಹಾಜರಾತಿಗಾಗಿ ಬೆಳಿಗ್ಗೆ “Check-In” ಹಾಗೂ ಸಂಜೆ “Check-Out” ಆಯ್ಕೆಯನ್ನು ಬಳಸಬೇಕು. ಹಾಜರಾತಿ ದಾಖಲಿಸುವ ವೇಳೆ ನೇರ ಮುಖದ ದೃಢೀಕರಣ (Live Face Authentication) ಕಡ್ಡಾಯವಾಗಿದ್ದು, ನ್ಯಾಯಾಲಯದ ಜಿಯೋಫೆನ್ಸಿಂಗ್ (Geofencing) ವ್ಯಾಪ್ತಿಯೊಳಗೆ ಇದ್ದಾಗ ಮಾತ್ರ ಹಾಜರಾತಿ ದಾಖಲಾಗುತ್ತದೆ. ಆದಾಗ್ಯೂ, ಮುಂದಿನ ಆದೇಶದವರೆಗೆ ಈಗಾಗಲೇ ಜಾರಿಯಲ್ಲಿರುವ ಮುಖ ಅಥವಾ ಬೆರಳಚ್ಚು ಆಧಾರಿತ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನೂ ಸಿಬ್ಬಂದಿಯವರು ಮುಂದುವರಿಸಬೇಕಾಗಿದೆ.

ಇದಲ್ಲದೆ, ಮುಖದ ದೃಢೀಕರಣದಲ್ಲಿ ಯಾವುದೇ ತಾಂತ್ರಿಕ ತೊಂದರೆ ಉಂಟಾಗದಂತೆ ಎಲ್ಲಾ ಸಿಬ್ಬಂದಿಯವರು ತಮ್ಮ ಆಧಾರ್ ಕಾರ್ಡ್ ನಲ್ಲಿ ಇತ್ತೀಚಿನ ಭಾವಚಿತ್ರವನ್ನು ಆಧಾರ್ ಸೇವಾ ಕೇಂದ್ರ ಅಥವಾ ಆಧಾರ್ ಅಪ್ ಡೇಟ್ ಕೇಂದ್ರದಲ್ಲಿ ನವೀಕರಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಪ್ರತಿ ನ್ಯಾಯಾಲಯದ ಮುಖ್ಯ ಲಿಪಿಕ ಅಧಿಕಾರಿಗಳು ತಮ್ಮ ನ್ಯಾಯಾಲಯದ ಸಿಬ್ಬಂದಿಯವರು Kartavya (KAAMS) ಆಪ್ ಅನ್ನು ಸ್ಥಾಪಿಸಿ ನೋಂದಣಿ ಪೂರ್ಣಗೊಳಿಸಿರುವ ಕುರಿತು ಪಾಲನಾ ವರದಿಯನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸಬೇಕಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.