19/05/2025

Law Guide Kannada

Online Guide

”ನಾನು ನ್ಯಾಯಾಲಯ ಬಿಟ್ಟು ಹೋಗಲ್ಲ, ನನ್ನನ್ನು ಕಾಪಾಡಿ” ಎಂದು ಹೈಕೋರ್ಟ್ ಜಡ್ಜ್ ಮುಂದೆ ಅಂಗಲಾಚಿದ ಎಂಜಿನಿಯರ್‌: ಕಾರಣವೇನು…?

ಬೆಂಗಳೂರು:  ಶಿವಮೊಗ್ಗ ಜಿಲ್ಲೆಯ ಸಾಗರದ ಉಪ ಪೊಲೀಸ್‌ ವರಿಷ್ಠಾಧಿಕಾರಿ ಸೇರಿ ಪೊಲೀಸರು ಮತ್ತು ಸ್ಥಳೀಯ ಶಾಸಕರು(ಬೇಳೂರು ಗೋಪಾಲಕೃಷ್ಣ) ನನ್ನ ವಿರುದ್ದ ಸುಳ್ಳು ಪ್ರಕರಣ ದಾಖಲಿಸಿ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದು, ನಾನು ನ್ಯಾಯಾಲಯ ಬಿಟ್ಟು ಹೋಗುವುದಿಲ್ಲ. ನನ್ನನ್ನು ಕಾಪಾಡಿ” ಎಂದು ಸಾಗರದ ಕೆಪಿಟಿಸಿಎಲ್‌ ಸಹಾಯಕ ಎಂಜಿನಿಯರ್‌ ಒಬ್ಬರು ಕರ್ನಾಟಕ ಹೈಕೋರ್ಟ್‌ ಮುಂದೆ ಕೈಮುಗಿದು ಅಂಗಲಾಚಿದ್ದು ಈ ವೇಳೆ ಪೊಲೀಸರು ತಪ್ಪೆಸಗಿದ್ದರೆ ಕ್ರಮ ಕೈಗೊಳ್ಳುವುದಾಗಿ ಹೈಕೋರ್ಟ್ ಭರವಸೆ ನೀಡಿತು.

ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಮುಂದೆ ಕೈಮುಗಿದು ಹಾಜರಾದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಸಹಾಯಕ ಎಂಜಿನಿಯರ್‌ ಆಗಿರುವ ಶಾಂತಕುಮಾರ ಸ್ವಾಮಿ ಎಂ ಜಿ ಅವರು “ನನಗೆ ವಿವಾಹ ನಿಶ್ಚಯವಾಗಿ ರದ್ದಾಗಿತ್ತು. ಆನಂತರ ಸುಳ್ಳು ಪ್ರಕರಣ ದಾಖಲಿಸಿ, ನನ್ನಿಂದ ಹಣ ಪೀಕಲು ಸ್ಥಳೀಯ ಕಾಂಗ್ರೆಸ್‌ ಶಾಸಕ (ಬೇಳೂರು ಗೋಪಾಲಕೃಷ್ಣ) ಮತ್ತು ಪೊಲೀಸರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನು ರೆಕಾರ್ಡ್‌ ಮಾಡಿ, ನಾನು ಲೋಕಾಯುಕ್ತಕ್ಕೆ ದೂರು ನೀಡಿದ್ದೆ. ಲೋಕಾಯುಕ್ತಕ್ಕೆ ದೂರು ನೀಡಿದ್ದೀಯಾ ಎಂದು ಸಾಗರದಲ್ಲಿ ಇರಲು ನನ್ನನ್ನು ಬಿಡುತ್ತಿಲ್ಲ. ಅಲ್ಲಿಂದ ಬೆಂಗಳೂರಿಗೆ ವರ್ಗಾವಣೆ ಕೋರುತ್ತಿದ್ದು, ಅದೂ ಸಾಧ್ಯವಾಗಿಲ್ಲ” ಎಂದರು.

ಹಾಗೆಯೇ ನಾನು ಕೋರ್ಟ್ ಬಿಟ್ಟು ಹೋಗುವುದಿಲ್ಲ. ನಮ್ಮನ್ನ ಕಾಪಾಡಿ ಎಂದು ಮನವಿ ಮಾಡಿದರು.

ಇದರಿಂದ ಚಕಿತಗೊಂಡ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಇಡೀ ಘಟನೆಯನ್ನು ಸಾವಧಾನದಿಂದ ಆಲಿಸಿ “ಇಂಥ ಕೃತ್ಯದಿಂದ ಹಿಂದೆ ಸರಿಯುವಂತೆ ಡಿವೈಎಸ್‌ಪಿಗೆ ತಿಳಿಸಿ, ಇಲ್ಲವಾದರೆ ಅವರನ್ನು ನ್ಯಾಯಾಲಯಕ್ಕೆ ಕರೆಯಿಸಬೇಕಾಗುತ್ತದೆ. ಆರೋಪ ನಿಜವಾಗಿದ್ದರೆ ಅವರು ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಖಡಕ್‌ ಮೌಖಿಕ ಎಚ್ಚರಿಕೆ ನೀಡಿದರು. ವಿಚಾರವನ್ನು ಅಧಿಕಾರಿಗೆ ತಿಳಿಸುವಂತೆ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರಿಗೆ ತಿಳಿಸಿದರು.

ಸಾಗರದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯು ಜುಲೈ 22ರಂದು ಹೈಕೋರ್ಟ್‌ನಲ್ಲಿ (ನ್ಯಾ. ನಾಗಪ್ರಸನ್ನ ಪೀಠ) ನಡೆದಿತ್ತು. ಪಾರ್ಟಿ ಇನ್‌ ಪರ್ಸನ್‌ ಆಗಿ ಈ ಪ್ರಕರಣಗಳಲ್ಲಿ ವಿಚಾರಣೆಯಲ್ಲಿ ಭಾಗಿಯಾಗಿದ್ದು, ವಕೀಲರನ್ನು ನೇಮಿಸಿಕೊಳ್ಳುವುದಾಗಿ ತಿಳಿಸಿದ್ದರಿಂದ, ಹೊಸದಾಗಿ ಅರ್ಜಿ ಸಲ್ಲಿಸಲು ಸ್ವಾತಂತ್ರ್ಯ ಕಲ್ಪಿಸಿ ಅರ್ಜಿ ವಿಲೇವಾರಿ ಮಾಡಲಾಗಿತ್ತು. ಈ ಸಂಬಂಧ ಯೂಟ್ಯೂಬ್‌ನಲ್ಲಿನ ಲೈವ್‌ ಸ್ಟ್ರೀಮ್‌ ವಿಡಿಯೊ ಆಧರಿಸಿ, ತಕ್ಷಣ ಸುಳ್ಳು ಗಾಂಜಾ ಪ್ರಕರಣದಲ್ಲಿ ನನ್ನನ್ನು ಬಂಧಿಸಿ ಶಿವಮೊಗ್ಗ ಜೈಲಿಗೆ ಅಟ್ಟಿದ್ದರು” ಎಂದು ಶಾಂತಕುಮಾರಸ್ವಾಮಿ ವಿವರಿಸಿದರು.

“ಹೈಕೋರ್ಟ್‌ನಲ್ಲಿ ಪೊಲೀಸರ ಬಗ್ಗೆ ದೂರುತ್ತೀಯಾ? ಎಂದು ಸಾಗರದ ಡಿವೈಎಸ್‌ಪಿ ನನ್ನನ್ನು ದಂಡಿಸಿದ್ದಾರೆ. ಗಾಂಜಾ ಪ್ರಕರಣದ ಜೊತೆಗೆ ತಕ್ಷಣ ಬೇರೆ ಬೇರೆ ಸೆಕ್ಷನ್‌ ಅನ್ವಯಿಸಿದ್ದಾರೆ. ರಿವಾಲ್ವಾರ್‌ ಇಟ್ಟು ಎನ್‌ಕೌಂಟರ್‌ ಮಾಡಲಾಗುವುದು ಎಂದು ಹೇಳಿದ್ದಾರೆ. ರೌಡಿ ಶೀಟರ್‌ ತೆರೆಯಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ. ಮೊಬೈಲ್‌ ಮತ್ತು ಪರ್ಸ್‌ ಕಸಿದುಕೊಂಡಿದ್ದಾರೆ” ಎಂದು ಅಳಲು ತೋಡಿಕೊಂಡರು.

ಆಗ ಪೀಠವು “ಇದೆಲ್ಲವನ್ನೂ ರೆಕಾರ್ಡ್‌ ಮಾಡಲಾಗುತ್ತದೆ. ಡಿವೈಎಸ್‌ಪಿ ಈ ರೀತಿ ನಡೆದುಕೊಂಡಿದ್ದರೆ ಖಂಡಿತಾಗಿಯೂ ಅವರ ಮೇಲೆ ಕ್ರಮಕ್ಕೆ ನಿರ್ದೇಶಿಸಲಾಗುವುದು. ಜಗದೀಶ್‌ ಇದನ್ನು ನೋಡಿ. (ಅರ್ಜಿದಾರರನ್ನು ಕುರಿತು) ಹೆದರಬೇಡಿ, ನಾವು ಅವರಿಗೆ ಹೇಳಿದ್ದೇವೆ” ಎಂದರು. ನಾಳೆ ವಿಚಾರಣೆ ನಡೆಸಲಾಗುವುದು ಎಂದು ಪೀಠ ಹೇಳಿದೆ.

ಈ ಮಧ್ಯೆ, ಶಾಂತಕುಮಾರ ಸ್ವಾಮಿ ಪರ ವಕೀಲರು “ಹೊಸದಾಗಿ ಅರ್ಜಿ ಸಲ್ಲಿಸುವುದಕ್ಕೆ ಖಾಲಿ ವಕಾಲತ್ತಿಗೆ ಸಹಿ ಹಾಕಿದ ಬಳಿಕ ಅವರನ್ನು ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ಕಾಯಿದೆ ಅಡಿ ಬಂಧಿಸಿದ್ದಾರೆ” ಎಂದರು.

ಆಗ ಪೀಠವು ಹಿಂದೆ ದಾಖಲಿಸಿದ್ದ ಪ್ರಕರಣದ ದಾಖಲೆಗಳನ್ನು ನಾಳೆ ಪೀಠದ ಮುಂದೆ ಮಂಡಿಸುವಂತೆ ಸೂಚಿಸಿತು.

ದಿನದ ಅಂತ್ಯದಲ್ಲಿ ಮತ್ತೆ ಶಾಂತಕುಮಾರ ಸ್ವಾಮಿ ಅವರು ಪೀಠದ ಮುಂದೆ ಹಾಜರಾದರು. ಆಗ ನ್ಯಾಯಾಲಯವು “ಏನಾಗಿದೆ ಎಂಬುದುರ ವಾಸ್ತವಿಕ ವರದಿಯನ್ನು ನಾಳೆ ತರಿಸಿಕೊಳ್ಳುತ್ತೇನೆ. ಬೆಳಿಗ್ಗೆ ನೀವು ಹೇಳಿರುವುದು ಸುಳ್ಳಾಗಿದ್ದರೆ ನಿಮ್ಮ ವಿರುದ್ಧ ಕ್ರಮಕ್ಕೆ ಆದೇಶಿಸಲಾಗುವುದು. ಸಿದ್ಧರಾಗಿರಿ, ಹಾಗೆ ನಾಳೆ ನ್ಯಾಯಾಲಯದ ಮುಂದೆ ಹಾಜರಾಗಬೇಕು” ಎಂದು ಹೇಳಿ, ವಿಚಾರಣೆ ಮುಂದೂಡಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.