ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ತನಿಖೆ ಮುನ್ನವೇ ಪ್ರಶ್ನಿಸುವ ಚಾಳಿಗೆ ಹೈಕೋರ್ಟ್ ತೀವ್ರ ಅತೃಪ್ತಿ
ಬೆಂಗಳೂರು: ಸರ್ಕಾರಿ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ ಪ್ರಕರಣಗಳಲ್ಲಿ ‘ಅಸಮಾನ ಆಸ್ತಿ ಗಳಿಕೆಯ ಆರೋಪದ ತನಿಖೆ ಕೈಗೊಳ್ಳಲು ಅನುಮತಿ ನೀಡುವ ಮುನ್ನವೇ ಆರೋಪ ಹೊತ್ತ ಅಧಿಕಾರಿಗಳು ಕಾನೂನಿನ ಮೊರೆ ಹೊಕ್ಕು ಪರಿಹಾರ ಪಡೆಯಲು ಯತ್ನಿಸುವುದು ತರವಲ್ಲ ಎಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪ ಎದುರಿಸುತ್ತಿರುವ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಉಪ ನಿಯಂತ್ರಕ ಅತ್ತಾರ್ ಅಲಿ (57) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಲೋಕಾಯುಕ್ತ ಪೊಲೀಸರು ತನಿಖೆ ಕೈಗೊಳ್ಳುವ ಮುನ್ನವೇ ಮೂಲ ವರದಿ, ಪ್ರಾಥಮಿಕ ತನಿಖೆ, ಅಪರಾಧ ಪ್ರಕರಣದ ದಾಖಲಾತಿ, ಶೋಧನಾ ಪ್ರಕ್ರಿಯೆ ಮತ್ತು ಎಫ್ಐಆರ್ ಅನ್ನು ಪ್ರಶ್ನಿಸುವ ಚಾಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೆ ಕಾನೂನುಬದ್ಧ ಪ್ರಕ್ರಿಯೆಗಳ ಆರಂಭದಲ್ಲೇ ನಾನು ಸಾಚಾ ಎಂದರೆ ಹೇಗೆ? ಎಂದು ಪ್ರಶ್ನಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಪದಾಂಕಿತ ಹಿರಿಯ ವಕೀಲ ಸಂದೇಶ್ ಜೆ.ಚೌಟ ಅವರು, ‘ಲೋಕಾಯುಕ್ತ ಪೊಲೀಸರು ತಯಾರಿಸಿದ ಮೂಲ ವರದಿ ಅತ್ಯಂತ ಕಳಪೆಯಾಗಿದ್ದು, ಜೊತೆಗೆ ಪ್ರಾಥಮಿಕ ತನಿಖೆ ನಡೆಸಲಾಗಿದ್ದರೂ, ಇಂತಹ ಪ್ರಕರಣಗಳಲ್ಲಿ ನಡೆಸಬೇಕಾದ ರೀತಿಯಲ್ಲಿ ನಡೆಸಲಾಗಿಲ್ಲ. ಇದು ಕೇವಲ ಕಣ್ಣೊರೆಸುವ ತಂತ್ರದಂತಹ ಪ್ರಾಥಮಿಕ ತನಿಖೆ. ಆದ್ದರಿಂದ, ಈ ಪ್ರಕರಣದಲ್ಲಿ ಪ್ರಾಥಮಿಕ ತನಿಖೆಯೇ ನಡೆದಿಲ್ಲ ಎಂದು ಪರಿಗಣಿಸಬೇಕು’ ಎಂದು ಮನವಿ ಮಾಡಿದ್ದರು.
ಈ ವಾದಕ್ಕೆ ಆಕ್ಷೇಪಿಸಿದ ಲೋಕಾಯುಕ್ತ ಪ್ರಾಸಿಕ್ಯೂಟರ್ ಬಿ.ಲತೀಫ್ , ‘ಪ್ರಕರಣದಲ್ಲಿ ಪ್ರಾಥಮಿಕ ವಿಚಾರಣೆ ನಡೆಸಲಾಗಿದ್ದು, ವಿಚಾರಣೆ ಮತ್ತು ತನಿಖೆಯ ಸಂದರ್ಭದಲ್ಲಿ ಹಲವಾರು ಪ್ರಮುಖ ಹಾಗೂ ಸ್ಪಷ್ಟ ಸಂಗ್ರಹಗಳು ಕಂಡು ಬಂದಿವೆ. ಅರ್ಜಿದಾರರ ವಾರ್ಷಿಕ ಆಸ್ತಿ ವಿವರದಲ್ಲಿ ನಿಗದಿತ ವರಮಾನದ ಹೊರತಾಗಿ ವಜ್ರ, ಬಂಗಾರ, ಬೆಳ್ಳಿ, ಚಿನ್ನದ ನಾಣ್ಯಗಳು, ವಿದೇಶಿ ಕರೆನ್ಸಿ, ನಗದು, ಬೇನಾಮಿ ಅಪಾರ್ಟ್ಮೆಂಟ್ಗಳಿಂದ ಆದಾಯ, ನಿವೇಶನಗಳು… ಇರುವುದೆಲ್ಲಾ ಪತ್ತೆಯಾಗಿದೆ’ ಎಂದು ವಿವರಿಸಿದರು.
‘ಆರೋಪಿ ವಿರುದ್ಧ ಸದ್ಯ ಹೊರಿಸಲಾಗಿರುವ ಆಪಾದನೆಗಳು ಅಪರಾಧಗಳ ಬೆಟ್ಟದ ತುದಿ ಮಾತ್ರ ಗೋಚರಿಸಿದಂತಿದೆ. ಸಮಗ್ರ ತನಿಖೆ ನಡೆದರೆ ಅದರ ಆಳ ಅಗಲದ ವಿಸ್ತ್ರತ ದರ್ಶನವಾಗುತ್ತದೆ. ಹಾಗಾಗಿ, ಅರ್ಜಿದಾರರು ಪ್ರತಿಪಾದಿಸುತ್ತಿರುವ ಸಮರ್ಥನೀಯ ಅಂಶಗಳೆಲ್ಲವೂ ಸಾಕ್ಷ್ಯಕ್ಕೆ ಸಂಬಂಧಿಸಿದ ವಿಷಯಗಳಾಗಿವೆ. ಇವನ್ನೆಲ್ಲಾ ಅವರು ಪೂರ್ಣ ಪ್ರಮಾಣದ ವಿಚಾರಣೆಯ ಸಂದರ್ಭದಲ್ಲಿ ಪ್ರಸ್ತುತಪಡಿಸಿ ತಾವು ಆರೋಪಗಳಿಂದ ಮುಕ್ತರೆಂದು ಸಾಬೀತುಪಡಿಸಿಕೊಳ್ಳಬೇಕಿದೆ’ ಎಂದು ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠವು, ‘ಈ ಪ್ರಕರಣ ಇನ್ನೂ ಎಫ್ಐಆರ್ ಹಂತದಲ್ಲಿದೆ. ತನಿಖೆಯು ತನ್ನ ಸಹಜ ಗತಿಯಲ್ಲಿ ಮುಂದುವರಿಯಲು ಅವಕಾಶ ನೀಡಲೇಬೇಕು. ಪ್ರಕರಣದಲ್ಲಿ ತಡೆಯಾಜ್ಞೆ ಇರುವ ಕಾರಣ ಸುಮಾರು ಎರಡು ವರ್ಷಗಳಿಂದ ತನಿಖೆ ಸ್ಥಗಿತಗೊಂಡಿದೆ. ದಾಖಲೆಯಲ್ಲಿರುವ ಅಂಶಗಳು ಮೇಲ್ನೋಟಕ್ಕೇ ತನಿಖೆಯ ಅಗತ್ಯವನ್ನು ಪುಷ್ಟಿಕರಿಸುತ್ತಿರುವಾಗ, ತನಿಖಾ ಪ್ರಕ್ರಿಯೆಯನ್ನು ಇನ್ನು ಮುಂದೆಯೂ ಕಟ್ಟಿಹಾಕಲು ಸಾಧ್ಯವಿಲ್ಲ. ಆದ್ದರಿಂದ, ಈ ವಿಷಯದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದು ಸಮರ್ಥನೀಯವಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ತಡೆ ತೆರವುಗೊಳಿಸಿ ಅರ್ಜಿ ವಜಾಗೊಳಿಸಿತು.
ಏನಿದು ಪ್ರಕರಣ
1997ರಲ್ಲಿ ಇನ್ಸ್ಪೆಕ್ಟರ್ ಆಗಿ ಇಲಾಖೆಗೆ ಸೇರ್ಪಡೆಯಾಗಿದ್ದ ಅತ್ತಾರ್ ಅಲಿ ಅವರ ವಿರುದ್ದ 2024ರ ಜನವರಿ 6ರಂದು ಲೋಕಾಯುಕ್ತ ಪೊಲೀಸರು ಮೂಲ ಮಾಹಿತಿ ವರದಿ (ಸೋರ್ಸ್ ರಿಪೋರ್ಟ್) ತಯಾರಿಸಿದ್ದರು. ಈ ಸೋರ್ಸ್ ರಿಪೋರ್ಟ್ ಅನುಸಾರ ಪ್ರಾಥಮಿಕ ವಿಚಾರಣೆ ನಡೆಸಿ 2024ರ ಜುಲೈ 18ರಂದು ಅಪರಾಧ ದಾಖಲಿಸಿದ್ದರು. ಅಂತೆಯೇ, ಶೋಧ ವಾರಂಟ್ ಪಡೆದು ಮನೆಯಲ್ಲಿ ಶೋಧಿಸಿದಾಗ ಆಸ್ತಿಗಳು, ವೆಚ್ಚ ಮತ್ತು ಆದಾಯಕ್ಕೆ ಹೋಲಿಕೆ ಮಾಡಿದಾಗ ಹೆಚ್ಚಿನ ಅಂದರೆ 155ರಷ್ಟು ಪ್ರಮಾಣದ ಆಸ್ತಿ ಹೊಂದಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಇವರ ವಿರುದ್ಧ; ಭ್ರಷ್ಟಾಚಾರ ತಡೆ ಕಾಯ್ದೆ-1988ರ ಕಲಂ 13(1) (ಬಿ) ಮತ್ತು 13(2)ರ ಅಡಿಯಲ್ಲಿನ ಅಪರಾಧಗಳಿಗಾಗಿ ಎಫ್ಐಆರ್ ದಾಖಲಿಸಲಾಗಿತ್ತು.
‘ನನ್ನ ವಿರುದ್ಧ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್ಐಆರ್ ಮತ್ತು ನಗರದ 23ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿನ ಪ್ರಕರಣದ ನ್ಯಾಯಿಕ ವಿಚಾರಣೆ ರದ್ದುಗೊಳಿಸಬೇಕು’ ಎಂದು ಕೋರಿ ಅತ್ತಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಸಮನ್ವಯ ನ್ಯಾಯಪೀಠ 2025ರ ಮಾರ್ಚ್ 19ರಂದು ತಾಂತ್ರಿಕ ಕಾರಣಗಳ ಆಧಾರದಲ್ಲಿ ತನಿಖೆಗೆ ಮಧ್ಯಂತರ ತಡೆ ನೀಡಲಾಗಿತ್ತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
