ಸುಪ್ರೀಂ ಜಡ್ಜ್ ಎಂದು ಬಿಂಬಿಸಿ ಪ್ರಭಾವ ಬೀರಲು ಯತ್ನ: ಸುಕೇಶ್ ಚಂದ್ರಶೇಖರ್ ತಪ್ಪಿತಸ್ಥ – ಕೋರ್ಟ್ ತೀರ್ಪು
ನವದೆಹಲಿ: 2017ರ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಜಾಮೀನು ಪಡೆಯುವ ಉದ್ದೇಶದಿಂದ ತಾನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂದು ಬಿಂಬಿಸಿಕೊಂಡು ವಿಶೇಷ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು ಯತ್ನಿಸಿದ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ತಪ್ಪಿತಸ್ಥ, ದೋಷಿ ಎಂದು ದೆಹಲಿ ಕೋರ್ಟ್ ತೀರ್ಪು ನೀಡಿದೆ.
2017ರಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿನಲ್ಲಿದ್ದ ಸುಕೇಶ್ ಚಂದ್ರಶೇಖರ್ ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೋಗಿನಲ್ಲಿ ಕರೆ ಮಾಡಿರುವ ಆರೋಪದಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿದೆ.
ಐಪಿಸಿ ಸೆಕ್ಷನ್ 170(ಸಾರ್ವಜನಿಕ ಸೇವಕನಂತೆ ನಟಿಸುವುದು), 189 (ಸಾರ್ವಜನಿಕ ಸೇವಕನಿಗೆ ಹಾನಿ ಉಂಟುಮಾಡುವ ಬೆದರಿಕೆ ಹಾಕುವುದು) ಮತ್ತು 507 (ಅನಾಮಧೇಯ ಸಂವಹನದ ಮೂಲಕ ಅಪರಾಧಪೂರಿತ ಬೆದರಿಕೆ) ಅಡಿ ಸುಕೇಶ್ ತಪ್ಪಿತಸ್ಥನೆಂದು ಚೀಫ್ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಹರ್ಷಿತಾ ಮಿಶ್ರಾ ಆದೇಶ ನೀಡಿದ್ದಾರೆ. ಸುಕೇಶ್ ಕೃತ್ಯವು ನ್ಯಾಯಾಂಗ ಪ್ರಕ್ರಿಯೆಯ ಸ್ವಾತಂತ್ರ್ಯ ಮತ್ತು ಪಾವಿತ್ರ್ಯತೆಗೆ ಮಾಡಿದ ನೇರ ಅಪಮಾನ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.
ಜೈಲಿನಲ್ಲಿದ್ದ ವೇಳೆ ಕಾನ್ ಸ್ಟೆಬಲ್ ಮಂಜೀತ್ ಮೊಬೈಲ್ ಫೋನ್ ಅನ್ನು ಪಡೆದಿದ್ದ ಸುಕೇಶ್, ಭ್ರಷ್ಟಾಚಾರ ನಿಗ್ರಹ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ವಿಶೇಷ ನ್ಯಾಯಾಧೀಶರಾದ ಪೂನಂ ಚೌಧರಿ ಅವರ ಅಧಿಕೃತ ಲ್ಯಾಂಡ್ಲೈನ್ ಸಂಖ್ಯೆ ಮತ್ತು ಮೊಬೈಲ್ ಫೋನ್ಗೆ ಕರೆ ಮಾಡಿದ್ದ. ಜಾಮೀನು ನೀಡುವಂತೆ ಪ್ರಭಾವ ಬೀರಲು ಯತ್ನಿಸಿದ್ದ ಎಂದು ವರದಿಯಲ್ಲಿ ತಿಳಿಸಿದೆ.
ಸುಪ್ರೀಂ ಕೋರ್ಟ್ ಅಂದಿನ ನ್ಯಾಯಮೂರ್ತಿಯೊಬ್ಬರ ಖಾಸಗಿ ಕಾರ್ಯದರ್ಶಿ ಎಂದು ಮೊದಲಿಗೆ ಹೇಳಿಕೊಂಡಿದ್ದ ಸುಕೇಶ್, ಬಳಿಕ, ತಾನೇ ನ್ಯಾಯಮೂರ್ತಿ ಎಂದು ಬಿಂಬಿಸಿ ಮಾತನಾಡಿದ್ದ. ಅಲ್ಲದೆ ಭ್ರಷ್ಟಾಚಾರ ಪ್ರಕರಣದಲ್ಲಿ ಕೂಡಲೇ ಜಾಮೀನು ನೀಡಬೇಕು. ಇಲ್ಲದಿದ್ದರೆ, ವೃತ್ತಿಯಲ್ಲಿ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಇದೀಗ ಈ ಆರೋಪ ಸಾಬೀತಾಗಿದ್ದು ಕೋರ್ಟ್ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
