ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ: ಸ್ಥಳ ಪರಿಶೀಲನೆಗೆ CJ ಸಮ್ಮತಿ
ಬೆಂಗಳೂರು: ಕರಾವಳಿ ಭಾಗದ ಜನರು ಬಹುದಿನಗಳ ಬೇಡಿಕೆಯಾಗಿರುವ ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಕಾಲ ಕೂಡಿ ಬಂದಿದ್ದು ಪ್ರಸ್ತಾವಿತ ಸ್ಥಳ ಪರಿಶೀಲನೆಗೆ ಮುಖ್ಯ ನ್ಯಾಯಮೂರ್ತಿ ವಿಭು ಬಖು ಒಪ್ಪಿಗೆ ನೀಡಿದ್ದಾರೆ.
ಹೈಕೋರ್ಟ್ ಸಂಚಾರಿ ಪೀಠ ಆರಂಭ ಸಂಬಂಧ ಸೆಪ್ಟೆಂಬರ್ನಲ್ಲಿ ಮಂಗಳೂರಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲು ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ವಿಭು ಬಖು ಒಪ್ಪಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು ವಕೀಲರ ಸಂಘ ಹಾಗೂ ಮಂಗಳೂರು ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಪ್ರತಿನಿಧಿಗಳ ನಿಯೋಗವು ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿ ಮಾಡಿ, ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವ ಅಗತ್ಯತೆ ಹಾಗೂ ಕರಾವಳಿ ಭಾಗದ ಜನರಿಗೆ ಉನ್ನತ ನ್ಯಾಯಾಂಗ ಸೇವೆಗಳು ಇನ್ನಷ್ಟು ಸುಲಭವಾಗಿ ಮತ್ತು ತ್ವರಿತವಾಗಿ ದೊರೆಯುವಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರವಾಗಿ ಚರ್ಚಿಸಿತು.
ಚರ್ಚೆಯ ವೇಳೆ ಮುಖ್ಯ ನ್ಯಾಯಮೂರ್ತಿ ವಿಭುಭಕ್ರು ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಮಂಗಳೂರಿನಲ್ಲಿ ಪ್ರಸ್ತಾವಿತ ಸಂಚಾರಿ ಪೀಠ ಸ್ಥಾಪನೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ ನಲ್ಲಿ ಮಂಗಳೂರಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುವುದಾಗಿ ಒಪ್ಪಿಗೆ ಸೂಚಿಸಿದರು. ಇದಲ್ಲದೆ, ಸಂಚಾರಿ ಪೀಠ ಸ್ಥಾಪನೆಗೆ ಸಂಬಂಧಿಸಿದ ವಿಷಯವನ್ನು ಪರಿಶೀಲಿಸಿ, ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಮಿತಿಯೊಂದನ್ನು ರಚಿಸುವ ಪ್ರಸ್ತಾವನೆಗೂ ಅವರು ಸಮ್ಮತಿ ಸೂಚಿಸಿದರು.
ಸಭೆಯಲ್ಲಿ ಮಂಗಳೂರು ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಸಂಚಾಲಕ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಕೆ. ಶೇಣವ, ಉಡುಪಿ ವಕೀಲರ ಸಂಘದ ಅಧ್ಯಕ್ಷ ರೊನಾಲ್ಡ್ ಪ್ರವೀಣ ಕುಮಾರ್, ಮಂಗಳೂರು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ಎಚ್.ವಿ. ಹಾಗೂ ಹಿರಿಯ ವಕೀಲ ಎಂ.ಪಿ. ನೊರೊನ್ಹಾ ಅವರು ಉಪಸ್ಥಿತರಿದ್ದರು.
ಮುಖ್ಯ ನ್ಯಾಯಮೂರ್ತಿಗಳ ಸಕಾರಾತ್ಮಕ ಸ್ಪಂದನೆ ಹಾಗೂ ಸೆಪ್ಟೆಂಬರ್ನಲ್ಲಿ ಮಂಗಳೂರಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲು ಅವರು ಒಪ್ಪಿಗೆ ನೀಡಿರುವುದು, ಹಲವು ವರ್ಷಗಳಿಂದ ಮುಂದುವರಿದಿರುವ ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯ ಬೇಡಿಕೆಯ ಹಾದಿಯಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.
ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯಾದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು ಸೇರಿದಂತೆ ಕರಾವಳಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಅಪಾರ ಅನುಕೂಲವಾಗಲಿದೆ. ಪ್ರಸ್ತುತ ಈ ಭಾಗದ ವಕೀಲರು ಮತ್ತು ಕಕ್ಷಿದಾರರು ಹೈಕೋರ್ಟ್ ವಿಚಾರಣೆಗಳಿಗೆ ಬೆಂಗಳೂರಿಗೆ ಪದೇಪದೇ ತೆರಳಬೇಕಾದ ಪರಿಸ್ಥಿತಿ ಇದೆ. ಮಂಗಳೂರಿನಲ್ಲಿ ಸಂಚಾರಿ ಪೀಠ ಸ್ಥಾಪನೆಯಾದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು ಸೇರಿದಂತೆ ಕರಾವಳಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಅಪಾರ ಅನುಕೂಲವಾಗಲಿದೆ.
ಪ್ರಸ್ತುತ ಈ ಭಾಗದ ವಕೀಲರು ಮತ್ತು ಕಕ್ಷಿದಾರರು ಹೈಕೋರ್ಟ್ ವಿಚಾರಣೆಗಳಿಗೆ ಬೆಂಗಳೂರಿಗೆ ಪದೇಪದೇ ತೆರಳಬೇಕಾದ ಪರಿಸ್ಥಿತಿ ಇದೆ. ಮಂಗಳೂರಿನಲ್ಲಿ ಸಂಚಾರಿ ಪೀಠ ಸ್ಥಾಪನೆಯಾದರೆ ಪ್ರಯಾಣದ ಸಮಯ, ವೆಚ್ಚ ಮತ್ತು ಅನಾನುಕೂಲತೆ ಗಣನೀಯವಾಗಿ ಕಡಿಮೆಯಾಗುವುದರ ಜೊತೆಗೆ ನ್ಯಾಯಾಂಗ ಸೇವೆಗಳು ಜನರಿಗೆ ಇನ್ನಷ್ಟು ವೇಗವಾಗಿ, ಸುಲಭವಾಗಿ ಹಾಗೂ ಕೈಗೆಟುಕುವ ರೀತಿಯಲ್ಲಿ ದೊರೆಯಲಿವೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
