ಅಪಘಾತ ಪರಿಹಾರದಿಂದ ಅನುಕಂಪದ ನೆರವು ಕಡಿತ ಕ್ರಮ ಎತ್ತಿ ಹಿಡಿದ ಸುಪ್ರೀಂಕೋರ್ಟ್
ನವದೆಹಲಿ: ಮೋಟಾರು ವಾಹನ ಕಾಯ್ದೆಯಡಿ ನೀಡಲಾಗುವ ಪರಿಹಾರ ಮತ್ತು ಕಾನೂನುಬದ್ಧ ಅನುಕಂಪದ ನೆರವು ಎರಡೂ ಪರಿಹಾರಾತ್ಮಕ ಸ್ಮರೂಪಾಗಿರುವುದರಿಂದ, ಕಾಯ್ದೆಯಡಿ ನಿರ್ಧರಿಸಲಾಗಿರುವ ಒಟ್ಟು ಪರಿಹಾರ ಮೊತ್ತದಿಂದ ಅನುಕಂಪದ ನೆರವಿನ ಮೊತ್ತವನ್ನು ಕಡಿತಗೊಳಿಸುವುದು ನ್ಯಾಯಸಮ್ಮತವಾಗಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ಪೀಠವು, ಮೃತ ಮಹಿಳೆಯ ಅವಲಂಬಿತರಿಗೆ ನೀಡಲಾಗಿದ್ದ ಅನುಕಂಪದ ನೆರವನ್ನು ಮೋಟಾರು ವಾಹನ ಕಾಯ್ದೆಯಡಿ ಪಾವತಿಸಬೇಕಾದ ಪರಿಹಾರದಿಂದ ಕಡಿತಗೊಳಿಸಿರುವುದನ್ನು ಎತ್ತಿಹಿಡಿದಿದೆ.
ಹರಿಯಾಣದ ನಿಯಮಗಳಡಿ ನೀಡಲಾದ ಕಾನೂನುಬದ್ದ ಅನುಕಂಪದ ನೆರವನ್ನು ಮೋಟಾರು ವಾಹನ ಕಾಯ್ದೆಯಡಿ ನಿರ್ಧರಿಸಲಾದ ಪರಿಹಾರದಿಂದ ಕಡಿತಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಸ್ಪಷ್ಟಪಡಿಸಿದೆ, ಅನುಕಂಪದ ನೆರವನ್ನು ಕಡಿತಗೊಳಿಸುವ ಕ್ರಮ ಎತ್ತಿ ಹಿಡಿಯಲು ಕಾರಣ…?
ಹರಿಯಾಣದ ಕುರುಕ್ಷೇತ್ರ ವಿಶ್ವವಿದ್ಯಾಲಯದ ರಹಸ್ಯ ವಿಭಾಗದಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಮತಾ ಶರ್ಮಾ ಅವರ ಪತಿ ಮತ್ತು ಮಕ್ಕಳಿಂದ ಸಲ್ಲಿಸಲಾದ ಪರಿಹಾರ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ನಡೆಯಿತು . ಟ್ರಕ್ ಚಾಲಕನ ಅಜಾಗರೂಕ ಹಾಗೂ ನಿರ್ಲಕ್ಷದ ಚಾಲನೆಯಿಂದ ಸಂಭವಿಸಿದ ಅಪಘಾತದಲ್ಲಿ ಅವರು ಮೃತಪಟ್ಟಿದ್ದರು.
ಕುರುಕ್ಷೇತ್ರದ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಯು ₹34,08,675/- ಪರಿಹಾರವನ್ನು ವಾರ್ಷಿಕ 7.5% ಬಡ್ಡಿಯೊಂದಿಗೆ ಪಾವತಿಸುವಂತೆ ಆದೇಶಿಸಿತ್ತು,. ವಿಮೆದಾರರಾದ SBI General Insurance Company Ltd.. ಈ ಆದೇಶವನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಲ್ಲಿ ಪ್ರಶ್ನಿಸಿತು. ಹೈಕೋರ್ಟ್ ಪರಿಹಾರದ ಮೊತ್ತವನ್ನು ಪರಿಷ್ಕರಿಸಿ, Haryana Compassionate Assistance to the Dependants of Deceased Government Employees Rules, 2006 ನಡಿ ಸುಮಾರು 29 ಲಕ್ಷ ರೂ. ಮೊತ್ತವನ್ನು ಪರಿಹಾರದಿಂದ ಕಡಿತಗೊಳಿಸಿತು. ಉಳಿದ 3,50,532/- ಮೊತ್ತವನ್ನು ಪಾವತಿಸುವಂತೆ ನಿರ್ದೇಶಿಸಿತು. ಮೃತೆಯ ಮಾಸಿಕ ಆದಾಯವನ್ನು ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ಹಾಗೂ ಹೈಕೋರ್ಟ್ ಎರಡೂ ₹20,687/-ಎಂದು ನಿರ್ಧರಿಸಿದ್ದವು.
ಮಮತಾ ಶರ್ಮಾ ಅವರು ಉದ್ಯೋಗದ ಮೂಲಕ ಗಳಿಸುತ್ತಿದ್ದ ಆದಾಯದ ಕುರಿತು ಯಾವುದೇ ವಿವಾದವಿಲ್ಲ ಎಂದು ಸುಪ್ರೀಂ ಕೋರ್ಟ್ ಗಮನಿಸಿತು. ಅವರ ಆದಾಯವನ್ನು ನಿರ್ಧರಿಸುವಾಗ, ಕುಟುಂಬದ ನಿರ್ವಹಣೆಗೆ ಅವರು ನೀಡುತ್ತಿದ್ದ ಕೊಡುಗೆಯ ಹಿನ್ನೆಲೆಯಲ್ಲಿ ಯಾವುದೇ ಹೆಚ್ಚುವರಿ ಮೊತ್ತವನ್ನು ಸೇರಿಸಬೇಕೇ ಎಂಬುದು ವಿಚಾರಣೆಯ ಪ್ರಮುಖ ಪ್ರಶ್ನೆಯಾಗಿತ್ತು.
.ಮೋಟಾರು ವಾಹನ ಕಾಯ್ದೆಯಡಿ ನೀಡಲಾಗುವ ಪರಿಹಾರ ಮತ್ತು 2006ರ ನಿಯಮಗಳಡಿ ನೀಡಲಾಗುವ ನೆರವು ಎರಡೂ ಕಾನೂನುಬದ್ಧ. ಸ್ವರೂಪದ್ದಾಗಿರುವುದರಿಂದ, ನಂತರದ ಮೊತ್ತವನ್ನು ಕಡಿತಗೊಳಿಸುವುದು ನ್ಯಾಯಸಮ್ಮತವಾಗಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ತಿಳಿಸಿತು. ಅರ್ಜಿದಾರರು ಈಗಾಗಲೇ ಮೃತೆಯ ಉದ್ಯೋಗದಾತರಿಂದ ₹29,78,928/- ಪಡೆದಿದ್ದಾರೆ ಎಂದು ಸುಪ್ರೀಂ ಕೋರ್ಟ್ ಗಮನಿಸಿತು. ಅಲ್ಲದೆ, 2015ರಲ್ಲಿ ವಿಮಾ ಕಂಪನಿಯಿಂದ ₹18 ಲಕ್ಷ ಮೊತ್ತವನ್ನೂ ಪಡೆದಿದ್ದರು. ಹೀಗಾಗಿ, ಅವರು ಈವರೆಗೆ ಪಡೆದಿರುವ ಒಟ್ಟು ಮೊತ್ತ ₹47,78,928/- ಆಗಿದೆ ಎಂದು ನ್ಯಾಯಾಲಯ ದಾಖಲಿಸಿತು.
ನ್ಯಾಯಾಲಯದ ನಿರ್ದೇಶನದ ಮೇರೆಗೆ ಪರಿಹಾರ ಮೊತ್ತವನ್ನು ಅರ್ಜಿದಾರರಿಂದ ಮರುಪಡೆಯುವುದಿಲ್ಲ ಎಂದು ವಿಮಾ ಕಂಪನಿಯು ಸ್ಪಷ್ಟವಾಗಿ ಒಪ್ಪಿಕೊಂಡಿರುವುದನ್ನೂ ಪೀಠ ಗಮನಿಸಿತು. ಅರ್ಜಿದಾರರು ಈಗಾಗಲೇ ಪಡೆದ ಸಂಪೂರ್ಣ ಮೊತ್ತವನ್ನು ಮೃತೆಯ ಮಕ್ಕಳ ಶಿಕ್ಷಣ ಹಾಗೂ ಅವರ ಜೀವನದ ಸ್ಥಿರತೆಗಾಗಿ ಖರ್ಚು ಮಾಡಿದ್ದಾರೆ ಎಂಬುದನ್ನೂ ನ್ಯಾಯಾಲಯ ಗಮನಿಸಿತು. ಹೀಗಾಗಿ “ಪೂರ್ಣ ಮೊತ್ತವನ್ನು ಈಗಾಗಲೇ ಖರ್ಚು ಮಾಡಿರುವ ಹಿನ್ನೆಲೆಯಲ್ಲಿ, ನ್ಯಾಯದ ಹಿತದೃಷ್ಟಿಯಿಂದ ಪ್ರಸ್ತುತ ಅರ್ಜಿಯನ್ನು ಈ ನಿರ್ದೇಶನದೊಂದಿಗೆ ವಿಲೇವಾರಿ ಮಾಡುವುದು ಸೂಕ್ತ: ಅರ್ಜಿದಾರರಿಂದ ಯಾವುದೇ ಮೊತ್ತವನ್ನು ಮರುಪಡೆಯಬಾರದು ಹಾಗೂ ಅವರಿಗೆ ಯಾವುದೇ ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗಿಲ್ಲ ಎಂದು ನ್ಯಾಯಪೀಠ ಆದೇಶಿಸಿತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
