10/09/2026

Law Guide Kannada

Online Guide

ಮೊದಲ ಮದುವೆ ಮುಚ್ಚಿಟ್ಟಿರುವ ಆರೋಪಕ್ಕೆ ಸಾಕ್ಷ್ಯ ಇಲ್ಲದಿದ್ದರೇ ನಿರ್ವಹಣಾ ಭತ್ಯೆ ಕೇಳಲು ಸಾಧ್ಯವಿಲ್ಲ- ಹೈಕೋರ್ಟ್

ಬೆಂಗಳೂರು: ಪತಿಯ ವಿರುದ್ದ ಮೊದಲ ಮದುವೆ ಮುಚ್ಚಿಟ್ಟಿರುವ ಆರೋಪಕ್ಕೆ ಸಾಕ್ಷ್ಯ ಇಲ್ಲದಿದ್ದರೇ, ಮೊದಲ ವಿವಾಹದ ಗೋಪ್ಯತೆಗೆ ನಿರ್ದಿಷ್ಟ ಆರೋಪ ಇಲ್ಲದಿದ್ದರೆ ಪತ್ನಿಯು ನಿರ್ವಹಣಾ ಭತ್ಯೆ ಕೇಳಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಕುಟುಂಬ ನ್ಯಾಯಾಲಯವು ನಿರ್ವಹಣಾ ಭತ್ಯೆ ನೀಡಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಮಹಿಳೆ ಸಲ್ಲಿಸಿದ್ದ ರಿವಿಷನ್ ಅರ್ಜಿಯನ್ನು ವಜಾಗೊಳಿದ ಧಾರವಾಡ ಪೀಠದ ನ್ಯಾಯಮೂರ್ತಿ ಗೀತಾ ಕೆ.ಬಿ. ಅವರು, ಮೊದಲ ವಿವಾಹವು ಇನ್ನೂ ಜಾರಿಯಲ್ಲಿರುವ ವ್ಯಕ್ತಿಯನ್ನು ಎರಡನೇ ವಿವಾಹವಾದ ಮಹಿಳೆ, ಪತಿಯು ತನ್ನ ಮೊದಲ ವಿವಾಹದ ವಿಚಾರವನ್ನು ಮೋಸದಿಂದ ಮುಚ್ಚಿಟ್ಟಿದ್ದಾನೆ ಎಂಬುದಕ್ಕೆ ನಿರ್ದಿಷ್ಟ ಆರೋಪ ಅಥವಾ ಸಾಕ್ಷ ಇಲ್ಲದಿದ್ದರೆ, ಅಪರಾಧ ಪ್ರಕ್ರಿಯಾ ಸಂಹಿತೆ (CrPC)ಯ ಸೆಕ್ಷನ್ 125ರ ಅಡಿಯಲ್ಲಿ ನಿರ್ವಹಣಾ ಭತ್ಯೆ ಕೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅರ್ಜಿದಾರ ಮಹಿಳೆಯ ಪ್ರಕಾರ, ಅವರು ಪ್ರತಿವಾದಿ ಪುರುಷನನ್ನು ಜುಲೈ 1, 2018ರಂದು ವಿವಾಹವಾಗಿದ್ದರು. ವಿವಾಹದ ನಂತರ ಸುಮಾರು ಎಂಟು ದಿನಗಳ ಕಾಲ ಅವರೊಂದಿಗೆ ವಾಸಿಸಿದ್ದರು. ಆ ಅವಧಿಯಲ್ಲಿ ಪತಿಯು ತನ್ನ ಮೇಲೆ ಕ್ರೌರ್ಯ ಎಸಗಿದ್ದಾನೆ ಎಂದು ಅವರು ಆರೋಪಿಸಿದರು. ತನ್ನನ್ನು ಮನೆಯೊಳಗೆ ಬೀಗ ಹಾಕಿ, ಕಿಟಕಿಗಳನ್ನು ತೆರೆಯದಂತೆ ತಡೆದಿದ್ದನು ಎಂಬ ಆರೋಪವೂ ಮಾಡಿದರು. ತಾನು ಸ್ವತಃ ಜೀವನ ನಡೆಸಲು ಸಾಧ್ಯವಾಗದ ಕಾರಣ ನಿರ್ವಹಣಾ ಭತ್ಯೆ ನೀಡಬೇಕು ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಆದರೆ ಈ ಆರೋಪವನ್ನು ತಳ್ಳಿ ಹಾಕಿದ ಪ್ರತಿವಾದಿ ಪತಿಯು,, ತನ್ನ ಮೊದಲ ವಿವಾಹವನ್ನು 31 ಮಾರ್ಚ್ 2015ರಂದು ನ್ಯಾಯಾಲಯದ ಡಿಕ್ರಿಯ ಮೂಲಕ ವಿಚ್ಚೇದನಗೊಳಿಸಲಾಗಿತ್ತು. ಆದರೆ ಆ ಡಿಕ್ರಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ಮೇಲ್ಮನವಿಯಲ್ಲಿ ಹೈಕೋರ್ಟ್ ವಿಭಾಗೀಯ ಪೀಠ (Division Bench) ಆದೇಶಕ್ಕೆ ಸ್ಥಗಿತ (Stay) ನೀಡಿತ್ತು ಎಂದು ವಾದಿಸಿದರು. ಹೀಗಾಗಿ, 2018ರಲ್ಲಿ ಅರ್ಜಿದಾರರು ತಮ್ಮೊಂದಿಗೆ ವಿವಾಹವಾದಾಗ ತಮ್ಮ ಮೊದಲ ವಿವಾಹ ಇನ್ನೂ ಕಾನೂನುಬದ್ದವಾಗಿ ಜಾರಿಯಲ್ಲಿತ್ತು ಎಂದು ಪತಿ ವಾದಿಸಿದರು.

ವಾದ ಪ್ರತಿವಾದ ಆಲಿಸಿದ ಕೌಟುಂಬಿಕ ನ್ಯಾಯಾಲಯವು ನಿರ್ವಹಣಾ ಭತ್ಯೆ ನಿರಾಕರಿಸಿ ನಿರ್ವಹಣಾ ಭತ್ಯೆಯ ಅರ್ಜಿಯನ್ನು ವಜಾಗೊಳಿಸಿತು. ಇದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದರು.

ಈ ಅರ್ಜಿಯನ್ನ ವಜಾಗೊಳಿಸಿದ ಹೈಕೋರ್ಟ್ ನ್ಯಾಯಪೀಠವು, ಪತಿಯು ಮೊದಲ ವಿವಾಹ ಮತ್ತು ಅದರ ಸಂಬಂಧಿತ ಕಾನೂನು ವಿಚಾರಗಳನ್ನು ಮೋಸದಿಂದ ಮುಚ್ಚಿಟ್ಟಿದ್ದಾನೆ ಎಂಬುದಾಗಿ ಮಹಿಳೆಯು ನಿರ್ದಿಷ್ಟವಾಗಿ ಆರೋಪಿಸಿರಲಿಲ್ಲ ಎಂಬುದು. ಪ್ರತಿವಾದಿಯು ತನ್ನ ಮೊದಲ ವಿವಾಹಕ್ಕೆ ಸಂಬಂಧಿಸಿದ ಮೇಲ್ಮನವಿ ಬಾಕಿಯಿದೆ ಎಂದು ನ್ಯಾಯಾಲಯದ ಮುಂದೆ ವಿಷಯ ಪ್ರಸ್ತಾಪಿಸಿದ ನಂತರವೂ, ಪತಿಯು ತಡೆಯಾಜ್ಞೆ ಅದೇಶವನ್ನು ಮುಚ್ಚಿಟ್ಟು ತನ್ನನ್ನು ವಿವಾಹವಾಗಿದ್ದಾನೆ ಎಂದು ಮಹಿಳೆಯು ತನ್ನ ಅರ್ಜಿ ಅಥವಾ ಅಫಿಡವಿಟ್ನಲ್ಲಿ ನಿರ್ದಿಷ್ಟವಾಗಿ ಹೇಳಿರಲಿಲ್ಲ. ಹೀಗಾಗಿ, ಮೊದಲ ವಿವಾಹ ಇನ್ನೂ ಜಾರಿಯಲ್ಲಿ ಸಂದರ್ಭದಲ್ಲಿ ಪ್ರತಿವಾದಿಯು ಅರ್ಜಿದಾರರನ್ನು ವಿವಾಹವಾಗಬಾರದಿತ್ತು ಎಂದು ಅಭಿಪ್ರಾಯಪಟ್ಟಿತು.

ಅಂತಿಮವಾಗಿ, Family Courts Act, 1984ರ ಸೆಕ್ಷನ್ 19(4) ಅಡಿಯಲ್ಲಿ ಸಲ್ಲಿಸಲಾಗಿದ್ದ ರಿವಿಷನ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಕುಟುಂಬ ನ್ಯಾಯಾಲಯವು ನಿರ್ವಹಣಾ ಭತ್ಯೆ ನಿರಾಕರಿಸಿದ್ದ ಆದೇಶವನ್ನು ಎತ್ತಿ ಹಿಡಿಯಿತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.