CJI ಚಂದ್ರಚೂಡ್ ಅವರ ಹೆಸರಲ್ಲೇ ನಕಲಿ ಖಾತೆ ತೆರೆದು ವಂಚನೆ: FIR ದಾಖಲು

ನವದೆಹಲಿ; ಫೇಸ್ ಬುಕ್, ಇನ್ ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಖಾತೆಗಳನ್ನ ತೆರೆದು ವಂಚನೆ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಈ ಬಗ್ಗೆ ಜನ ಸಾಕಷ್ಟು ಎಚ್ಚೆತ್ತುಕೊಂಡಿದ್ದರೂ ಸಹ ಇಂತಹ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಇದಕ್ಕೆ ಹೆಚ್ಚಿನದಾಗಿ ರಾಜಕಾರಣಿಗಳು, ಅಧಿಕಾರಿಗಳೇ ಬಲಿಪಶುವಾಗುತ್ತಿದ್ದಾರೆ. ಅಂತೆಯೇ ಇದೀಗ ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಅವರ ಹೆಸರಲ್ಲೇ ವಂಚಕನೊಬ್ಬ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.
ಹೌದು, ಕೇವಲ 500 ರೂಪಾಯಿಗಾಗಿ ದುಷ್ಕರ್ಮಿಯೊಬ್ಬ ಸುಪ್ರೀಂಕೋರ್ಟ್ ಸಿಜೆಐ ಡಿ.ವೈ.ಚಂದ್ರಚೂಡ್ ಹೆಸರನ್ನೇ ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿದ್ದ. ಡಿ.ವೈ.ಚಂದ್ರಚೂಡ್ ಅವರ ಹೆಸರಲ್ಲಿ ಫೇಸ್ ಬುಕ್ ಖಾತೆ ಶುರು ಮಾಡಿದ್ದ ದುಷ್ಕರ್ಮಿ, ವ್ಯಕ್ತಿಯೊಬ್ಬರಿಗೆ ಮೆಸೆಂಜರ್ ನಲ್ಲಿ ಮೆಸೇಜ್ ಮಾಡಿದ್ದಾನೆ.
“ಹಲೋ, ನಾನು ಸಿಜೆಐ. ಕೊಲಿಜಿಯಂ ತುರ್ತು ಸಭೆ ಹಮ್ಮಿಕೊಂಡಿದ್ದು ನಾನು ಕನ್ನಾಟ್ ಪ್ಲೇಸ್ ಸಿಲುಕಿಕೊಂಡಿದ್ದೇನೆ, ನೀವು ನನಗೆ ಕ್ಯಾಬ್ನಲ್ಲಿ ತೆರಳುವುದಕ್ಕಾಗಿ ₹ 500 ಕಳುಹಿಸಬಹುದೇ?” ಎಂದು ವಂಚಕ ಬರೆದಿದ್ದ. ನ್ಯಾಯಾಲಯಕ್ಕೆ ಮರಳಿದ ಬಳಿಕ ಹಣ ಮರಳಿಸುವುದಾಗಿಯೂ ಆತ ಹೇಳಿದ್ದ. ಸಂದೇಶ ಅಧಿಕೃತ ಎಂದು ಬಿಂಬಿಸುವುದಕ್ಕಾಗಿ ಐಪ್ಯಾಡ್ನಿಂದ ಈ ಸಂದೇಶ ಕಳಿಸಲಾಗುತ್ತಿದೆ ಎಂದು ವಂಚಕ ಬರೆದಿದ್ದ ಎನ್ನಲಾಗಿದೆ.
ಡಿ.ವೈ.ಚಂದ್ರಚೂಡ್ ಹೆಸರನ್ನ ದುರ್ಬಳಕೆ ಮಾಡಿಕೊಂಡು ಸೃಷ್ಠಿಸಿದ್ದ ಸಾಮಾಜಿಕ ಮಾಧ್ಯಮ ಫೇಸ್ ಬುಕ್ ಖಾತೆ ವಿರುದ್ಧ ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ಸೈಬರ್ ಅಪರಾಧದ ದೂರು ನೀಡಿದ್ದು, ಪೊಲೀಸರು ಎಫ್ ಐಆರ್ ದಾಖಲಿಸಿ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇಂತಹ ಸೈಬರ್ ವಂಚನೆಯಂತಹ ಪ್ರಕರಣಗಳು ಹೆಚ್ಚುತ್ತಲೇ ಇದ್ದು ಇದೀಗ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಹೆಸರನ್ನೇ ದುರ್ಬಳಕೆ ಮಾಡಿಕೊಂಡಿದ್ದು ಸಾಕಷ್ಟು ಆತಂಕವನ್ನುಂಟು ಮಾಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ