11/10/2026

Law Guide Kannada

Online Guide

ಸೇವೆಯಿಂದ ವಜಾಗೊಂಡ ನೌಕರರು ಸಿವಿಲ್ ದಾವೆ ಮೂಲಕ ಮರುನೇಮಕ ಕೋರುವಂತಿಲ್ಲ- ಸುಪ್ರೀಂ

ನವದೆಹಲಿ: ಸೇವೆಯಿಂದ ವಜಾಗೊಂಡ ನೌಕರರು ಸಿವಿಲ್ ದಾವೆಯ ಮೂಲಕ ಮರುನೇಮಕವನ್ನು ಕೋರುವಂತಿಲ್ಲ ಎಂದು ಸ್ಪಷ್ಟಪಡಿಸಿದ ಸುಪ್ರೀಂಕೋರ್ಟ್ ಸಿವಿಲ್ ಕೋರ್ಟ್ ಆದೇಶ ಎತ್ತಿ ಹಿಡಿದಿದೆ.

ಟಾಟಾ ಕಮ್ಯುನಿಕೇಷನ್ಸ್ ಲಿಮಿಟೆಡ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿವ್ ಚರಣ್ ದಾಸ್ ಎಂಬುವವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಶೀಲ್ ನಾಗು ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ತೀರ್ಪು ನೀಡಿದೆ. ವಜಾಗೊಂಡ ನೌಕರರು ಸಿವಿಲ್ ದಾವೆಯ ಮೂಲಕ ಮರುನೇಮಕವನ್ನು ಕೋರಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ನಿರ್ದಿಷ್ಟ ಪರಿಹಾರ ಕಾಯ್ದೆ, 1963ರ ಸೆಕ್ಷನ್ 14(1)(b) ಅಡಿಯಲ್ಲಿ ವೈಯಕ್ತಿಕ ಸೇವಾ ಒಪ್ಪಂದವನ್ನು ನಿರ್ದಿಷ್ಟವಾಗಿ ಜಾರಿಗೊಳಿಸುವಂತೆ ನ್ಯಾಯಾಲಯವನ್ನು ಕೋರಲು ಸಾಧ್ಯವಿಲ್ಲ. ಆದಾಗ್ಯೂ, ಅಂತಹ ನೌಕರನು ತನ್ನ ಸೇವೆಯನ್ನು ಕಾನೂನುಬಾಹಿರವಾಗಿ ಕೊನೆಗೊಳಿಸಿರುವುದಕ್ಕಾಗಿ ನಷ್ಟಪರಿಹಾರ (Damages)ವನ್ನು ಕೋರಬಹುದು ಎಂದು ನ್ಯಾಯಪೀಠ ತಿಳಿಸಿದೆ.
ವೈಯಕ್ತಿಕ ಸೇವಾ ಒಪ್ಪಂದವನ್ನು ನಿರ್ದಿಷ್ಟವಾಗಿ ಜಾರಿಗೊಳಿಸಲು ಸಾಧ್ಯವಿಲ್ಲದ ಕಾರಣ, ಮೇಲ್ಮನವಿದಾರರು ಸೇವೆಯಲ್ಲಿ ಮರುನೇಮಕದ ಪರಿಹಾರವನ್ನು ಕೋರಲು ಸಾಧ್ಯವಿಲ್ಲ. ಈ ಮಟ್ಟಿಗೆ ಹೈಕೋರ್ಟ್ ಅಭಿಪ್ರಾಯ ಸರಿಯಾಗಿದೆ.. ಆದರೆ ಮರುನೇಮಕವನ್ನು ಕೋರುವ ಬದಲು, ಅವರು ನಷ್ಟಪರಿಹಾರವನ್ನು (Damages) ಕೋರಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು.

ಮೇಲ್ಮನವಿದಾರರು ಆರಂಭದಲ್ಲೇ ಮರುನೇಮಕದ ಬದಲಾಗಿ ನಷ್ಟಪರಿಹಾರವನ್ನು ಕೋರಿದ್ದರೆ, ಅವರ ಸಿವಿಲ್ ದಾವೆ ಊರ್ಜಿತ (maintainable) ಆಗಿರುತ್ತಿತ್ತು ಮತ್ತು ವಾದಪತ್ರ (plaint) ವನ್ನು ತಿರಸ್ಕರಿಸುವ ಅಗತ್ಯವಿರುತ್ತಿರಲಿಲ್ಲ ಎಂದು ಪೀಠವು ತಿಳಿಸಿತು.

ಏನಿದು ವಿವಾದ
ಟಾಟಾ ಕಮ್ಯುನಿಕೇಷನ್ಸ್ ಲಿಮಿಟೆಡ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿವ್ ಚರಣ್ ದಾಸ್ ಅವರ ಸೇವೆಯನ್ನು ಸಂಸ್ಥೆಯು ಕೊನೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಮಧ್ಯಪ್ರದೇಶದ ಭೋಪಾಲ್ ನ ಸಿವಿಲ್ ಜಡ್ಜ್ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಿ, ತಮ್ಮನ್ನು ಪುನಃ ಸೇವೆಗೆ ನೇಮಿಸುವಂತೆ ಕೋರಿದ್ದರು. ಆದರೆ, ಸಂಸ್ಥೆಯು ಸಿವಿಲ್ ಪ್ರೊಸೀಜರ್ ಕೋಡ್ (CPC)ನ Order VII Rule 11 ಅಡಿಯಲ್ಲಿ ಅರ್ಜಿ ಸಲ್ಲಿಸಿ, ದಾವೆಯ ವಾದಪತ್ರ (plaint) ವನ್ನು ಆರಂಭಿಕ ಹಂತದಲ್ಲಿಯೇ ತಿರಸ್ಕರಿಸುವಂತೆ ಕೋರಿತು.

Order VII Rule 11 CPC ಅಡಿಯಲ್ಲಿ ದಾವೆಯ ಅರ್ಜಿಯು ಮೂಲಭೂತ ಕಾನೂನು ಅಥವಾ ಪ್ರಕ್ರಿಯಾತ್ಮಕ ಅವಶ್ಯಕತೆಗಳನ್ನು ಪೂರೈಸದಿದ್ದರೆ ನ್ಯಾಯಾಲಯವು ಆರಂಭಿಕ ಹಂತದಲ್ಲಿಯೇ plaint ಅನ್ನು ತಿರಸ್ಕರಿಸಬಹುದು. ವಿಚಾರಣಾ ನ್ಯಾಯಾಲಯವು ಸಂಸ್ಥೆಯ ಅರ್ಜಿಯನ್ನು ಅಂಗೀಕರಿಸಿ ಠಿಟಚಿiಟಿಣ ಅನ್ನು ತಿರಸ್ಕರಿಸಿತು. ನಿರ್ದಿಷ್ಟ ಪರಿಹಾರ ಕಾಯ್ದೆ, 1963ರ ಸೆಕ್ಷನ್ 14(1)(b) ಇಂತಹ ಪ್ರಕರಣದಲ್ಲಿ ಸೇವೆಗೆ ಮರುನೇಮಕ ಮಾಡುವ ಪರಿಹಾರವನ್ನು ನೀಡುವುದನ್ನು ನಿರ್ಬಂಧಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ನಂತರ ಮಧ್ಯಪ್ರದೇಶ ಹೈಕೋರ್ಟ್ ಸಹ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿಯಿತು. ಇದರಿಂದ ಶಿವ್ ಚರಣ್ ದಾಸ್ ಅವರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದರು. ಸುಪ್ರೀಂ ಕೋರ್ಟ್ ಸಜ ಹೈಕೋರ್ಟ್ ನ ಅಭಿಪ್ರಾಯಕ್ಕೆ ಸಮ್ಮತಿಸಿ, ಸಿವಿಲ್ ದಾವೆಯಲ್ಲಿ ಸೇವೆಗೆ ಮರುನೇಮಕದ ಪರಿಹಾರವನ್ನು ಕೋರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.