ಸುಪ್ರೀಂ ಕೋರ್ಟ್ ಗೆ ಪಾದಯಾತ್ರೆ: ವಿರೋಧಪಕ್ಷಗಳ ಈ ನಡೆ ʼಶುದ್ಧ ಮೂರ್ಖತನʼ- ಮಾಜಿ ಸಾಲಿಸಿಟರ್ ಜನರಲ್ ಕಟುಟೀಕೆ
ನವದೆಹಲಿ: ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಎಸ್ ಐಆರ್ ನಲ್ಲಿ ಅಕ್ರಮ ಮತ್ತು ಮತಗಳ್ಳತನ ಆರೋಪ ಮಾಡಿ ಸುಪ್ರೀಂ ಕೋರ್ಟ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ವಿರೋಧ ಪಕ್ಷಗಳ (ಇಂಡಿಯಾ ಒಕ್ಕೂಟನಡೆಯನ್ನು ಭಾರತದ ಮಾಜಿ ಸಾಲಿಸಿಟರ್ ಜನರಲ್ ಹಾಗೂ ಹಿರಿಯ ವಕೀಲ ಹರೀಶ್ ಸಾಳ್ವೆ ಕಟುವಾಗಿ ಟೀಕಿಸಿದ್ದಾರೆ.
ಈ ಕುರಿತು ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿದ, ಹರೀಶ್ ಸಾಳ್ವೆ ಅವರು, ವಿರೋಧ ಪಕ್ಷಗಳ ಈ ನಡೆ ಶುದ್ಧ ಮೂರ್ಖತನದಿಂದ ಕೂಡಿದೆ. ನ್ಯಾಯಾಂಗವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ನ್ಯಾಯಾಂಗದ ಸ್ವತಂತ್ರತೆ ಮತ್ತು ಘನತೆಯನ್ನು ಕಾಪಾಡುವುದು ಅತ್ಯಂತ ಮುಖ್ಯವಾಗಿದ್ದು, ರಾಜಕೀಯ ಭಿನ್ನಾಭಿಪ್ರಾಯಗಳನ್ನು ನ್ಯಾಯಾಂಗದ ಮೇಲೆ ಒತ್ತಡ ಹೇರುವ ರೀತಿಯಲ್ಲಿ ವ್ಯಕ್ತಪಡಿಸುವುದು ಸೂಕ್ತವಲ್ಲ ಎಂದು ಖಂಡಿಸಿದರು.
ಇದೇ ವೇಳೆ ಭಾರತದಲ್ಲಿ ನಡೆಯುತ್ತಿರುವ ಕೆಲವು ಪ್ರತಿಭಟನೆಗಳು ಮತ್ತು ಅಸ್ಥಿರತೆಯ ಹಿಂದೆ ವಿದೇಶಿ ಹಸ್ತಕ್ಷೇಪ ಹಾಗೂ ಆರ್ಥಿಕ ನೆರವು ಕೆಲಸ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಹರೀಶ್ ಸಾಳ್ವೆ ಅವರು, ನೆರೆಯ ರಾಷ್ಟ್ರಗಳಾದ ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಗಳನ್ನು ಉಲ್ಲೇಖಿಸಿದರು. ಭಾರತದಲ್ಲೂ ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ಮತ್ತು ದೇಶದ ಪ್ರಗತಿಯನ್ನು ತಡೆಯಲು ಯೋಜಿತ ಶ್ರಮ ನಡೆಯುತ್ತಿದೆ. ವಿಶೇಷವಾಗಿ ಅಮೆರಿಕ ಸೇರಿದಂತೆ ಕೆಲವು ವಿದೇಶಗಳು ಭಾರತದ ಬೆಳವಣಿಗೆಯಿಂದ ಸಂತೋಷವಾಗಿಲ್ಲ. ಭಾರತದಲ್ಲಿನ ಪ್ರತಿಭಟನೆಗಳಿಗೆ ವಿದೇಶಗಳಿಂದ ಹಣ ಹರಿಯುತ್ತಿದ್ದು, ಇವು ವಿದೇಶಿ ಶಕ್ತಿಗಳಿಂದ ಪ್ರಚೋದಿಸಲ್ಪಡುತ್ತಿವೆ ಎಂದು ಆರೋಪಿಸಿದರು.
ಪ್ರತಿಭಟನೆಗಳನ್ನು ಆಯೋಜಿಸಲು ವಿದೇಶಿ ಹಣ ಬಳಕೆಯಾಗುತ್ತಿದೆ. ಇಂತಹ ಚಟುವಟಿಕೆಗಳಿಗೆ ಹಣ ಎಲ್ಲಿಂದ ಬರುತ್ತಿದೆ ಎಂಬುದರ ಕುರಿತು ಪರಿಶೀಲನೆ ಅಗತ್ಯವಿದೆ ಎಂದು ಸಾಳ್ವೆ ಅವರು ತಿಳಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ ಒಕ್ಕೂಟ ಪ್ರತಿಭಟನೆ ನಡೆಸಿದ್ದು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು (CJI) ಭೇಟಿ ಮಾಡಲು ಪ್ರಯತ್ನಿಸಿದ್ದರು. ಆದರೆ, ಸಿಜೆಐ ಅವರು ಸೂಕ್ತ ಕಾರಣಗಳನ್ನು ನೀಡಿ ವಿರೋಧ ಪಕ್ಷಗಳಿಗೆ ಅಪಾಯಿಂಟ್ ಮೆಂಟ್ ನೀಡಲು ಸಮಯ ನಿರಾಕರಿಸಿದ್ದರು. ಆದರೆ ಅಪಾಯಿಂಟ್ಮೆಂಟ್ ಸಿಗದಿದ್ದರೂ ಸಹ ಇಂಡಿಯಾ ಒಕ್ಕೂಟ ನಾಯಕರು ಸುಪ್ರೀಂ ಕೋರ್ಟ್ಗೆ ಮೆರವಣಿಗೆ ಪಾದಯಾತ್ರೆ ನಡೆಸಿದ್ದರು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
