ನ್ಯಾಯ ಕೊಡಿಸುವ ವಕೀಲನಿಂದಲೇ ಎಸಿ ಸಹಿ ಫೋರ್ಜರಿ ಮಾಡಿ ವಂಚನೆ: ಬಿತ್ತು ಕ್ರಿಮಿನಲ್ ಕೇಸ್
ಯಾದಗಿರಿ: ಅನ್ಯಾಯಕ್ಕೊಳಗಾವರಿಗೆ ನ್ಯಾಯಕೊಡಿಸಬೇಕಾದ ವಕೀಲರೊಬ್ಬರು ಇದೀಗ ಜಮೀನಿನ ವಿವಾದ ಪ್ರಕರಣದಲ್ಲಿ ಉಪ ವಿಭಾಗಾಧಿಕಾರಿಯವರ ಸಹಿಯನ್ನೇ ಫೋರ್ಜರಿ ಮಾಡಿ ಕ್ರಿಮಿನಲ್ ಕೇಸ್ ಹಾಕಿಸಿಕೊಂಡು ಕಾನೂನಿನ ಕುಣಿಕೆಗೆ ಸಿಕ್ಕಿ ಹಾಕಿಕೊಂಡಿದ್ದಾರೆ.
ಹೌದು ವಕೀಲ ಶಂಕರ ಗುರು ಎಂಬುವವರ ವಿರುದ್ದವೇ ಉಪ ವಿಭಾಗಾಧಿಕಾರಿಯವರ ಸಹಿ ನಕಲು ಮಾಡಿರುವ ಆರೋಪ ಕೇಳಿ ಬಂದಿದ್ದು ಪೋಲಿಸರು ವಕೀಲ ಶಂಕರ್ ಗುರು ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ.
ಏನಿದು ಪ್ರಕರಣ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬರದೇವನಾಳದ 5 ಎಕರೆ 32 ಗುಂಟೆ ಜಮೀನಿನಲ್ಲಿ ಈರಣ್ಯ ಮಲ್ಲಪ್ಪ ಮತ್ತು ಮಲ್ಲಪ್ಪ ಬಸಪ್ಪ ಎಂಬವರು 1954 ರಿಂದ 1997 ರವರೆಗೆ ನಿರಂತರ ಸಾಗುವಳಿ ಮಾಡುತ್ತಾ ಬಂದಿದ್ದರು. ಆದರೆ ಈ ಜಮೀನು ಸರಕಾರದ್ದು ಎಂದು ಹುಣಸಗಿ ತಹಶೀಲ್ದಾರರು ಆರ್ಟಿಸಿಯಲ್ಲಿ ಅವರ ಹೆಸರನ್ನು ರದ್ದುಪಡಿಸಿದ್ದರು.
ತಹಶೀಲ್ದಾರರ ಕ್ರಮವನ್ನು ಪ್ರಶ್ನಿಸಿ ಪಹಣಿಯಲ್ಲಿ ತಮ್ಮ ಹೆಸರು ಸೇರಿಸುವಂತೆ ಕೋರಿ ವಕೀಲ ಶಾಂತಕುಮಾರ ಅವರ ಮೂಲಕ ಉಪ ವಿಭಾಗಾಧಿಕಾರಿಯವರಿಗೆ ಈರಣ್ಣ ಮಲ್ಲಪ್ಪ ಮತ್ತು ಮಲ್ಲಪ್ಪ ಬಸಪ್ಪ ಮೇಲ್ಮನವಿ ಸಲ್ಲಿಸಿದರು.
ಈ ಕುರಿತು ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಎಸಿಯವರು ಹುಣಸಗಿ ತಹಶೀಲ್ದಾರರಿಗೆ ಸೂಚಿಸಿದ್ದರು. ಅಂತೆಯೇ ವಿಚಾರಣೆ ನಡೆಸಿ ಇದು ಸರಕಾರದ ಜಮೀನು ಎಂದು ತಹಶೀಲ್ದಾರರು ವರದಿ ನೀಡಿದ್ದರು.
ಈ ಆಧಾರದಲ್ಲಿ ಎಸಿಯವರು ಅರ್ಜಿದಾರರು ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ್ದರು. ನಂತರ ಅರ್ಜಿದಾರರು ಈ ಆದೇಶವನ್ನು ವಕೀಲ ಶಂಕರ ಗುರು ಎಂಬುವರಿಗೆ ತೋರಿಸಿದಾಗ, ತಾನು ಜಮೀನನ್ನು ತಮ್ಮ ಹೆಸರಲ್ಲಿ ಮಾಡಿಸಿ ಕೊಡುವುದಾಗಿ ಹೇಳಿದರು. ಆ ಬಳಿಕ, 2024ರ ಡಿಸೆಂಬರ್ 3ರಂದು ನಕಲಿ ಆದೇಶ ಪ್ರತಿ ತಯಾರಿಸಿದ್ದ ವಕೀಲ ಶಂಕರ ಗುರು, ಈ ಆದೇಶಕ್ಕೆ ಉಪ ವಿಭಾಗಾಧಿಕಾರಿಯವರ ಸಹಿ ಫೋರ್ಜರಿ ಮಾಡಿ ಅರ್ಜಿದಾರರಿಗೆ ನೀಡಿದ್ದರು.
ಈ ನಕಲಿ ದಾಖಲೆ ಸೃಷ್ಟಿಸಿ ಅರ್ಜಿದಾರರಿಂದ “ನಿಮ್ಮ ಹೆಸರಿನಲ್ಲಿ ಜಮೀನು ಮಾಡಿಸಿದ್ದೇನೆ” ಎಂದು ಹೇಳಿ ಎಂಟು ಲಕ್ಷ ನಗದು ಹಾಗೂ ಫೋನ್ ಪಡೆದುಕೊಂಡಿದ್ದರು. ಇದಾದ ಬಳಿಕ ಅರ್ಜಿದಾರರು ವಿಭಾಗಾಧಿಕಾರಿಯವರನ್ನು ಸಂಪರ್ಕಿಸಿದ್ದು ಈ ವೇಳೆ ತಮ್ಮ ಸಹಿ ಫೋರ್ಜರಿ ಆಗಿರುವುದು ಉಪವಿಭಾಗಾಧಿಕಾರಿಗೆ ತಿಳಿದು ಬಂದಿದೆ.
ಸುಳ್ಳು ಆದೇಶ ಪ್ರತಿಯನ್ನು ಅರ್ಜಿದಾರರಿಗೆ ನೀಡಿರುವುದನ್ನು ಗಮನಿಸಿದ ಉಪವಿಭಾಗಾಧಿಕಾರಿ, ಕೂಡಲೇ ತಕ್ಷಣ, ವಕೀಲ ಶಂಕರ ಗುರು ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದರು. ಉಪ ವಿಭಾಗಾಧಿಕಾರಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಬಾಪು ಗೌಡ ಧೋರನಹಳ್ಳಿ ಅವರು ನೀಡಿದ ದೂರಿನ ಆಧಾರದಲ್ಲಿ ನಗರ ಪೊಲೀಸ್ ಠಾಣೆ ಪೋಲಿಸರು ವಕೀಲ ಶಂಕರ್ ಗುರು ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
