20/05/2025

Law Guide Kannada

Online Guide

ನಾಲ್ಕು ಗೋಡೆಗಳ ಮಧ್ಯೆ ನಿಂದನೆಯನ್ನು ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪರಿಗಣಿಸಲಾಗದು- ಸುಪ್ರೀಂ ಕೋರ್ಟ್

ನವದೆಹಲಿ: ನಾಲ್ಕು ಗೋಡೆಗಳ ನಡುವಿನ ನಿಂದನೆಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್ಸಿ-ಎಸ್ಟಿ) ಮೇಲಿನ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ಪರಿಗಣಿಸಲಾಗದು, ಸಾರ್ವಜನಿಕರು ಇರುವ ಸ್ಥಳದಲ್ಲಿ ನಿಂದಿಸಿದರಷ್ಟೇ ಅದು ಅಪರಾಧ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಸುಪ್ರೀಂಕೋರ್ಟ್ ನ್ಯಾ. ಬಿ.ಆರ್.ಗವಾಯಿ ಮತ್ತು ನ್ಯಾ.ಆಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಈ ಅಭಿಪ್ರಾಯಪಟ್ಟಿದೆ. ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿದ ನ್ಯಾಯಪೀಠವು, ಆರೋಪಿಯು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸದಸ್ಯರನ್ನು ಹೊರಗಿನವರು ಅಥವಾ ಸಾರ್ವಜನಿಕರು ಇರುವ ಸ್ಥಳದಲ್ಲಿ ನಿಂದಿಸಿದರೆ ಮಾತ್ರ ಅದು ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯಿದೆಯ ಕಲಂ 3(1) (ಎಸ್) ಅಡಿಯಲ್ಲಿರುವ ಅಪರಾಧ ಎನಿಸುತ್ತದೆ. ‘ಹೊರಗಿನವರು ಯಾರೂ ಇಲ್ಲದ ಸಮಯದಲ್ಲಿ ಅಥವಾ ನಾಲ್ಕು ಗೋಡೆಗಳ ನಡುವಿನ ನಿಂದನೆಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್ಸಿ-ಎಸ್ಟಿ) ಮೇಲಿನ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ಪರಿಗಣಿಸಲಾಗದು. ಅರೋಪಿಯು ನಿರ್ದಿಷ್ಟ ವ್ಯಕ್ತಿಗೆ ನಿಂದಿಸಿರುವುದನ್ನು ಸಾರ್ವಜನಿಕರು ವೀಕ್ಷಿಸಿರಬೇಕು ಅಥವಾ ಅದನ್ನು ಕೇಳಿಸಿಕೊಂಡಿರಬೇಕು ಎಂದು ನ್ಯಾಪೀಠ ತಿಳಿಸಿದೆ.

ಪ್ರಕರಣದ ವಿವರ
ತಿರುಚ್ಚಿಯ ಕಂದಾಯ ನಿರೀಕ್ಷಕರನ್ನು ಅವರ ಜಾತಿಯ ಹೆಸರು ಹೇಳಿ ನಿಂದಿಸಿದ ಆರೋಪ ಕರುಪ್ಪುದಯಾರ್ ಎಂಬುವವರ ಮೇಲಿತ್ತು. ಕಂದಾಯ ನಿರೀಕ್ಷಕರು ತಮ್ಮ ಕಚೇರಿಯಲ್ಲಿದ್ದಾಗ ಅಲ್ಲಿಗೆ ಬಂದ ಆರೋಪಿ ಅರ್ಜಿಯೊಂದರ ಕುರಿತು ವಿಚಾರಿಸಿದ್ದಾರೆ. ಆದರೆ, ಅವರು ನೀಡಿದ ಉತ್ತರದಿಂದ ತೃಪ್ತಿಗೊಳ್ಳದ ಆರೋಪಿಯು ಕಂದಾಯ ನಿರೀಕ್ಷಕರ ಜಾತಿಯ ಹೆಸರು ಹೇಳಿ ನಿಂದಿಸಿ, ಅವಮಾನಿಸಿದ್ದಾರೆ. ನಂತರ ದೂರುದಾರರ ಮೂವರು ಸಹೋದ್ಯೋಗಿಗಳು ಅಲ್ಲಿಗೆ ಬಂದು ಆರೋಪಿಯನ್ನು ಸಮಾಧಾನಪಡಿಸಿ ಅಲ್ಲಿಂದ ಕರೆದೊಯ್ದರು ಎಂಬುದನ್ನು ಪೀಠವು ಗಮನಿಸಿತು.

2021ರ ಸೆ.2ರಂದು ದಾಖಲಾಗಿರುವ ಎಫ್ಐಆರ್ ನಲ್ಲಿರುವ ವಿವರಗಳ ಪ್ರಕಾರ ದೂರುದಾರರ ಕಚೇರಿಯ ನಾಲ್ಕು ಗೋಡೆಗಳ ನಡುವೆ ಈ ಘಟನೆ ನಡೆದಿದೆ. ಅವರ ಸಹೋದ್ಯೋಗಿಗಳು ಘಟನೆಯ ನಂತರ ಅಲ್ಲಿಗೆ ಬಂದಿದ್ದಾರೆ ಎಂದು ಪೀಠವು ತಿಳಿಸಿದ್ದು ಪ್ರಕರಣವನ್ನ ರದ್ದುಗೊಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.