07/03/2026

Law Guide Kannada

Online Guide

ಹೈಕೋರ್ಟ್ ಜಡ್ಜ್ ವಿರುದ್ದ ಆರೋಪವು ನ್ಯಾಯಾಂಗ ನಿಂದನೆ: ಕ್ಷಮಿಸಲು ಸಾಧ್ಯವಿಲ್ಲ – ಸುಪ್ರೀಂ ಕೋರ್ಟ್ ಅಸಮಾಧಾನ

ನವದೆಹಲಿ: ತೆಲಂಗಾಣ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಮಾನಹಾನಿಕರ ಆರೋಪ ಮಾಡಿದ ಅರ್ಜಿದಾರ ಹಾಗೂ ಅವರ ವಕೀಲರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, ಇದು ನ್ಯಾಯಾಂಗ ನಿಂದನೆಯಾಗಿದ್ದು ಇದನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ತಾಕೀತು ಮಾಡಿತು.

ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಧೀಶ (ಸಿಜೆಐ) ಬಿ.ಆರ್ ಗವಾಯಿ ಹಾಗೂ ನ್ಯಾಯಾಧೀಶರಾದ ಕೆ. ವಿನೋದ್ ಚಂದ್ರನ್ ಮತ್ತು ಅತುಲ್ ಎಸ್. ಚಂದೂರ್ಕರ ಅವರಿದ್ದ ಪೀಠವು, ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧದ ಆರೋಪಗಳು ನ್ಯಾಯಾಂಗ ನಿಂದನೆಯಾಗಿದ್ದು, ಇದನ್ನು ಕ್ಷಮಿಸಲು ಸಾಧ್ಯವಿಲ್ಲ’ ಎಂದು ಹೇಳಿತು.

ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ಅವರ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆಯಡಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿದ ನ್ಯಾಯಮೂರ್ತಿ ವಿರುದ್ಧ ಪಕ್ಷಪಾತದ ಆರೋಪ ಮಾಡಿ ಎನ್.ಪೆಡ್ಡಿ ರಾಜು ಅವರು ಅರ್ಜಿ ಸಲ್ಲಿಸಿದ್ದರು.

‘ನ್ಯಾಯಮೂರ್ತಿಗಳನ್ನು ನಿಯಂತ್ರಿಸಲು ಹಾಗೂ ಅವರ ವಿರುದ್ಧ ಇಂತಹ ಆರೋಪ ಮಾಡುವುದನ್ನು ನಾವು ಅನುಮತಿಸುವುದಿಲ್ಲ. ಹೈಕೋರ್ಟ್ ನ್ಯಾಯಮೂರ್ತಿಗಳೂ ಸುಪ್ರೀಂ ಕೋರ್ಟ್ ನ್ಯಾಯಧೀಶರಂತೆಯೇ ಗೌರವ ಮತ್ತು ವಿನಾಯಿತಿ ಹೊಂದಿರುವ ಸಾಂವಿಧಾನಿಕ ಕಾರ್ಯಕರ್ತರು’ ಎಂದು ವಿಚಾರಣೆ ವೇಳೆ ಸಿಜೆಐ ಗವಾಯಿ ಅಭಿಪ್ರಾಯಿಸಿದರು.

ಈಗಾಗಲೇ ವಿಲೇವಾರಿ ಮಾಡಿರುವ ಪ್ರಕರಣವನ್ನು ತೆಲಂಗಾಣ ಹೈಕೋರ್ಟ್ ಮತ್ತೆ ಕೈಗೆತ್ತಿಕೊಳ್ಳಬೇಕು. ಕ್ಷಮಾದಾನವನ್ನು ನೀಡಬೇಕೆ ಬೇಡವೇ ಎಂಬುದನ್ನು ನ್ಯಾಯಧೀಶರು ಒಂದು ವಾರದೊಳಗೆ ನಿರ್ಧರಿಸುತ್ತಾರೆ ಎಂದು ಪೀಠ ಹೇಳಿತು. ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲರಾದ ಸಂಜಯ್ ಹೆಗಡೆ ಅವರು ತಕ್ಷಣವೇ ಬೇಷರತ್ತಾಗಿ ಕ್ಷಮೆಯಾಚಿಸಬೇಕು ಎಂದು ಆದೇಶಿಸಿದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.