ಆರೋಪಿಗೆ FIR ಆನ್ ಲೈನ್ ಪ್ರತಿ ಪಡೆಯುವ ಹಕ್ಕು: ಮಹತ್ವದ ತೀರ್ಪು ನೀಡಿದ ಸುಪ್ರೀಂ
ನವದೆಹಲಿ: ಪ್ರಕರಣ ದಾಖಲಾದ 24 ಗಂಟೆಯೊಳಗೆ ಪ್ರಥಮ ವರ್ತಮಾನ ವರದಿ (FIR) ಆನ್ ಲೈನ್ ಪ್ರತಿ ಪಡೆಯಲು ಆರೋಪಿಗೆ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ಯೂತ್ ಬಾರ್ ಅಸೋಸಿಯೇಷನ್ ವರ್ಸಸ್ ಯುನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಸಿ. ನಾಗಪ್ಪನ್ ಅವರಿದ್ದ ನ್ಯಾಯಪೀಠವು ಈ ತೀರ್ಪು ನೀಡಿದ್ದು, ಎಫ್.ಐ.ಆರ್ ದಾಖಲಾದ 24 ಗಂಟೆಯೊಳಗೆ ಅದರ ಆನ್ ಲೈನ್ ಪ್ರತಿಯನ್ನು ಪಡೆಯುವ ಹಕ್ಕು ಆರೋಪಿಗೆ ಇದೆ. ಎಫ್ ಐಆರ್ ಇಲ್ಲದೇ ಆರೋಪಿಗಳು ತಮ್ಮ ವಿರುದ್ಧದ ನಿರ್ದಿಷ್ಟ ಆರೋಪಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಪರಿಣಾಮಕಾರಿಯಾಗಿ ನಿರೀಕ್ಷಣಾ ಜಾಮೀನು ಅಥವಾ ಪ್ರಥಮ ವರ್ತಮಾನ ವರದಿಗಳನ್ನು ರದ್ದುಗೊಳಿಸುವಂತಹ ಕಾನೂನು ಪರಿಹಾರಗಳನ್ನು ಪಡೆಯುವ, ಆರೋಪಿಗಳ ಅವಕಾಶವನ್ನು ನಿರಾಕರಿಸುತ್ತದೆ ಎಂದು ತೀರ್ಪು ಹೇಳಿದೆ.
ಸಂವಿಧಾನದ 21ನೇ ಪರಿಚ್ಛೇದದ ಅಡಿಯಲ್ಲಿ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು, ಸ್ವಾತಂತ್ರದ ಹರಣಕ್ಕೆ ಕಾರಣವಾಗುವ ಆರೋಪಗಳನ್ನು ತಿಳಿದುಕೊಳ್ಳುವ ಹಕ್ಕನ್ನು ಒಳಗೊಂಡಿದೆ. ಆರೋಪಿಯು ಕಾನೂನಿನ ಪ್ರಕಾರ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಆರಂಭಿಕ ಹಂತದಲ್ಲಿ ಪ್ರಥಮ ವರ್ತಮಾನ ವರದಿಯ ಪ್ರತಿಯನ್ನು ಪಡೆಯುವ ಅನಿರ್ದಿಷ್ಟ ಹಕ್ಕನ್ನು ಹೊಂದಿದ್ದಾನೆ. ಪ್ರಥಮ ವರ್ತಮಾನ ವರದಿಯ ರಹಸ್ಯವನ್ನು ಇಟ್ಟುಕೊಳ್ಳುವುದು ನೈಸರ್ಗಿಕ ನ್ಯಾಯದ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.
ಅದ್ದರಿಂದ ಎಫ್ ಐಆರ್ ನೋಂದಣಿಯಾದ 24 ಗಂಟೆಗಳ ಒಳಗೆ, ಎಲ್ಲಾ ಪ್ರಥಮ ವರ್ತಮಾನ ವರದಿಗಳನ್ನು ಅಧಿಕೃತ ಪೊಲೀಸ್ ಅಥವಾ ಸರ್ಕಾರಿ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಬೇಕು ಎಂದು ನ್ಯಾಯಪೀಠವು ನಿರ್ದೇಶಿಸಿದ್ದು, ಸಂಪರ್ಕ ಸಮಸ್ಯೆಗಳಿರುವ ಪ್ರದೇಶಗಳಿಗೆ ಮಾತ್ರ ಈ ಕಾಲಮಿತಿಯನ್ನು 48 ಅಥವಾ 72 ಗಂಟೆಗಳವರೆಗೆ ವಿಸ್ತರಿಸಲಾಗಿದೆ. ಲೈಂಗಿಕ ಅಪರಾಧಗಳು ಅಥವಾ ಭಯೋತ್ಪಾದನೆಯನ್ನು ಒಳಗೊಂಡ ಸೂಕ್ಷ್ಮ ಪ್ರಕರಣಗಳಲ್ಲಿ ಇದರಿಂದ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದೆ
ಅಲ್ಲಿ ಅಪ್ ಲೋಡ್ ಮಾಡದಿರಲು ಪೊಲೀಸ್ ಸೂಪರಿಂಟೆಂಡೆಂಟ್ ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟದ ಅಧಿಕಾರಿಯೊಬ್ಬರು ನಿರ್ಧಾರ ತೆಗೆದುಕೊಳ್ಳಬೇಕು. ಅಪ್ ಲೋಡ್ ಮಾಡದಿದ್ದರೆ, *ಆರೋಪಿಯು ಮ್ಯಾಜಿಸ್ಟ್ರೇಟ್ನಿಂದ ಪ್ರಮಾಣೀಕೃತ ಪ್ರತಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ, ಮತ್ತು ಆ ದೃಢೀಕೃತ ನಕಲನ್ನು ಎರಡು ಕೆಲಸದ ದಿನಗಳಲ್ಲಿ ಒದಗಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
