06/03/2026

Law Guide Kannada

Online Guide

AI ಸೃಷ್ಠಿಯ ನಕಲಿ ತೀರ್ಪುಗಳ ಅವಲಂಬನೆ: ಲೋಪವಷ್ಟೇ ಅಲ್ಲ, ಅದು ದುರ್ನಡತೆ-ಸುಪ್ರೀಂಕೋರ್ಟ್ ಗರಂ

ನವದೆಹಲಿ: ಕೃತಕ ಬುದ್ಧಿಮತ್ತೆ (ಆರ್ಟಿಫೀಷಿಯಲ್ ಇಂಟೆಲಿಜೆನ್ಸಿ) ಮೂಲಕ ಸೃಷ್ಟಿಸಿದ ಅಸ್ತಿತ್ವದಲ್ಲೇ ಇಲ್ಲದ ಅಥವಾ ನಕಲಿ ತೀರ್ಪುಗಳನ್ನು ವಿಚಾರಣಾ ನ್ಯಾಯಾಲಯಗಳು ಪರಿಗಣಿಸುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಇದು ಜಡ್ಜ್ ಗಳ ಲೋಪವಷ್ಟೇ ಅಲ್ಲ ದುರ್ನಡತೆ ಎಂದು ಸುಪ್ರೀಂಕೋರ್ಟ್ ಆತಂಕ ವ್ಯಕ್ತಪಡಿಸಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕೃತಕ ಬುದ್ಧಿಮತ್ತೆ (ಆರ್ಟಿಫೀಷಿಯಲ್ ಇಂಟೆಲಿಜೆನ್ಸಿ) ಸಹಾಯದಿಂದ ಸೃಷ್ಟಿಸಿದ ನಕಲಿ ತೀರ್ಪುಗಳನ್ನು ಅಧರಿಸಿ ವಿಚಾರಣಾ ನ್ಯಾಯಾಲಯಗಳು ನೀಡುವ ತೀರ್ಪು ಲೋಪವಷ್ಟೇ ಅಲ್ಲ, ಅದನ್ನು ದುರ್ನಡತೆ ಎಂದು ಪರಿಗಣಿಸಬೇಕಾಗುತ್ತದೆ ಹೇಳಿದೆ. ಅಲ್ಲದೆ ಅಟಾರ್ನಿ ಜನರಲ್ ಆರ್. ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮಹಾ ಮತ್ತು ಭಾರತೀಯ ವಕೀಲರ ಸಂಘಕ್ಕೆ (ಬಿಸಿಐ) ನೋಟಿಸ್ ಜಾರಿ ಮಾಡಿದ್ದು, ಈ ವಿಷಯದಲ್ಲಿ ಅಮಿಕಸ್ ಕ್ಯೂರಿಯಾಗಿ ನ್ಯಾಯಪೀಠಕ್ಕೆ ನೆರವಾಗಲು ಹಿರಿಯ ವಕೀಲ ಶ್ಯಾಮ್ ದಿವಾನ್ ಅವರನ್ನು ನೇಮಿಸಿದೆ.

ಆಂಧ್ರ ಪ್ರದೇಶ ಹೈಕೋರ್ಟ್ ಜನವರಿಯಲ್ಲಿ ನೀಡಿದ್ದ ತಡೆಯಾಜ್ಞೆ ಕುರಿತ ಅದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಈ ವಿಷಯವು ಸುಪ್ರೀಂ ಕೋರ್ಟ್ ಮುಂದೆ ಬಂದಿತು.

ಏನಿದು ಪ್ರಕರಣ?
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ, ಸ್ಥಳದ ಭೌತಿಕ ಸ್ಥಿತಿಗತಿಗಳನ್ನು ಪರಿಶೀಲಿಸಲು ವಿಚಾರಣಾ ನ್ಯಾಯಾಲಯವು ಅಡ್ವಕೇಟ್ ಕಮಿಷನರ್ ಅವರನ್ನು ನೇಮಿಕ ಮಾಡಿತ್ತು. ಅಡ್ವಕೇಟ್ ಕಮಿಷನರ್ ನೀಡಿದ ವರದಿಗೆ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಕಳೆದ ವರ್ಷ ಆಗಸ್ಟ್ ನಲ್ಲಿ ಈ ಆಕ್ಷೇಪಣೆಗಳನ್ನು ವಜಾಗೊಳಿಸಿದ್ದ ವಿಚಾರಣಾ ನ್ಯಾಯಾಲಯವು ಈ ವೇಳೆಕೆಲವು ಹಿಂದಿನ ತೀರ್ಪುಗಳನ್ನು ಉದಾಹರಣೆಯಾಗಿ ನೀಡಿತ್ತು. ಅರ್ಜಿದಾರರು ಈ ತೀರ್ಪುಗಳ ವಿರುದ್ಧ ಮೇಲ್ಮನವಿ ಸಲ್ಲಿಸಿ, ‘ನ್ಯಾಯಾಲಯ ಉಲ್ಲೇಖಿಸಿರುವ ಆ ತೀರ್ಪುಗಳು ಅಸ್ತಿತ್ವದಲ್ಲೇ ಇಲ್ಲ, ಅವು ನಕಲಿ’ ಎಂದು ವಾದ ಮಂಡಿಸಿದ್ದರು.

ನಂತರ, ಹೈಕೋರ್ಟ್ ಅಕ್ಷೇಪಗಳನ್ನು ಪರಿಶೀಲಿಸಿದಾಗ, ತೀರ್ಪುಗಳು ಎಐ ಸಹಾಯದಿಂದ ಸೃಷ್ಟಿಯಾದವು ಎಂಬುದು ತಿಳಿದುಬಂದಿತ್ತು. ಹೈಕೋರ್ಟ್ ಈ ಬಗ್ಗೆ ಎಚ್ಚರಿಕೆ ನೀಡಿತ್ತಾದರೂ, ಅಂತಿಮವಾಗಿ ವಿಚಾರಣಾ ನ್ಯಾಯಾಲಯದ ನಿರ್ಧಾರವನ್ನೇ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೊರೆ ಹೋಗಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಗೆ ಒಪ್ಪಿಗೆ ಸೂಚಿಸಿ ಸುಪ್ರೀಂಕೋರ್ಟ್ ನ್ಯಾಯಪೀಠವು ನೋಟಿಸ್ ಜಾರಿ ಮಾಡಿದೆ.

‘ಕೃತಕ ಬುದ್ಧಿಮತ್ತೆ (ಆರ್ಟಿಫೀಷಿಯಲ್ ಇಂಟೆಲಿಜೆನ್ಸಿ) ಮೂಲಕ ಸೃಷ್ಟಿಸಿದ ಅಸ್ತಿತ್ವದಲ್ಲೇ ಇಲ್ಲದ ನಕಲಿ ತೀರ್ಪುಗಳನ್ನು ವಿಚಾರಣಾ ನ್ಯಾಯಾಲಯಗಳು ಅವಲಂಬಿಸಿರುವುದು ಆತಂಕಕಾರಿ ವಿಷಯ. ಇದನ್ನು ನಾವು ಗಮನಿಸಿದ್ದೇವೆ. ಇದು ನ್ಯಾಯಾಂಗ ಪ್ರಕ್ರಿಯೆಯ ವಿಶ್ವಾಸಾರ್ಹತೆ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರ ಪರಿಣಾಮಗಳು ಮತ್ತು ಹೊಣೆಗಾರಿಕೆಯನ್ನು ಪರಿಶೀಲಿಸಲು ನಾವು ಬಯಸುತ್ತೇವೆ’ ಎಂದು ನ್ಯಾಯಪೀಠ ತಿಳಿಸಿತು.

ಅಸ್ತಿತ್ವದಲ್ಲಿ ಇಲ್ಲದ ಅಥವಾ ನಕಲಿ ತೀರ್ಪುಗಳ ಆಧಾರದ ಮೇಲೆ ತೆಗೆದುಕೊಳ್ಳುವ ನಿರ್ಧಾರವು ಕೇವಲ ನಿರ್ಧಾರ ತೆಗೆದುಕೊಳ್ಳುವಲ್ಲಿನ ದೋಷವಷ್ಟೇ ಅಲ್ಲ, ಬದಲಿಗೆ, ಇದು ದುರ್ನಡತೆಯಾಗುತ್ತದೆ. ಜತೆಗೆ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ನಾವು ಈ ವಿಷಯವನ್ನು ಹೆಚ್ಚು ವಿವರವಾಗಿ ಪರಿಶೀಲಿಸುವುದು ಅನಿವಾರ್ಯವಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

‘ಮೇಲ್ಮನವಿ ಅರ್ಜಿಯ ಇತ್ಯರ್ಥ ಬಾಕಿ ಇರುವವರೆಗೆ, ಅಡ್ವಕೇಟ್ ಕಮಿಷನರ್ ವರದಿಯ ಆಧಾರದ ಮೇಲೆ ವಿಚಾರಣಾ ನ್ಯಾಯಾಲಯವು ಮುಂದಿನ ಕ್ರಮ ಕೈಗೊಳ್ಳಬಾರದು’ ಎಂದು ಸೂಚಿಸಿದ ನ್ಯಾಯಪೀಠವು ವಿಚಾರಣೆಯನ್ನು ಮಾರ್ಚ್ 10ಕ್ಕೆ ಮುಂದೂಡಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.