ವಿಮಾನ ನಿಲ್ದಾಣದಲ್ಲಿ ನಮಾಜ್ ಗೆ ಅವಕಾಶ ಕೋರಿದ್ದ ಅರ್ಜಿ ವಜಾ: ಧಾರ್ಮಿಕ ಹಕ್ಕಿಗಿಂತ ಭದ್ರತೆ ಮುಖ್ಯ ಎಂದ ಕೋರ್ಟ್
ಮುಂಬೈ: ವಿಮಾನ ನಿಲ್ದಾಣದಲ್ಲಿ ನಮಾಜ್ ಮಾಡಲು ಅವಕಾಶ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದ ಬಾಂಬೆ ಹೈಕೋರ್ಟ್, ಧಾರ್ಮಿಕ ಹಕ್ಕಿಗಿಂತ ಭದ್ರತೆ ಮುಖ್ಯವಾದ ವಿಚಾರ . ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಅಭಿಪ್ರಾಯ ಪಟ್ಟಿದೆ.
ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣದಲ್ಲಿ ಪ್ರಾರ್ಥನೆ ಸಲ್ಲಿಸಲು ನಿರ್ಮಿಸಿದ್ದ ತಾತ್ಕಾಲಿಕ ಶೆಡ್ಡನ್ನು ಅಧಿಕಾರಿಗಳು ತೆಗೆದುಹಾಕಿದ್ದಾರೆ. ನಮಗೆ ನಮಾಜ್ ಮಾಡಲು ಅವಕಾಶ ನೀಡಬೇಕು ಎಂದು ಕೋರಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟ್ಯಾಕ್ಸಿ ಚಾಲಕರು ಅರ್ಜಿ ಸಲ್ಲಿಸಿದ್ದರು. ಅಲ್ಲದೇ, ಅರ್ಜಿಯಲ್ಲಿ ಚಾಲಕರು ಅದೇ ಸ್ಥಳದಲ್ಲಿ ಅಥವಾ ಹತ್ತಿರದ ಯಾವುದೇ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ. ಅರ್ಜಿದಾರರಿಗೆ ನಮಾಜ್ ಮಾಡಲು ಪರ್ಯಾಯ ಸ್ಥಳ ನೀಡಬಹುದೇ ಎಂದು ತನಿಖೆ ನಡೆಸುವಂತೆ ಕೋರ್ಟ್ ಪೊಲೀಸ್ ಮತ್ತು ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಬಳಿಕ ಪೊಲೀಸರು ತನಿಖೆ ಮಾಡಿ ವರದಿ ಸಲ್ಲಿಸಿದ್ದರು.
ವರದಿಯಲ್ಲಿ, ಏಳು ಸ್ಥಳಗಳನ್ನು ಸಮೀಕ್ಷೆ ಮಾಡಲಾಗಿದೆ, ಆದರೆ ಜನದಟ್ಟಣೆ, ಭದ್ರತಾ ಕಾಳಜಿ ಮತ್ತು ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಯಿಂದಾಗಿ ಯಾವುದೂ ಸೂಕ್ತವಾಗಿಲ್ಲ ಎಂದು ಅಧಿಕಾರಿಗಳು ವರದಿ ನೀಡಿದ್ದರು. ವರದಿಯನ್ನು ನೋಡಿದ ನಂತರ, ಹೈಕೋರ್ಟ್ ವಿಮಾನ ನಿಲ್ದಾಣದ ಸುತ್ತಲೂ ಪ್ರಾರ್ಥನೆ ಸಲ್ಲಿಸಲು ಯಾವುದೇ ಸ್ಥಳವನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಅದು ಧರ್ಮವಾಗಲಿ ಅಥವಾ ಇನ್ನೇನೇ ಆಗಿರಲಿ, ಭದ್ರತೆ ಮೊದಲು. ಪ್ರತಿಯೊಂದು ಧರ್ಮದ ಜನರು ಈ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುತ್ತಾರೆ, ಆದ್ದರಿಂದ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.
ಅರ್ಜಿದಾರರು ಬೇರೆ ಸ್ಥಳವನ್ನು ಹುಡುಕಿಕೊಳ್ಳಬೇಕು ಸಂಬಂಧಪಟ್ಟ ಪ್ರದೇಶದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಮದರಸಾ ಇದ್ದು, ಅಲ್ಲಿ ಪ್ರಾರ್ಥನೆ ಸಲ್ಲಿಸಬಹುದು ಎಂದು ನ್ಯಾಯಪೀಠವು ಸಲಹೆ ನೀಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
