19/05/2025

Law Guide Kannada

Online Guide

ಜನನ ಮರಣ ನೋಂದಣಿ ಕಾಯ್ದೆ -1969ಗೆ ತಿದ್ದುಪಡಿ ಅವಶ್ಯಕ: ಹೈಕೋರ್ಟ್

ಬೆಂಗಳೂರು: ಹೆಸರು ಬದಲಾವಣೆ ಮಾಡಲು ಬಯಸುವ ಪೋಷಕರು ಅಥವಾ ಮಕ್ಕಳು ಎದುರಿಸುತ್ತಿರುವ ತೊಂದರೆಗಳನ್ನು ಗಮನಿಸಿದ ಕರ್ನಾಟಕ ಹೈಕೋರ್ಟ್, ಜನನ ಮರಣ ನೋಂದಣಿ ಕಾಯ್ದೆ-1969ಗೆ ತಿದ್ದುಪಡಿ ಮಾಡುವುದು ಅಗತ್ಯ ಎಂದು ಹೇಳಿರುವ ಕರ್ನಾಟಕ ಹೈಕೋರ್ಟ್, ಜನನ ಮತ್ತು ಮರಣ ನೋಂದಣಿ ಕಾಯ್ದೆ ಅಥವಾ ನಿಯಮಗಳಿಗೆ ತಿದ್ದುಪಡಿ ತರುವವರೆಗೆ ಜನನ ಪ್ರಮಾಣಪತ್ರಗಳಲ್ಲಿ ಅದಕ್ಕಾಗಿ ಒಂದು ಕಾರ್ಯವಿಧಾನವನ್ನು ರೂಪಿಸಿದೆ.

ಉಡುಪಿಯ ಅಂಬಲಪಾಡಿ ನಿವಾಸಿ ದಂಪತಿ ತಮ್ಮ ಮಗುವಿಗೆ ಆಧಿತ್ ಭಟ್ ಎಂದು ನಾಮಕರಣ. ಮಾಡಿದ್ದರು. ಆದರೆ, ಜೋತಿಷ್ಯ ಶಾಸ್ತ್ರದ ಪ್ರಕಾರ ಮಗನ ಹೆಸರನ್ನು ಶ್ರೀಜಿತ್ ಭಟ್ ಎಂಬುದಾಗಿ ಬದಲಾವಣೆ ಮಾಡುವುದಕ್ಕೆ ನಿರ್ಧರಿಸಿ. ಈ ಬಗ್ಗೆ ಪೋಷಕರು ಜನನ ಮತ್ತು ಮರಣ ನೋಂದಣಾಧಿಕಾರಿಯವರಿಗೆ ಅರ್ಜಿ ಸಲ್ಲಿಸಿದ್ದರು.

ಆದರೆ ಈ ಅರ್ಜಿಯನ್ನು ತಿರಸ್ಕರಿಸಿದ ಅಧಿಕಾರಿ, ಹಿಂಬರಹವನ್ನು ನೀಡಿದ್ದರು. ಈ ಹಿಂಬರವನ್ನು ಪ್ರಶ್ನಿಸಿ ಪೋಷಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾ. ಎಸ್. ಸಂಜಯ ಗೌಡ ಅವರಿದ್ದ ನ್ಯಾಯಪೀಠವು, ಜನನ ಪ್ರಮಾಣ ಪತ್ರದಲ್ಲಿ ಒಮ್ಮೆ ನಮೂದಿಸಲಾದ ಹೆಸರನ್ನು ಮತ್ತೊಮ್ಮೆ ಬದಲಾವಣೆ ಮಾಡುವುದಕ್ಕೆ ಅವಕಾಶ ಕಲ್ಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಈ ತಿದ್ದುಪಡಿ ಅಗತ್ಯವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ರಾಜ್ಯ ಕಾನೂನು ಆಯೋಗ 2023ರಂದು ಸರ್ಕಾರಕ್ಕೆ 24ನೇ ವರದಿಯನ್ನು ಸಲ್ಲಿಸಿದ್ದು, ಈ ವರದಿಯಲ್ಲಿ ನಮೂದಿಸಲಾದ ಶಿಫಾರಸುಗಳನ್ನು ಪರಿಗಣಿಸಿ ಕಾಯ್ದೆಗೆ ತಿದ್ದುಪಡಿ ತರುವುದು ಸೂಕ್ತವಾಗಿದೆ. ಪ್ರಸ್ತುತ ಚಾಲ್ತಿಯಲ್ಲಿ ಇರುವ ಕಾನೂನು ಪ್ರಕಾರ ಜನನ ಪ್ರಮಾಣ ಪತ್ರದಲ್ಲಿ ಒಮ್ಮೆ ನಮೂದಿಸಿದ ಹೆಸರನ್ನು ಮತ್ತೆ ಬದಲಾವಣೆ ಮಾಡಲು ಅವಕಾಶ ಇಲ್ಲ. ಹಾಗಾಗಿ, ಕಾಯ್ದೆಗೆ ತಿದ್ದುಪಡಿ ತರುವ ತನಕ ಪೋಷಕರು ತಮ್ಮ ಮಕ್ಕಳ ಹೆಸರನ್ನು ಬದಲಾವಣೆ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದರೆ ಪರಿಗಣಿಸಲು ಬರುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಹೆಸರನ್ನು ಬದಲಾವಣೆ ಮಾಡಿಕೊಳ್ಳಲು ಬಯಸುವ ವ್ಯಕ್ತಿ ಅಥವಾ ಪೋಷಕರಿಗೆ ಇದು ಅನಗತ್ಯ ಸಮಸ್ಯೆ ಉಂಟು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಕಾನೂನಿಗೆ ತಿದ್ದುಪಡಿ ತರಬೇಕು. ಅಲ್ಲಿಯವರೆಗೆ ಪಾಲಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.

ಹೆಸರು ಬದಲಾವಣೆ ಕೋರಿ ಮಗುವಿನ ಪೋಷಕರು ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಪೀಠ, ಹೆಸರು ಬದಲಾವಣೆಗೆ ಅವಕಾಶವಿಲ್ಲ ಎಂದು ಜನನ ಮರಣ ನೋಂದಣಾಧಿಕಾರಿ ನೀಡಿದ್ದ ಹಿಂಬರಹವನ್ನು ರದ್ದು ಪಡಿಸಿದೆ.

ನ್ಯಾಯಾಲಯ ಸೂಚಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಹೆಸರು ಬದಲಾವಣೆಗೆ ಅವಕಾಶ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ. ಜನ್ಮ ದಿನಾಂಕ ಹಾಗೂ ಇತರ ವಿವರಗಳು ಬದಲಾವಣೆ ಆಗದೆ ಹೆಸರು ಮಾತ್ರ ಬದಲಾದಲ್ಲಿ ಯಾವುದೇ ರೀತಿಯ ದುರುಪಯೋಗಕ್ಕೆ ಅವಕಾಶ ಇರುವುದಿಲ್ಲ. ಹೀಗಾಗಿ, ಹೆಸರು ಬದಲಾಯಿಸಲು ಕೋರಿ ಬಂದ ಅರ್ಜಿಗಳನ್ನು ಅಂಗೀಕರಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.