ಬಟನ್ ಇಲ್ಲದ ಶರ್ಟ್ ಧರಿಸಿ ನ್ಯಾಯಾಲಯಕ್ಕೆ ಹಾಜರು: ವಕೀಲರಿಗೆ ಜೈಲು ಶಿಕ್ಷೆ, ದಂಡ ವಿಧಿಸಿದ ಕೋರ್ಟ್

ಅಲಹಾಬಾದ್: ಶರ್ಟ್ ಬಟನ್ ಹಾಕದೆಯೇ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ವಕೀಲರೊಬ್ಬರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
2021ರ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಗೆ ಹಾಜರಾದ ವಕೀಲ ಅಶೋಕ್ ಪಾಂಡೆ ಎಂಬುವವರಿಗೆ ಹೈಕೋರ್ಟ್ ನ್ಯಾಯಾಲಯ ನ್ಯಾಯಮೂರ್ತಿಗಳಾದ ವಿವೇಕ್ ಚೌಧರಿ ಮತ್ತು ಬಿಆರ್ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಶಿಕ್ಷೆ ನೀಡಿದೆ.
ಅಶೋಕ್ ಪಾಂಡೆ ಅವರು ವಕೀಲರ ಉಡುಪನ್ನು ಧರಿಸದೆ ಮತ್ತು ಶರ್ಟ್ ಗುಂಡಿಗಳನ್ನು ತೆಗೆದು ನ್ಯಾಯಾಲಯಕ್ಕೆ ಬಂದಿದ್ದರು. ವಿಭಾಗೀಯ ಪೀಠವು ಪಾಂಡೆ ವರ್ತನೆಗೆ ಕೋಪಗೊಂಡು 6 ತಿಂಗಳ ಶಿಕ್ಷೆಯನ್ನು ಘೋಷಿಸಿ 2,000 ರೂ. ದಂಡವನ್ನೂ ವಿಧಿಸಿದೆ. ದಂಡ ತಪ್ಪಿದಲ್ಲಿ ಒಂದು ತಿಂಗಳು ಹೆಚ್ಚುವರಿಯಾಗಿ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದೆ.
ಹಾಗೆಯೇ ವಕೀಲ ಅಶೋಕ್ ಪಾಂಡೆ ಅವರಿಗೆ ಲಕ್ನೋದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಶರಣಾಗಲು ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದೆ. ಪಾಂಡೆ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ ಪೀಠ, ಅಲಹಾಬಾದ್ ಹೈಕೋರ್ಟ್ ಮತ್ತು ಅದರ ಲಕ್ನೋ ಪೀಠದಲ್ಲಿ ವಕೀಲಿ ವೃತ್ತಿ ಮಾಡುವುದನ್ನು ಏಕೆ ನಿರ್ಬಂಧಿಸಬಾರದು ಎಂದು ಕೇಳಿದೆ. ಅವರು ಮೇ 1 ರೊಳಗೆ ಪ್ರತಿಕ್ರಿಯಿಸಬೇಕಿದೆ. ಆಗಸ್ಟ್ 18, 2021 ರಂದು ಪಾಂಡೆ ನ್ಯಾಯಾಲಯಕ್ಕೆ ವಕೀಲರ ಉಡುಪಿನಲ್ಲಿ ಬಾರದೆ, ಗುಂಡಾಗಳ ರೀತಿಯಲ್ಲಿ ಶರ್ಟ್ ನ ಗುಂಡಿಗಳನ್ನು ತೆಗೆದುಕೊಂಡು ಬಂದಿದ್ದರು. ಅನುಚಿತ ಉಡುಪಿನಲ್ಲಿ ನ್ಯಾಯಾಲಯಕ್ಕೆ ಹಾಜರಾದ ನಂತರ ಮತ್ತು ನ್ಯಾಯಾಧೀಶರೊಂದಿಗೆ ಅನುಚಿತವಾಗಿ ವರ್ತಿಸಿದ ನಂತರ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳು ಪ್ರಾರಂಭವಾದವು. ಅನೇಕ ಅವಕಾಶಗಳ ಹೊರತಾಗಿಯೂ, ಪಾಂಡೆ ಎಂದಿಗೂ ನ್ಯಾಯಾಂಗ ನಿಂದನೆ ಆರೋಪಗಳಿಗೆ ಪ್ರತಿಕ್ರಿಯಿಸಲಿಲ್ಲ. ನ್ಯಾಯಾಲಯವು ಅವರ ಹಿಂದಿನ ಇತಿಹಾಸವನ್ನು ಸಹ ಗಮನಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ