ಜಿಲ್ಲಾ ನ್ಯಾಯಾಧೀಶರ ನೇಮಕಾತಿ: ಮಹತ್ವದ ಮಾರ್ಗಸೂಚಿಗಳನ್ನ ಪ್ರಕಟಿಸಿದ ಸುಪ್ರೀಂ
ನವದೆಹಲಿ: ಜಿಲ್ಲಾ ನ್ಯಾಯಾಧೀಶರ ನೇಮಕಾತಿ ಹಾಗೂ ಸೇವಾ ಜೇಷ್ಠತೆಗೆ ಸಂಬಂಧಿಸಿದಂತೆ ಹಲವು ನಿರ್ದೇಶನಗಳನ್ನು ನೀಡಿರುವ ಸುಪ್ರೀಂ ಕೋರ್ಟ್ ಈ ಕುರಿತು ಮಹತ್ವದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಕಳೆದ ವರ್ಷ ಸುಪ್ರೀಂ ಕೋರ್ಟ್ ನ ಸಂವಿಧಾನ ಪೀಠ “ರಜನೀಶ್ ಕೆ ವಿ ವಿರುದ್ಧ ಕೆ. ದೀಪ” ಪ್ರಕರಣದಲ್ಲಿ ನೀಡಿದ ತೀರ್ಪಿನ ಅನುಸರಣೆಯಾಗಿ ಈ ಮಾರ್ಗಸೂಚಿಯನ್ನ ಪ್ರಕಟಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯ್ತಲ್ಲಾ ಬಾಗ್ಚಿ ಹಾಗೂ ವಿಪುಲ್ ಪಾಂಚೋಲಿ ಅವರಿದ್ದ ವಿಭಾಗೀಯ ನ್ಯಾಯಪೀಠ ಪೀಠ ಈ ಆದೇಶ ಹೊರಡಿಸಿದೆ.
ಹಿಂತಿರುಗಿಸಿದ ನೇಮಕಾತಿಗಳು ಕಾನೂನುಬಾಹಿರ..
ಕೆಲವು ಸಿವಿಲ್ ನ್ಯಾಯಾಧೀಶರು ನೇರ ನೇಮಕಾತಿ ಮೂಲಕ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಆದರೆ ಧೀರಜ್ ಮೋರ್ ವಿರುದ್ಧ ದೆಹಲಿ ಹೈಕೋರ್ಟ್ (2020) ತೀರ್ಪಿನ ನಂತರ, ಜಿಲ್ಲಾ ನ್ಯಾಯಾಧೀಶರಾಗಿ ನೇರ ನೇಮಕಾತಿಗೆ ಕೇವಲ ವೃತ್ತಿಪರ ವಕೀಲರು ಮಾತ್ರ ಅರ್ಹರು ಎಂದು ಹೇಳಲಾಗಿದ್ದರಿಂದ, ಆ ನ್ಯಾಯಿಕ ಅಧಿಕಾರಿಗಳನ್ನು ಮತ್ತೆ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಹಿಂತಿರುಗಿಸಲಾಗಿತ್ತು. ನಂತರ ರಜನೀಶ್ ಪ್ರಕರಣದಲ್ಲಿ ಧೀರಜ್ ಮೋರ್ ತೀರ್ಪು ರದ್ದು ಗೊಂಡಿತು.
ಇದನ್ನು ಗಮನಿಸಿದ ಮೂವರು ನ್ಯಾಯಮೂರ್ತಿಗಳ ಪೀಠವು ಇಂತಹ ಹಿಂತಿರುಗಿಸುವ ಕ್ರಮಗಳು ಕಾನೂನುಬಾಹಿರವಾಗಿದ್ದು, ಮೊದಲು ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡಿದ್ದ ಎಲ್ಲ ನ್ಯಾಯಿಕ ಅಧಿಕಾರಿಗಳು ತಮ್ಮ ಮೂಲ ನೇಮಕಾತಿಯ ದಿನಾಂಕದಿಂದಲೇ ಜಿಲ್ಲಾ ನ್ಯಾಯಾಧೀಶರ ಸೇವೆಯನ್ನು ಪರಿಗಣಿಸಲಾಗುತ್ತದೆ. ಅವರಿಗೆ ಸಂಬಂಧಿತ ಜೇಷ್ಠತೆ ಹಾಗೂ ಇತರ ಲಾಭಗಳಿಗೂ ಹಕ್ಕು ಇರುತ್ತದೆ. ಇಂತಹ ಹಿಂತಿರುಗಿಸುವ ಕ್ರಮಗಳು ಕಾನೂನು ಬಾಹಿರವಾಗಿವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಅವುಗಳನ್ನು ಕಾನೂನುಬಾಹಿರವೆಂದು ಘೋಷಿಸುತ್ತೇವೆ. ಮೊದಲು ನೇಮಕಗೊಂಡ ಎಲ್ಲಾ ನ್ಯಾಯಿಕ ಅಧಿಕಾರಿಗಳು ತಮ್ಮ ಮೂಲ ನೇಮಕಾತಿ ದಿನಾಂಕದಿಂದಲೇ ಜಿಲ್ಲಾ ನ್ಯಾಯಾಧೀಶರ ಸೇವೆಯಲ್ಲಿ ಇದ್ದವರಂತೆ ಪರಿಗಣಿಸಲ್ಪಡುತ್ತಾರೆ. ಅವರಿಗೆ ಸೇವಾ ಜೇಷ್ಠತೆ ಹಾಗೂ ಕಲ್ಪಿತ ವೇತನ ಲಾಭಗಳು ದೊರೆಯುತ್ತವೆ, ಆದರೆ ಬಾಕಿ ವೇತನ (ಚಿಡಿಡಿeಚಿಡಿs) ನೀಡಲಾಗುವುದಿಲ್ಲ.” ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ರಾಜ್ಯ ಸರ್ಕಾರಗಳು ಮತ್ತು ಹೈಕೋರ್ಟ್ ಗಳು ತಕ್ಷಣವೇ ಇಂತಹ ಎಲ್ಲ ನ್ಯಾಯಿಕ ಅಧಿಕಾರಿಗಳಿಗೆ ನೇಮಕಾತಿ ನೀಡಬೇಕು. ಈ ನೇಮಕಾತಿ 12-10-2025ರಿಂದ ಪರಿಣಾಮಕಾರಿಯಾಗಿರಬೇಕು. ಆದರೆ ಸೇವಾ ಜೇಷ್ಟತೆ ನಿರ್ಧರಿಸುವ ವಿಷಯವು ಪ್ರತಿ ಹೈಕೋರ್ಟ್ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುವುದರಿಂದ ಸಂಕೀರ್ಣವಾಗಿದೆ. ಆದ್ದರಿಂದ, ಈಗ ನೇಮಕಗೊಳ್ಳಲಿರುವ ಅಧಿಕಾರಿಗಳು ಹಾಗೂ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಈಗಾಗಲೇ ನೇಮಕಗೊಂಡಿರುವ ಅಧಿಕಾರಿಗಳ ನಡುವೆ ಇರುವ ಪರಸ್ಪರ ಜೇಷ್ಠತೆಯನ್ನು ಸಂಬಂಧಿತ ಹೈಕೋರ್ಟ್ ಎಲ್ಲಾ ಪರಿಣಾಮ ಬೀರುವ ಅಧಿಕಾರಿಗಳ ಮಾತು ಕೇಳಿ ನಿರ್ಧರಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿತು.
ಜೇಷ್ಠತೆ ನಿರ್ಧಾರಕ್ಕೆ ಮೂರು ನ್ಯಾಯಮೂರ್ತಿಗಳ ಸಮಿತಿ ರಚಿಸಿ…
ಈ ಪರಸ್ಪರ ಜೇಷ್ಠತೆಯನ್ನು ನಿರ್ಧರಿಸಲು ಹೈಕೋರ್ಟ್ ಗಳು ಮೂವರು ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸಬೇಕು. ಸಮಿತಿಯ ಶಿಫಾರಸ್ಸುಗಳನ್ನು ಹೈಕೋರ್ಟ್ ಪೂರ್ಣ ಪೀಠದ ಮುಂದೆ ಅಂತಿಮ ನಿರ್ಧಾರಕ್ಕಾಗಿ ಮಂಡಿಸಬೇಕು. ಈ ಪ್ರಕ್ರಿಯೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ನ್ಯಾಯಪೀಠವು ಸೂಚನೆ ನೀಡಿದೆ.
ಮೂರನೇ ವರ್ಗದವರು ಎಂದರೆ ಆಯ್ಕೆ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲದ ಅಧಿಕಾರಿಗಳು. ಇವರ ಬಗ್ಗೆ ನ್ಯಾಯಾಲಯ ಹೈಕೋರ್ಟ್ ಗಳಿಗೆ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಅರ್ಹ ಅಧಿಕಾರಿಗಳನ್ನು ನೇಮಕ ಮಾಡಲು ಸೂಚಿಸಿತು. ಮೇರುಪಟ್ಟಿಯಲ್ಲಿ ಸ್ಥಾನ ಪಡೆದ ಅಧಿಕಾರಿಗಳಿಗೆ ಮುಂದಿನ ದಿನಾಂಕದಿಂದ ಮಾತ್ರ ಹಿರಿಯತೆ ದೊರೆಯುತ್ತದೆ. ಇಂತಹ ಸಂದರ್ಭಗಳಲ್ಲಿ ಈಗಾಗಲೇ ಸ್ಥಿರವಾಗಿರುವ ಹಿಂದಿನ ಜೇಷ್ಠತೆ ವ್ಯವಸ್ಥೆಯನ್ನು ಮರುಪರಿಶೀಲಿಸಲಾಗುವುದಿಲ್ಲ. ಇನ್ನೂ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿರುವ ಅಧಿಕಾರಿಗಳ ಕುರಿತು ಪೀಠವು ಹೇಳಿದ್ದು, ಒಂದು ಕಾಲದಲ್ಲಿ ಅವರು ಅರ್ಹರಾಗಿದ್ದರು ಎಂಬ ಕಾರಣಕ್ಕೆ ಅವರಿಗೆ ಯಾವುದೇ “ಕಲ್ಪಿತ ಹಕ್ಕುಗಳು” ಸೃಷ್ಟಿಯಾಗುವುದಿಲ್ಲ. ಆದರೆ ಅವರು ವಯೋಮಿತಿ ಮೀರಿದ್ದರೆ ಅವರಿಗೆ ವಯೋಮಿತಿ ಸಡಿಲಿಕೆ ನೀಡಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಹೈಕೋರ್ಟ್ಗಳು ಹೊಸ ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸಿ ಅವರಿಗೆ ಭಾಗವಹಿಸಲು ಅವಕಾಶ ನೀಡಬೇಕು. ಅವರು ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತೀರ್ಣರಾಗಿ ಆಯ್ಕೆಯಾಗಿದರೆ, ಅವರಿಗೆ ನೇಮಕಾತಿಯ ಹಕ್ಕು ದೊರೆಯುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸಂವಿಧಾನ ಪೀಠದ ತೀರ್ಪಿನ ಬೆಳಕಿನಲ್ಲಿ ಇಂತಹ ಎಲ್ಲಾ ಸವಾಲುಗಳು ಫಲಕಾರಿಯಾಗುವುದಿಲ್ಲ. ಆ ಹಿನ್ನೆಲೆಯಲ್ಲಿ ಬಾಕಿ ಇರುವ ಎಲ್ಲಾ ಅರ್ಜಿಗಳು ಮುಂದುವರಿಯಲು ಅರ್ಹವಿಲ್ಲ ಎಂದು ನ್ಯಾಯಪೀಠ ವಕೀಲರ ಸಂಘಗಳ ಅರ್ಜಿಯ ಬಗ್ಗೆ ಹೇಳಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
