ಸರ್ಕಾರಿ ನೌಕರರು ಮಾನ್ಯತೆ ಇಲ್ಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ್ರೆ ಮೆಡಿಕಲ್ ಬಿಲ್ ಮರುಪಾವತಿಗೆ ಅರ್ಹರೆ..?
ಬೆಂಗಳೂರು: ಸರ್ಕಾರಿ ನೌಕರರು ಮಾನ್ಯತೆ ಇಲ್ಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಮೆಡಿಕಲ್ ಬಿಲ್ ಮರುಪಾವತಿಗೆ ಅರ್ಹರಾಗುತ್ತಾರೆಯೇ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನಾಗಭೂಷಣ ಬಿ. Vs ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಹೈಕೋರ್ಟ್ ಮತ್ತಿತರರು” ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಶ್ರೀ ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕ ಸದಸ್ಯ ನ್ಯಾಯಪೀಠವು, ಕರ್ನಾಟಕ ರಾಜ್ಯದ ಸರಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ತುರ್ತು ಸಂದರ್ಭಗಳಲ್ಲಿ ಸರಕಾರದಿಂದ ಮಾನ್ಯತೆ ಹೊಂದಿರದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮರುಪಾವತಿಗೆ ಅರ್ಹರಾಗಿರುತ್ತಾರೆ ಎಂದು ಆದೇಶ ನೀಡಿದೆ.
ಪ್ರಕರಣದ ವಿವರ
ಕರ್ನಾಟಕ ಹೈಕೋರ್ಟ್ ನಲ್ಲಿ ಸಹಾಯಕ ನ್ಯಾಯಾಲಯ ಅಧಿಕಾರಿಯ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಾಗಭೂಷಣ ಬಿ. ಎಂಬವವರು ಪಲ್ಮನರಿ ಹೈಪರ್ ಟೆನ್ಸನ್ ಕಾಯಿಲೆಗೆ ಚಿಕಿತ್ಸೆ ಪಡೆಯಲು ಬೆಂಗಳೂರು ಮಲ್ಲೇಶ್ವರಂನ ಕೆ. ಸಿ. ಜನರಲ್ ಹಾಸ್ಪಿಟಲ್ ಆವರಣದಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿದ್ದರು
ಆಸ್ಪತ್ರೆಯ ವೈದ್ಯಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯುವ ಸಲುವಾಗಿ ಮಾನ್ಯತೆ ಪಡೆಯದ ಖಾಸಗಿ ಆಸ್ಪತ್ರೆ ಮಜುಂದಾರ್ ಮೆಡಿಕಲ್ ಸೆಂಟರ್ ನಲ್ಲಿ ನಾಗಭೂಷಣ ಅವರು ವೈದ್ಯಕೀಯ ಚಿಕಿತ್ಸೆ ಪಡೆದರು.
ನಂತರ ವೈದ್ಯಕೀಯ ಚಿಕಿತ್ಸಾ ವೆಚ್ಚ ರೂಪಾಯಿ 2,63,764 ನ್ನು ಮರುಪಾವತಿಸುವಂತೆ ಕೋರಿ ನಾಗಭೂಷಣ ಬಿ. ಅವರು ಕರ್ನಾಟಕ ಹೈಕೋರ್ಟಿನ ರಿಜಿಸ್ಟ್ರಾರ್ ಜನರಲ್ ಅವರಿಗೆ ಮನವಿ ಸಲ್ಲಿಸಿ ಮನವಿಯ ಜೊತೆಗೆ ವೈದ್ಯಕೀಯ ಬಿಲ್ಲುಗಳು, ವೈದ್ಯರ ಚಿಕಿತ್ಸಾ ವರದಿ, ಆಸ್ಪತ್ರೆಯಿಂದ ದಿನಾಂಕ 23.12.2022 ರಂದು ಬಿಡುಗಡೆಯಾದ ವರದಿಯನ್ನು ಸಲ್ಲಿಸಿದರು.
ಸರಕಾರದಿಂದ ಮಾನ್ಯತೆ ಪಡೆಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ತುರ್ತು ಸಂದರ್ಭ ಉದ್ಭವಿಸಿದ ಕುರಿತು ಸವಿಸ್ತಾರವಾದ ವಿವರಣೆಯನ್ನು ಪತ್ರದ ಜೊತೆಗೆ ಸಲ್ಲಿಸಿದರು. ಅರ್ಜಿದಾರರ ಮನವಿಯನ್ನು ಪರಿಶೀಲಿಸಿದ ಹೈಕೋರ್ಟಿ ನ ರಿಜಿಸ್ಟ್ರಾರ್ ಜನರಲ್ ಅವರು ಸರಕಾರಿ ಆದೇಶ ಸಂಖ್ಯೆ ಸಿಆಸುಇ 31 ಎಎಂಆರ್ 2014 ದಿನಾಂಕ 5.11.2014 ರ ಶರ್ತಗಳನ್ನು ಅರ್ಜಿದಾರರು ಪಾಲಿಸಿದ್ದಾರೆ ಎಂಬ ನಿಷ್ಕರ್ಷೆಗೆ ಬಂದು ಪ್ರಸ್ತಾವನೆಯನ್ನು ಕಾರ್ಯನಿರ್ವಾಹಕ ನಿರ್ದೇಶಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಆರೋಗ್ಯ ಸೌಧ, ಮಾಗಡಿ ರಸ್ತೆ, ಬೆಂಗಳೂರು ಇಲ್ಲಿಗೆ ಕಳುಹಿಸಿದರು.
ಆದರೆ ಅರ್ಜಿದಾರರ ವೈದ್ಯಕೀಯ ಕ್ಲೇಮ್ ಸರಕಾರದ ಆದೇಶ ಸಂಖ್ಯೆ ಸಿಆಸುಇ 31 ಎಸ್.ಎಂ.ಆರ್ 2024 ದಿನಾಂಕ 5.11.2014 ರಲ್ಲಿ ತಿಳಿಸಿದಂತೆ ತುರ್ತು ಸಂದರ್ಭದ ಪ್ರಕರಣಗಳ ವ್ಯಾಪ್ತಿಗೆ ಒಳಪಟ್ಟಿಲ್ಲವೆಂಬ ಹಿಂಬರಹ ನೀಡಿ ಕ್ಷೇಮ್ ಅನ್ನು ರಿಜಿಸ್ಟ್ರಾರ್ ಜನರಲ್ ಅವರಿಗೆ ಮರಳಿಸಲಾಯಿತು.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೀಡಿದ ಹಿಂಬರಹದಿಂದ ಬಾಧಿತರಾದ ನಾಗಭೂಷಣ್ ಬಿ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿ ರಿಟ್ ಅರ್ಜಿ ಸಂಖ್ಯೆ 17956/2024 ಅನ್ನು ದಾಖಲಿಸಿದರು. ತನ್ನ ನ್ಯಾಯ ಸಮ್ಮತ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮರುಪಾವತಿ ಬಿಲ್ಲನ್ನು ಪರಿಗಣಿಸುವಂತೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು. ಕರ್ನಾಟಕ ಸರಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ಅನ್ವಯ ರಾಜ್ಯದ ಸರಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಸರಕಾರಿ ಆಸ್ಪತ್ರೆಗಳಲ್ಲಿ ಹಾಗೂ ಸರಕಾರದಿಂದ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ಚಿಕಿತ್ಸೆಯ ಮರುಪಾವತಿ ವೆಚ್ಚವನ್ನು ಸಕ್ಷಮ ಮಂಜೂರಾತಿ ಪ್ರಾಧಿಕಾರಗಳು ಸಿ.ಜಿ.ಹೆಚ್.ಎಸ್. ದರಪಟ್ಟಿ ಅನುಸಾರ ಮಂಜೂರು ಮಾಡಲು ಅಧಿಕಾರ ಹೊಂದಿರುತ್ತಾರೆ.
ರಾಜ್ಯ ಸರಕಾರವು ಆದೇಶ ಸಂಖ್ಯೆ ಸಿಆಸುಇ 31 ಎಸ್ಎಂಆರ್ 2014 ದಿನಾಂಕ 5.11.2014 ರ ಪ್ರಕಾರ ಕೆಲವು ತುರ್ತು ಸಂದರ್ಭಗಳಲ್ಲಿ ಸರಕಾರಿ ನೌಕರರು ಸರಕಾರದಿಂದ ಮಾನ್ಯತೆ ಹೊಂದಿರದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ಚಿಕಿತ್ಸೆಯ ಮರುಪಾವತಿ ಪ್ರಕರಣಗಳನ್ನು ಅಪವಾದಾತ್ಮಕ/ವಿಶೇಷ ಪ್ರಕರಣಗಳೆಂದು ಪರಿಗಣಿಸಿ ಸಿಜಿಎಚ್ಎಸ್ ದರಗಳನ್ನು ಅಥವಾ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರು ನಿಗದಿಪಡಿಸುವ ಅರ್ಹತಾ ಮೊತ್ತವನ್ನು ನಿಯಮ ಸಡಿಲಿಸಿ ಮಂಜೂರು ಮಾಡಲು ಇಲಾಖೆಯ ಕಾರ್ಯದರ್ಶಿಗಳಿಗೆ ಅಧಿಕಾರ ಪ್ರತ್ಯಾಯೋಜನೆ ಮಾಡಲಾಗಿತ್ತು.
ಸರಕಾರಿ ನೌಕರರು ಸರಕಾರದಿಂದ ಮಾನ್ಯತೆ ಹೊಂದಿರದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ವೆಚ್ಚದ ಕ್ಷೇಮುಗಳ ಅರ್ಹತಾದಾಯಕ ಮೊತ್ತದ ಬಗ್ಗೆ ಹಲವಾರು ಇಲಾಖೆಗಳು ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರಿಗೆ ಪ್ರಸ್ತಾವನೆ ಸಲ್ಲಿಸುತ್ತಿದ್ದರು. ಅಂತಹ ಪ್ರಸ್ತಾವನೆಗಳನ್ನು ಪರಿಶೀಲಿಸಿ ಅರ್ಹತಾದಾಯಕ ಮೊತ್ತವನ್ನು ಸಂಬಂಧಪಟ್ಟ ಇಲಾಖೆಗಳಿಗೆ ಸಕಾಲದಲ್ಲಿ ತಿಳಿಸಲು ಸಾಧ್ಯವಾಗದೆ ವೈದ್ಯಕೀಯ ವೆಚ್ಚಗಳನ್ನು ಮರುಪಾವತಿಸಲು ಉಂಟಾಗುತ್ತಿರುವ ವಿಳಂಬವನ್ನು ಗಮನಿಸಿದ ಸರಕಾರವು ಆದೇಶ ಸಂಖ್ಯೆ ಸಿಆಸುಇ 48 ಎಸ್ಎಂಆರ್ 2018 (ಭಾ) ದಿನಾಂಕ 13.9.2019 ರ ಪ್ರಕಾರ ಸರಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಸರಕಾರದಿಂದ ಮಾನ್ಯತೆ ಹೊಂದಿರದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ಚಿಕಿತ್ಸೆಯ ಮರುಪಾವತಿಯ ಅರ್ಹತಾದಾಯಕ ಮೊತ್ತದ ಬಗ್ಗೆ ಪ್ರಸ್ತಾವನೆಗಳನ್ನು ಕಾರ್ಯಕಾರಿ ನಿರ್ದೇಶಕರು, ಸುವರ್ಣ ಆರೋಗ್ಯ ಟ್ರಸ್ಟ್, ಬೆಂಗಳೂರು ಇವರಿಗೆ ಸಲ್ಲಿಸುವಂತೆ ಎಲ್ಲಾ ಇಲಾಖೆಗಳಿಗೆ ಸೂಚಿಸಿತು. ಸುವರ್ಣ ಆರೋಗ್ಯ ಟ್ರಸ್ಟ್ ಇಂತಹ ಪ್ರತಿಯೊಂದು ಕ್ಷೇಮುಗಳನ್ನು ಸಿಜಿಎಚ್ ಎಸ್ ದರಪಟ್ಟಿಯಂತೆ ಪರಿಶೀಲಿಸಿ ಮರುಪಾವತಿಸಬಹುದಾದ ಅರ್ಹತಾದಾಯಕ ಮೊತ್ತದ ಮಾಹಿತಿಯನ್ನು ಸಕಾಲದಲ್ಲಿ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸುವಂತೆ ದಿನಾಂಕ 13.9.2024 ರ ಸರಕಾರಿ ಆದೇಶದಲ್ಲಿ ಆದೇಶಿಸಿತು.
ಈ ಸರಕಾರಿ ಆದೇಶಗಳನ್ನು ಪರಿಶೀಲಿಸಿದ ನ್ಯಾಯಪೀಠವು ಸರಕಾರಿ ನೌಕರನಿಗೆ ತಜ್ಞ ವೈದ್ಯರ ಚಿಕಿತ್ಸೆಯ ಅವಶ್ಯಕತೆ ಇದ್ದು ಸದರಿ ಚಿಕಿತ್ಸೆ ಸರಕಾರಿ ಆಸ್ಪತ್ರೆಯಲ್ಲಿ ಲಭ್ಯ ಇಲ್ಲದೆ ಇದ್ದಲ್ಲಿ ಮಾನ್ಯತೆ ಪಡೆಯದ ಖಾಸಗಿ ಆಸ್ಪತ್ರೆಯಲ್ಲಿ ಸರಕಾರಿ ನೌಕರನು ಚಿಕಿತ್ಸೆ ಪಡೆಯಬಹುದು. ಅಂಥ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಪಡೆದ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮರುಪಾವತಿಗೆ ಸರಕಾರಿ ನೌಕರರು ಅರ್ಹರಾಗಿರುತ್ತಾರೆ.
ಈ ಪ್ರಕರಣದಲ್ಲಿ ಅರ್ಜಿದಾರರು ಮೊದಲು ಸರಕಾರಿ ಆಸ್ಪತ್ರೆಯಾದ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಸದರಿ ಆಸ್ಪತ್ರೆಯ ವೈದ್ಯರು ತಜ್ಞ ವೈದ್ಯರ ಚಿಕಿತ್ಸೆಗಾಗಿ ಅರ್ಜಿದಾರರನ್ನು ಮಜುಮ್ಹಾರ್ ಮೆಡಿಕಲ್ ಸೆಂಟರ್ ಎಂಬ ಮಾನ್ಯತೆ ಪಡೆಯದ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಿದ್ದರು. ದಿನಾಂಕ 5.11.2014 ರ ಸರಕಾರಿ ಆದೇಶದ ಕಂಡಿಕೆ 5 ರ ಪ್ರಕಾರ ವೈದ್ಯಕೀಯ ವೆಚ್ಚ ಮರುಪಾವತಿಗೆ ಅರ್ಜಿದಾರರು ಅರ್ಹತೆ ಹೊಂದಿರುತ್ತಾರೆ ಎಂಬ ನಿಷ್ಕರ್ಷೆಗೆ ಬಂದ ನ್ಯಾಯಪೀಠವು ರಿಟ್ ಅರ್ಜಿಯನ್ನು ಪುರಸ್ಕರಿಸಿತು. ದಿನಾಂಕ 23.1.2023 ರಂದು ಮೂರನೇ ಪ್ರತ್ಯೇರ್ಜಿದಾರರಾದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೀಡಿದ ಹಿಂಬರಹವನ್ನು ರದ್ದುಪಡಿಸಿತು. ವೈದ್ಯಕೀಯ ಚಿಕಿತ್ಸಾ ವೆಚ್ಚದ ಮರುಪಾವತಿ ಕ್ಷೇಮನ್ನು ಸಂಪೂರ್ಣ ದಾಖಲಾತಿಗಳೊಂದಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟಿಗೆ ಸಲ್ಲಿಸುವಂತೆ ರಿಟ್ ಅರ್ಜಿದಾರರಿಗೆ ನಿರ್ದೇಶನ ನೀಡಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
