ಪಾರ್ಟಿ ಇನ್ ಪರ್ಸನ್ ಗೆ ಖುದ್ದು ವಾದ ಮಂಡಿಸುವ ಸಾಮರ್ಥ್ಯವಿದೆಯೇ ಮೌಲ್ಯಮಾಪನ ಮಾಡಿ- ಹೈಕೋರ್ಟ್ ಸೂಚನೆ
ಬೆಂಗಳೂರು: ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಿ ಸ್ವಯಂ ವಾದ ಮಂಡಿಸುವ ವ್ಯಕ್ತಿಗಳಿಗೆ (ಪಾರ್ಟಿಇನ್ ಪರ್ಸನ್) ಅರ್ಜಿಯ ಕರಡು ಸಿದ್ದ ಪಡಿಸುವುದು ಮತ್ತು ವಾದ ಮಂಡಿಸುವ ಸಾಮರ್ಥ ಇದೆಯೇ ಎಂಬ ಬಗ್ಗೆ ಮೌಲ್ಯ ಮಾಪನ ಮಾಡಿ ಎಂದು ರಿಜಿಸ್ಟ್ರಾರ್ ಅವರಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರುದ್ರಪಟ್ಟಣದ ಸರ್ವೇ ನಂಬರ್ 27ರಲ್ಲಿರುವ 3.10 ಎಕರೆ ಪ್ರದೇಶದಲ್ಲಿನ ಮುಸ್ಲಿಮರ ಖಬರಸ್ತಾನದ ಜಮೀನಿನ ಯಥೋಚಿತ ಸರ್ವೇ ನಡೆಸಿ ಹದ್ದುಬಸ್ತ್ ಮತ್ತು ದುರಸ್ತ್ ಮಾಡಿ ರಕ್ಷಿಸಲು ನಿರ್ದೇಶಿಸಬೇಕು ಎಂದು ಕೋರಿ ಆರ್ ಟಿ ನಗರದ ಮೊಹಮ್ಮದ್ ಇಕ್ಬಾಲ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಿ, ಸ್ವಯಂ ವಾದ ಮಂಡಿಸುವ (ಪಾರ್ಟಿ ಇನ್ ಪರ್ಸನ್) ಅರ್ಜಿದಾರರು ತಾವು ಸ್ವಯಂ ವಾದ ಮಾಡುತ್ತೇವೆ ಎಂಬುದನ್ನು ಪ್ರಮಾಣೀಕರಿಸುವ ಮುನ್ನ ಕರಡು ಸಿದ್ಧಪಡಿಸಿ ವಾದ ಮಂಡಿಸುವ ಅವರ ಸಾಮರ್ಥ್ಯವನ್ನು ರಿಜಿಸ್ಟ್ರಿ ಕಚೇರಿಯು ಮೌಲ್ಯಮಾಪನಕ್ಕೆ ಒಳಪಡಿಸುವ ಅಗತ್ಯವಿದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಅರ್ಜಿದಾರರು ಪಾರ್ಟಿ ಇನ್ ಪರ್ಸನ್ ಆಗಿದ್ದಾರೆ. ಅರ್ಜಿದಾರರು ಮಾಡಿರುವ ಮನವಿಗಳು ದಾರಿ ತಪ್ಪಿಸುವ ರೀತಿಯಲ್ಲಿವೆ. ಅರ್ಜಿ ದೀರ್ಘ ಹೇಳಿಕೆ ಮತ್ತು ಸಂಗತಿ ಒಳಗೊಂಡಿವೆ. ಆ ಸಂಗತಿಗಳು ಅರ್ಜಿಯಲ್ಲಿ ಎತ್ತಿರುವ ವಿವಾದಕ್ಕೆ ನೇರವಾಗಿ ಸಂಬಂಧಿಸಿದಂತಿಲ್ಲ. ಅರ್ಜಿಯಲ್ಲಿ ಹಲವು ವಿಷಯಗಳನ್ನು ತುರುಕಿ ಮತ್ತಷ್ಟು ಸಂಕೀರ್ಣಗೊಳಿಸಲಾಗಿದೆ. ಶಿಸ್ತುಬದ್ಧವಲ್ಲದ, ಅಪ್ರಸ್ತುತ, ಅನಗತ್ಯ ಮತ್ತು ಅಷ್ಟೇನೂ ಮಹತ್ವವಿಲ್ಲದ ಮನವಿಗಳಿವೆ ಎಂದು ಪೀಠ ಹೇಳಿದೆ.
ಆದ್ದರಿಂದ ಕರ್ನಾಟಕ ಹೈಕೋರ್ಟ್(ಪಾರ್ಟಿಇನ್ ಪರ್ಸನ್) ನಿಯಮಗಳು-2018 ರಡಿ ಸಕ್ಷಮ ಸಮಿತಿಯು ಪಾರ್ಟಿ ಇನ್ ಪರ್ಸನ್ ಅವರ ಸಾಮರ್ಥ ನಿರ್ಣಯಿಸುವಾಗ ಮತ್ತು ನ್ಯಾಯಾಲಯದ ಮುಂದೆ ಹಾಜರಾಗಲು ಸಮರ್ಥ ವ್ಯಕ್ತಿ ಎಂದು ಪ್ರಮಾಣೀಕರಿಸಿ ಫಾರ್ಮ್-16 ಅನ್ನು ನೀಡುವ ಮೊದಲು, ಪ್ರಕರಣವನ್ನು ಸರಿಯಾಗಿ ವಾದಿಸುವ ಮತ್ತು ಕರಡು ರಚಿಸುವ ಸಾಮರ್ಥ್ಯ ಅವರಿಗೆ ಇದೆಯೇ ಎಂಬ ಬಗ್ಗೆ ಮೌಲ್ಯ ಮಾಪನ ಮಾಡಬೇಕು ಎಂದು ರಿಜಿಸ್ಟ್ರಿಗೆ ಸೂಚಿಸಿದೆ.
ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಿ ಪ್ರಕರಣದಲ್ಲಿ ಸ್ವಯಂ ವಾದ ಮಂಡಿಸುವ ಸಾಮರ್ಥ್ಯ ಪಕ್ಷಕಾರನಿಗಿದೆಯೇ ಎಂಬುದನ್ನು ರಿಜಿಸ್ಟ್ರಿಯು ಪ್ರಮಾಣೀಕರಿಸಿ ಪ್ರಪತ್ರ (ಫಾರಂ) 16 ಅನ್ನು ನೀಡುವ ಮೊದಲು, ಅಂತಹ ವ್ಯಕ್ತಿಯು, ವಾದವನ್ನು ಕಾನೂನಿಗೆ ಅನುಗುಣವಾಗಿ ವಾದಿಸಬಲ್ಲರೇ ಹೇಗೆ ಎಂಬುದನ್ನು ಒರೆಗೆ ಹಚ್ಚಬೇಕು ಮತ್ತು ಕರಡು ರಚಿಸುವ ಅವರ ಸಾಮರ್ಥ್ಯವನ್ನು ಪರಿಶೀಲಿಸುವುದಕ್ಕೆ ಆದ್ಯತೆ ನೀಡುವುದು ಅಗತ್ಯ ಎಂದು ನ್ಯಾಯಪೀಠ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
