ಅಸ್ತಿಯ ಖಾತೆ ವರ್ಗಾವಣೆ ಇನ್ಮುಂದೆ ಆಟೋಮ್ಯಾಟಿಕ್
ಬೆಂಗಳೂರು: ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ ಅಥವಾ ಆಸ್ತಿ ನೋಂದಣಿ ಆದ ಏಳು ದಿನಗಳ ನೋಟಿಸ್ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಸಲ್ಲಿಕೆಯಾಗದಿದ್ದರೆ ಸ್ವಯಂಚಾಲಿತವಾಗಿ ಖಾತೆ ಬದಲಾವಣೆ ಆಗುವ ಸ್ವಯಂಚಾಲಿತ ಮ್ಯುಟೇಷನ್ ವ್ಯವಸ್ಥೆಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಚಾಲನೆ ನೀಡಿದರು.
ಈ ಮೂಲಕ ಇನ್ಮುಂದೆ ಆಸ್ತಿಯ ಖಾತೆ ವರ್ಗಾವಣೆ ಆಟೋಮ್ಯಾಟಿಕ್ ಆಗಿ ನಡೆಯಲಿದ್ದು, ನೋಟೀಸ್ ಅವಧಿ ಮುಗಿದ ಕೂಡಲೇ ಸರ್ವರ್ ಸಹಿ ಇರುವ ಖಾತಾ ಲಭ್ಯವಾಗಲಿದೆ. 7 ದಿನಗಳ ಮತ್ತು 15 ದಿನಗಳ ನೋಟಿಸ್ ಅವಧಿ ಹೊಂದಿರುವ ಎಲ್ಲ ಮ್ಯುಟೇಶನ್ ಗಳನ್ನು ನೋಟಿಸ್ ಅವಧಿ ಮುಕ್ತಾಯವಾದ ನಂತರ ಮಾನವ ಹಸ್ತಕ್ಷೇಪವಿಲ್ಲದೆ ಸ್ವಯಂ ಚಾಲಿತ ತಂತ್ರಾಂಶದ ಮೂಲಕ ಸರ್ವರ್ ಸಹಿ ಇರುವ ಮುಟೇಷನ್ ಪಡೆಯಬಹುದಾಗಿದೆ. ಇದರಿಂದಾಗಿ ಕ್ರಯ, ವಿಭಾಗ, ದಾನ, ಪೌತಿ, ಉಯಿಲುಗಳ ಮ್ಯುಟೇಶನ್ ಸ್ವಯಂಚಾಲಿತವಾಗಿ ಪಡೆಯಬಹುದು. ಒಂದು ವೇಳೆ 7 ಕೆಲಸದ ದಿನಗಳು ಅಥವಾ 15 ಕೆಲಸದ ದಿನಗಳ ನೋಟಿಸ್ ಅವಧಿಯೊಳಗೆ ಕಂದಾಯ ನಿರೀಕ್ಷಕರು (ಸರ್ಕಾರಿ ಅಕ್ಷೇಪ) ಅಥವಾ ಸಾರ್ವಜನಿಕರು ತಕರಾರು ಸಲ್ಲಿಸಿದರೆ, ಅಂತಹ ಮ್ಯುಟೇಶನ್ ಗಳನ್ನು ಪೂರ್ಣಗೊಳಿಸದೆ, ಆರ್ಸಿಸಿಎಂಎಸ್ ತಂತ್ರಾಂಶದ ಮೂಲಕ ತಹಶೀಲ್ದಾರ್ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಲಾಗುತ್ತದೆ. ತಹಶೀಲ್ದಾರರ ನಿರ್ಧಾರದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
ಆನ್ಲೈನ್ ಮೂಲಕ ಖಾತೆ ಬದಲಾವಣೆಗೆ ಮನವಿ ಸಲ್ಲಿಸಿದರೆ 7 ದಿನ ನೋಟಿಸ್ ಅವಧಿ ಇರುತ್ತದೆ. ಈ ಅವಧಿಯಲ್ಲಿ ಭೂಮಿ ತಂತ್ರಾಂಶದ ಮೂಲಕ ಯಾರೂ ತಕರಾರು ಸಲ್ಲಿಸದಿದ್ದರೆ ಎಂಟನೇ ದಿನ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗುತ್ತದೆ. ಇನ್ನು ಉಪನೋಂದಣಿ ಕಚೇರಿಯಲ್ಲಿ ಹೊಸದಾಗಿ ಆಸ್ತಿ ನೋಂದಣಿ ಆದರೆ ಉಪನೋಂದಣಿ ಕಚೇರಿಯಿಂದ ಜೆ-ಸ್ಲಿಪ್ (ಜಮಾಬಂಧಿ) ಬಂದ ನಂತರ ನಿಗದಿತ ಸಮಯದಲ್ಲಿ ಯಾವುದೇ ಆಕ್ಷೇಪಣೆ ಬರದಿದ್ದರೆ ಕಂದಾಯ ನಿರೀಕ್ಷಕರ ಬೆರಳಚ್ಚು ಅಥವಾ ಭೌತಿಕ ಒಪ್ಪಿಗೆಯ ಅಗತ್ಯವಿಲ್ಲದೆಯೇ ಖಾತಾ ಬದಲಾವಣೆಯಾಗಲಿದೆ.
ನೋಟಿಸ್ ಅಗತ್ಯವಿಲ್ಲದ ಅಂದರೆ ಸಾಲ ಪಡೆಯುವುದು, ಭೂ ಪರಿವರ್ತನೆ, ಪೋಡಿ, ಭೂಸ್ವಾಧೀನ, ನ್ಯಾಯಾಲಯ ಆದೇಶ, ನ್ಯಾಯಾಲಯ ತಡೆಯಾಜ್ಞೆ, ಸರ್ಕಾರದ ಆದೇಶ, ಸಾಗುವಳಿ ಚೀಟಿ ನಮೂದು, ಪಹಣಿ ವರ್ಗಾವಣೆ ಸೇವೆಗಳನ್ನು 2024ರಿಂದಲೇ ಸ್ವಯಂ ಚಾಲಿತಗೊಳಿಸಲಾಗಿತ್ತು. ಇಂತಹ ಪ್ರಕರಣಗಳು ತಿಂಗಳಿಗೆ ಸರಾಸರಿ 2.47 ಲಕ್ಷ ಖಾತೆ ಬದಲಾವಣೆಗಾಗಿ ಬರುತ್ತಿದ್ದು, ಈ ಪೈಕಿ ಶೇ.70 ರಷ್ಟು ಖಾತೆ ಬದಲಾವಣೆಯನ್ನು ಈಗಾಗಲೇ ಸ್ವಯಂ ಚಾಲಿತವಾಗಿ ಮಾಡಲಾಗುತ್ತಿದೆ ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದರು.
ಈ ಹಿಂದೆ ಮ್ಯುಟೇಶನ್ ಗಳಿಗೆ ಆಕ್ಷೇಪಣೆ ಇದ್ದಲ್ಲಿ ಅಥವಾ ಅನುಮೋದನೆ ನೀಡಬೇಕಾದಲ್ಲಿ, ರಾಜಸ್ವ ನಿರೀಕ್ಷಕರು ಖುದ್ದಾಗಿ ತಾಲ್ಲೂಕು ಕಚೇರಿಗಳಿಗೆ ಬಂದು ಸಲ್ಲಿಸಬೇಕಾಗಿತ್ತು. ಈಗ ರಾಜಸ್ವ ನಿರೀಕ್ಷಕರಿಗೆ ಲಾಗಿನ್ ನೀಡಿದ್ದು, ಯಾವುದೇ ಸ್ಥಳದಿಂದ ಆಕ್ಷೇಪಣೆ ಸಲ್ಲಿಸಲು ತಂತ್ರಾಂಶದಲ್ಲಿ ಅವಕಾಶ ನೀಡಲಾಗಿದೆ.
ಆಸ್ತಿ ಖಾತೆ ಬದಲಾವಣೆಗೆ ಈ ಮೊದಲು ನೋಟಿಸ್ ನೀಡಿದ ಬಳಿಕ ಅಧಿಕಾರಿಗಳು ಮ್ಯುಟೇಷನ್ ಮಾಡಲು ವಿಳಂಬ ಮಾಡುತ್ತಿದ್ದರು. ಇದಕ್ಕೆ ಈಗ ಬ್ರೇಕ್ ಬಿದ್ದಿದ್ದು ಆಸ್ತಿ ಖರೀದಿದಾರರಿಗೆ ಹಾಗೂ ರೈತರಿಗೆ ಅತ್ಯಂತ ವೇಗವಾಗಿ ಹಕ್ಕು ವರ್ಗಾವಣೆ ದಾಖಲೆಗಳು ಸಿಗಲಿವೆ. ವಾರಸತ್ವ ಹಕ್ಕು, ನ್ಯಾಯಾಲಯ ಆದೇಶ ಮತ್ತಿತರ ಪ್ರಕರಣಗಳಲ್ಲಿ ಖಾತೆ ಬದಲಾವಣೆಗೆ ಮನವಿ ಬಂದರೆ 15 ದಿನ ನೋಟಿಸ್ ಅವಧಿ ಇದ್ದು, ತಕರಾರು ಸಲ್ಲಿಸಬಹುದಾಗಿದೆ. ತಕರಾರು ಇಲ್ಲದಿದ್ದರೆ 16ನೇ ದಿನ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗಲಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
