ಕಾಯಲು ಹೇಳಿದ ವೈದ್ಯೆ ಮೇಲೆ ಹಲ್ಲೆ, ದರೋಡೆ: ಆರೋಪಿಗೆ ಕಠಿಣ ಜೈಲುಶಿಕ್ಷೆ,ದಂಡ ವಿಧಿಸಿದ ಕೋರ್ಟ್
ಥಾಣೆ: ಕ್ಲಿನಿಕ್ ಗೆ RT-PCR ಪರೀಕ್ಷೆಯ ಬಗ್ಗೆ ವಿಚಾರಿಸಲು ಬಂದಿದ್ದ ವೇಳೆ ಸ್ವಲ್ಪ ಹೊತ್ತು ಕಾಯಲು ಹೇಳಿದ ವೈದ್ಯೆಯ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಿದ ಆರೋಪದ ಮೇಲೆ ನ್ಯಾಯಾಲಯವು ಆರೋಪಿಗೆ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ, 20,000 ರೂಪಾಯಿ ದಂಡ ವಿಧಿಸಿದೆ.
2021 ರಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ಆದೇಶ ನೀಡಿದ್ದು, ರಶೀದ್ ಶಕೀಲ್ ಖಾನ್ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಗುರಿಯಾದ ಆರೋಪಿ. ಥಾಣೆಯಲ್ಲಿ ಮಹಿಳಾ ವೈದ್ಯೆಯ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ ಪ್ರಕರಣದ ದಾಖಲಾಗಿತ್ತು.
2021 ರಲ್ಲಿ ಮಹಿಳಾ ವೈದ್ಯೆಯ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ ಪ್ರಕರಣದಲ್ಲಿ ಆರೋಪಿ ರಶೀದ್ ಶಕೀಲ್ ಖಾನ್ ಗೆ (56) ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ವೈದ್ಯರ ಮೇಲಿನ ಹಿಂಸಾಚಾರವನ್ನು ಖಂಡಿಸಿ ಈ ಶಿಕ್ಷೆ ಬಲವಾದ ಸಂದೇಶ ರವಾನಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಕೊರೋನಾ ಲಾಕ್ಡೌನ್ ಸಮಯದಲ್ಲಿ, ಜನವರಿ 3, 2021 ರಂದು, ಆರೋಪಿ ರಶೀದ್ ಡಾ. ಗಾಯತ್ರಿ ನಂದಲಾಲ್ ಜೈಸ್ವಾಲ್ ಅವರ ಕ್ಲಿನಿಕ್ ಗೆ RT-PCR ಪರೀಕ್ಷೆಯ ಬಗ್ಗೆ ವಿಚಾರಿಸಲು ಬಂದಿದ್ದನು. ವೈದ್ಯರು ಕಾಯಲು ಹೇಳಿದ್ದು, ಈ ವೇಳೆ ಆರೋಪಿ ಕೋಪಗೊಂಡು ಹೊರಟುಹೋದ. ಸ್ವಲ್ಪ ಸಮಯದ ನಂತರ ಹಿಂದಿರುಗಿ, ವೈದ್ಯೆಯ ಮೇಲೆ ಕಬ್ಬಿಣದ ಸುತ್ತಿಗೆಯಿಂದ ತೀವವಾಗಿ ಹಲ್ಲೆ ನಡೆಸಿದ್ದು, ವೈದ್ಯೆ ಗಂಭೀರವಾಗಿ ಗಾಯಗೊಂಡು ರಕ್ತಸ್ರಾವವಾಗುತ್ತಿದ್ದಾಗ, ಆರೋಪಿ ಅವರ ಚಿನ್ನದ ಸರ, ಉಂಗುರ, ಮೊಬೈಲ್ ಫೋನ್ ಮತ್ತು 5,000 ರೂಪಾಯಿ ನಗದು ದೋಚಿ ಪರಾರಿಯಾಗಿದ್ದ.
ಪೊಲೀಸರಿಗೆ ನೀಡಿದ ದೂರಿನಲ್ಲಿ ವೈದ್ಯೆಗೆ ಆದ ಗಾಯಗಳು ‘ಗಂಭೀರ ಗಾಯ’ ಎಂಬ ವ್ಯಾಖ್ಯಾನಕ್ಕೆ ಸರಿಯಾಗಿ ಹೊಂದಿಕೆಯಾಗುತ್ತವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ” ಎಂದು ನ್ಯಾಯಾಲಯ ಹೇಳಿದೆ. ಸಿಟಿ ಸ್ಕ್ಯಾನ್ ವರದಿಯಲ್ಲಿ ‘ಚಿಕ್ಕ’ ಎಂದು ವಿವರಿಸಲಾಗಿದ್ದರೂ, ಸಬ್ ಡ್ಯೂರಲ್ ಹೆಮರೇಜ್ ಒಂದು ಗಂಭೀರ ವೈದ್ಯಕೀಯ ಸ್ಥಿತಿಯಾಗಿದ್ದು, ತಕ್ಷಣ ಚಿಕಿತ್ಸೆ ನೀಡದಿದ್ದರೆ ಮಾರಣಾಂತಿಕವಾಗಬಹುದು, ಸಬ್ ಡ್ಯೂರಲ್ ಹೆಮರೇಜ್ ಇರುವುದು, ಸುತ್ತಿಗೆಯಿಂದ ನಡೆಸಿದ ದಾಳಿ ವೈದ್ಯೆಯ ಜೀವಕ್ಕೆ ಅಪಾಯ ತಂದೊಡ್ಡಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದರು.
ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಗಾಯಗೊಳಿಸುವ ಉದ್ದೇಶದಿಂದ ಮನೆಗೆ ನುಗ್ಗುವುದು ಮತ್ತು ಮಾರಣಾಂತಿಕ ಆಯುಧದಿಂದ ದರೋಡೆ ಮಾಡುವುದು ಸೇರಿದಂತೆ ವಿವಿಧ ಆರೋಪಗಳ ಮೇಲೆ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ, ವೈದ್ಯರು, ವೈದ್ಯಕೀಯ ವೃತ್ತಿಪರರು ಮತ್ತು ವೈದ್ಯಕೀಯ ಸಂಸ್ಥೆಗಳ ಮೇಲಿನ ಹಿಂಸಾಚಾರ ತಡೆ ಕಾಯ್ದೆ, 2019 ರ ಅಡಿಯಲ್ಲಿಯೂ ಶಿಕ್ಷೆ ನೀಡಲಾಗಿದೆ.
ವೈದ್ಯರು, ವೈದ್ಯಕೀಯ ವೃತ್ತಿಪರರು ಮತ್ತು ವೈದ್ಯಕೀಯ ಸಂಸ್ಥೆಗಳ ಮೇಲಿನ ಹಿಂಸಾಚಾರ ತಡೆ ಕಾಯ್ದೆ, 2019 ಅನ್ನು ವೈದ್ಯರಿಗೆ ಹೆಚ್ಚಿನ ರಕ್ಷಣೆ ನೀಡಲು ಮತ್ತು ಇಂತಹ ಅಪರಾಧಗಳನ್ನು ತಡೆಯಲು ಜಾರಿಗೆ ತರಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಈ ಪ್ರಕರಣವು ಈ ಕಾಯ್ದೆಯು ತಡೆಯಲು ಮತ್ತು ಶಿಕ್ಷಿಸಲು ಬಯಸುವ ಹಿಂಸಾಚಾರದ ಒಂದು ಸ್ಪಷ್ಟ ಉದಾಹರಣೆಯಾಗಿದೆ ಎಂದು ಕೋರ್ಟ್ ತಿಳಿಸಿದ ಈ ಅಪರಾಧದ ಗಂಭೀರತೆಯನ್ನು ಪರಿಗಣಿಸಿ, ಸಂತ್ರಸ್ತೆಗೆ ನ್ಯಾಯ ಒದಗಿಸಲು, ಇತರರು ಇಂತಹ ಕೃತ್ಯಗಳನ್ನು ಮಾಡದಂತೆ ತಡೆಯಲು, ವೈದ್ಯರ ಮೇಲಿನ ಹಿಂಸಾಚಾರವನ್ನು ಸಹಿಸಲಾಗುವುದಿಲ್ಲ ಎಂಬ ಸಂದೇಶ ರವಾನಿಸಲು ಮತ್ತು ಕಾನೂನಿನ ಆಡಳಿತವನ್ನು ಎತ್ತಿಹಿಡಿಯಲು ಆದರ್ಶಪ್ರಾಯ ಶಿಕ್ಷೆ ನೀಡಬೇಕಾಗಿದೆ” ಎಂದು ನ್ಯಾಯಾಲಯ ಹೇಳಿದೆ. ದಂಡದ ಮೊತ್ತದಲ್ಲಿ 10,000 ರೂಪಾಯಿಗಳನ್ನು ವೈದ್ಯರಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ನಿರ್ದೇಶಿಸಿದೆ ಆರೋಪಿಯ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು 14 ಜನ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು ಎಂದು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆರ್.ಪಿ. ಪಾಟೀಲ್ ತಿಳಿಸಿದ್ದಾರೆ
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
