ಕತ್ತಿಯಿಂದ ನ್ಯಾಯವಾದಿಗಳ ಮೇಲೆಯೇ ದಾಳಿ, ಹಲ್ಲೆ : ವಕೀಲರಿಬ್ಬರ ವಿರುದ್ಧ ಸ್ವಯಂ ಪ್ರೇರಿತ ಕೇಸ್, ಸನ್ನದು ಅಮಾನತು
ಚಂಡಿಗಢ,ಸೆಪ್ಟಂಬರ್,22,2025 (www.justkannada.in): ನ್ಯಾಯವಾದಿಗಳ ಮೇಲೆಯೇ ದಾಳಿ ನಡೆಸಿ ಕತ್ತಿಯಿಂದ ಹಲ್ಲೆ ಮಾಡಿದ್ದ ವಕೀಲರಿಬ್ಬರ ವಿರುದ್ಧ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು ಇಬ್ಬರು ವಕೀಲರ ಸನ್ನದು ಅಮಾನತು ಮಾಡಲಾಗಿದೆ.
ಆರೋಪಿ ವಕೀಲರಾದ ರವನೀತ್ ಕೌರ್ ಮತ್ತು ಸಿಮ್ರನ್ ಜಿತ್ ಸಿಂಗ್ ಬ್ಲಸ್ಸಿ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿರುವುದು. ಹೈಕೋರ್ಟ್ ವಕೀಲರ ಸಂಘದ ಮನವಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾಯಮೂರ್ತಿ ಸಂಜೀವ್ ಬೆರಿ ಅವರಿದ್ದ ವಿಭಾಗೀಯ ನ್ಯಾಯಪೀಠ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತೆ ಆದೇಶ ನೀಡಿತು. ಈ ಘಟನೆಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಚಂಡೀಗಢ ಪೊಲೀಸರಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಹಾಗೆಯೇ ಹೈಕೋರ್ಟ್ ವಕೀಲರ ಸಂಘ ತನ್ನ ಕಾರ್ಯದರ್ಶಿ ಮತ್ತು ವಕೀಲರ ಮೇಲೆ ದಾಳಿ ನಡೆಸಿದ್ದ ಆರೋಪಿ ವಕೀಲರಾದ ರವನೀತ್ ಕೌರ್ ಮತ್ತು ಸಿಮ್ರನ್ ಜಿತ್ ಸಿಂಗ್ ಬಸ್ಸಿ ಅವರಿಗೆ ನೀಡಲಾಗಿರುವ ಸನದನ್ನು ಅಮಾನತುಗೊಳಿಸಿದೆ.
ವಕೀಲರನ್ನು ಬೆದರಿಸಲು ಮತ್ತು ವಕೀಲರೊಬ್ಬರ ಮೇಲೆ ದಾಳಿ ನಡೆಸಲು ಕೌರು ಅವರು ಸೆಪ್ಟೆಂಬರ್ 17ರಂದು ಬ್ಲಸ್ಸಿ ಅವರನ್ನು ಪ್ರಚೋದಿಸಿದ್ದರು ಎಂದು ಸಂಘವು ದೂರು ನೀಡಿತ್ತು. ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸಿದ್ದರೂ ಬ್ಲಸ್ಸಿ ಅವರನ್ನು ಮಾತ್ರ ಬಂಧಿಸಲಾಗಿದೆ. ಆದರೆ, ಕೌರ್ ಅವರನ್ನೂ ಬಂಧಿಸಬೇಕು. ಕೌರ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಮಾನಹಾನಿಕರ ಹೇಳಿಕೆಯನ್ನು ತೆಗೆದುಹಾಕಿ ಅವರ ವಿರುದ್ದ ಪ್ರತಿಬಂಧಕಾದೇಶ ನೀಡುವಂತೆ ನ್ಯಾಯಾಲಯಕ್ಕೆ ಸಂಘವು ಮನವಿ ಮಾಡಿತ್ತು.
ಚಂಡೀಗಢ ಕೇಂದ್ರಾಡಳಿತ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಮಿತ್ ಝಂಜಿ ಮತ್ತು ಸಂಘದ ಅಧ್ಯಕ್ಷ ಸರ್ತೇಜ್ ಸಿಂಗ್ ನರೂಲಾ ಅವರ ವಾದ ಆಲಿಸಿದ ನ್ಯಾಯಾಲಯ, ಬ್ಲಸ್ಸಿ ಅವರ ದೂರು ಆಧರಿಸಿ ಯಾವುದೇ ಕ್ರಮ ಕೈಗೊಳ್ಳಬಾರದು ಮತ್ತು ಕೌರ್ ಅವರು ಪ್ರಕಟಿಸಿದ್ದ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆದೇಶ ಹೊರಡಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
