06/03/2026

Law Guide Kannada

Online Guide

ಆರೋಪಿ ನಕಲಿ ವಕೀಲನ ಜಾಮೀನು ರದ್ದು: ಪೂರ್ವಾಪರಾಧ ಮಾಹಿತಿ ಬಹಿರಂಗಕ್ಕೆ ಗೈಡ್ ಲೈನ್ಸ್ ಪ್ರಕಟಿಸಿದ ಸುಪ್ರೀಂ

ನವದೆಹಲಿ: ನಕಲಿ ಪದವಿ ಬಳಸಿ ತಾನು ವಕೀಲನೆಂದು ಪರಿಚಯಿಸಿಕೊಂಡಿದ್ದ ಆರೋಪಿಯ ಜಾಮೀನು ಅರ್ಜಿಯನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್, ಇದೇ ವೇಳೆ, ಜಾಮೀನು ಅರ್ಜಿಗಳಲ್ಲಿ ಅಪರಾಧ ಪೂರ್ವ ಇತಿಹಾಸ ಬಹಿರಂಗಪಡಿಸುವ ಕುರಿತು ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಹಾಗೂ ನ್ಯಾಯಮೂರ್ತಿ ಆರ್. ಮಹಾದೇವನ್ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ. ಉತ್ತರ ಪ್ರದೇಶದಲ್ಲಿ ನಕಲಿ ಕಾನೂನು ಪದವಿಗಳು ಹಾಗೂ ವಿದ್ಯಾರ್ಹತಾ ಪ್ರಮಾಣಪತ್ರಗಳ ತಯಾರಿ ಮತ್ತು ವಿತರಣೆ ಕುರಿತ ದೊಡ್ಡ ಮಟ್ಟದ ಜಾಲತಾಣದ ಕುರಿತು ಎಫ್ ಐಆರ್ ದಾಖಲಾಗಿತ್ತು. ಆರೋಪಿಯು ವೀರ್ ಬಹಾದೂರ್ ಸಿಂಗ್ ಪೂರ್ವಾಂಚಲ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದೆ ಎಂದು ಹೇಳಲಾದ ಸಂಸ್ಥೆಯಿಂದ ಪಡೆದಂತೆ ತೋರಿಸಲಾದ ನಕಲಿ ಎಲ್.ಎಲ್.ಬಿ. ಪದವಿಯನ್ನು ಆಧರಿಸಿಕೊಂಡಿದ್ದ ಎಂದು ಆರೋಪಿಸಲಾಗಿತ್ತು.

ನಕಲಿ ಎಲ್.ಎಲ್.ಬಿ. ಪದವಿಯನ್ನು ಸೃಷ್ಟಿಸಿ ತಾನು ವಕೀಲನೆಂದು ನ್ಯಾಯಾಲಯಗಳಲ್ಲಿ ಬಿಂಬಿಸಿಕೊಂಡಿದ್ದಾನೆ ಎಂಬ ಆರೋಪ ಎದುರಿಸುತ್ತಿದ್ದ ಆರೋಪಿ ವೀರ್ ಬಹಾದೂರ್ ಸಿಂಗ್ ಗೆ ಮಂಜೂರಾಗಿದ್ದ ಜಾಮೀನನ್ನು ರದ್ದುಗೊಳಿಸಿದ ನ್ಯಾಯಪೀಠವು, ಈ ಸಂಬಂಧ ಹೈಕೋರ್ಟ್ ಹೊರಡಿಸಿದ ಆದೇಶವು ದೋಷಪೂರಿತವಾಗಿದ್ದು, ಕಾನೂನಾತ್ಮಕವಾಗಿ ಸ್ಥಿರವಾಗದ ಮತ್ತು ಮನಸ್ಸಿನ ಅನ್ವಯದ ಕೊರತೆಯಿಂದ ಕೂಡಿದೆ ಎಂದು ಹೇಳಿದೆ.

ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡುವಾಗ ಪ್ರಮುಖ ಸಾಕ್ಷ್ಯಗಳು, ಅನೇಕ ಎಫ್ಐಆರ್ ಗಳು ಹಾಗೂ ನಕಲಿ ಎಲ್.ಎಲ್.ಬಿ. ಪದವಿ ಆರೋಪಗಳನ್ನು ಗಮನಿಸದೆ ಬಿಟ್ಟಿದೆ ಎಂಬುದನ್ನು ಗಮನಿಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠವು, ಜಾಮೀನು ನೀಡಿಕೆಯಲ್ಲಿ ಸಲ್ಲಿಸಲಾಗುವ ಅರ್ಜಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ರೂಪಿಸಿತು. ಜೊತೆಗೆ, ಜಾಮೀನು ವಿಚಾರಣೆಯಲ್ಲಿ ಸಂಪೂರ್ಣ ಮತ್ತು ಸ್ಪಷ್ಟ ಪಾರದರ್ಶಕತೆ ಸಾಧಿಸಲು ನ್ಯಾಯಾಲಯವು ಉದಾಹರಣಾತ್ಮಕ ಹಾಗೂ ಶಿಫಾರಸು ಸ್ವರೂಪದ ಬಹಿರಂಗಪಡಿಸುವ ಚಟುವಟಿಕೆ ಚೌಕಟ್ಟನ್ನು ರೂಪಿಸಿತು.

ಜಾಮೀನು ಅರ್ಜಿಗಳಲ್ಲಿ ಪ್ರಕರಣದ ವಿವರಗಳು (ಎಫ್ ಐಆರ್ ವಿವರಗಳು, ವಿಧಿಸಲಾದ ಅಪರಾಧಗಳು ಹಾಗೂ ಗರಿಷ್ಠ ಶಿಕ್ಷೆ), ಬಂಧನ ಸ್ಥಿತಿ, ವಿಚಾರಣೆಯ ಹಂತ, ಸಂಪೂರ್ಣ ಅಪರಾಧ ಪೂರ್ವ ಇತಿಹಾಸ, ಹಿಂದಿನ ಜಾಮೀನು ಅರ್ಜಿಗಳ ಇತಿಹಾಸ, ಮತ್ತು ಜಾಮೀನಿಗೆ ವಿರೋಧವಾಗಿ ಹೊರಡಿಸಲಾದ ಬಲವಂತ ಕ್ರಮಗಳು (ಉದಾ: ಜಾಮೀನು ರಹಿತ ವಾರಂಟ್ ಗಳು, ಪ್ರಕಟಿತ ಅಪರಾಧಿ ಘೋಷಣೆ ಆದೇಶಗಳು) ಇತ್ಯಾದಿಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು ಎಂದು ಸೂಚಿಸಿತು. ಈ ಚೌಕಟ್ಟು ಕಡ್ಡಾಯವಲ್ಲ, ನೆರವಾಗುವ ಉದ್ದೇಶದ್ದೇ ಆಗಿದ್ದು, ವಿಚಾರಣಾ ನ್ಯಾಯಾಲಯಗಳು ತಮ್ಮ ಪ್ರಕ್ರಿಯಾತ್ಮಕ ಅವಶ್ಯಕತೆಗಳು ಹಾಗೂ ಪ್ರಕರಣದ ಸಂದರ್ಭಾನುಸಾರ ಅದನ್ನು ಬಳಸಬಹುದು ಎಂದು ನ್ಯಾಯಪೀಠವು ಸ್ಪಷ್ಟವಾಗಿ ತಿಳಿಸಿದೆ.

ಯಾವ ಹಂತದಲ್ಲಾದರೂ ಜಾಮೀನು ಕೋರಿ ಮನವಿ ಮಾಡುವ ಪ್ರತಿಯೊಬ್ಬ ಅರ್ಜಿದಾರನಿಗೂ, ತನ್ನ ಅಪರಾಧ ಪೂರ್ವ ಇತಿಹಾಸ ಸೇರಿದಂತೆ, ಜಾಮೀನು ರಹಿತ ವಾರಂಟ್ ಜಾರಿ. ಘೋಷಿತ ಅಪರಾಧಿಯಾಗಿ ಘೋಷಣೆ ಅಥವಾ ಇತರ ಬಲವಂತ ಕ್ರಮಗಳ ಅಸ್ತಿತ್ವವಿದ್ದರೆ ಅವುಗಳನ್ನೂ ಸೇರಿಸಿ ಎಲ್ಲಾ ಪ್ರಮುಖ ವಿವರಗಳನ್ನು ಪ್ರಮಾಣಪತ್ರದ ಮೂಲಕ ಸಂಪೂರ್ಣವಾಗಿ ಬಹಿರಂಗಪಡಿಸುವ ಕಡ್ಡಾಯ ಬಾಧ್ಯತೆ ಇದೆ. ಇದರಿಂದ ಜಾಮೀನು ತೀರ್ಪುಗಳಲ್ಲಿ ಏಕರೂಪತೆ, ಪಾರದರ್ಶಕತೆ ಮತ್ತು ಅಖಂಡತೆ ಉತ್ತೇಜಿತವಾಗುತ್ತದೆ” ಎಂದು ನ್ಯಾಯಪೀಠ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.