ಜಾಮೀನೀಯ ಅಪರಾಧ: ಖುಲಾಸೆ ವಿರುದ್ಧದ ಮೇಲ್ಮನವಿ ಹೈಕೋರ್ಟ್ಗೆ ಸಲ್ಲಿಸಬೇಕೇ ಹೊರತು ಸೆಷನ್ಸ್ ನ್ಯಾಯಾಲಯಕ್ಕಲ್ಲ- ಹೈಕೋರ್ಟ್
ಬೆಂಗಳೂರು,ಜನವರಿ,24,2026 (www.justkannada.in): ಜಾಮೀನೀಯ ಅಪರಾಧಗಳಿಗೆ ಸಂಬಂಧಿಸಿ ನೀಡಿದ ಖುಲಾಸೆ ಆದೇಶದ ವಿರುದ್ಧದ ಮೇಲ್ಮನವಿ ಸೆಷನ್ಸ್ ನ್ಯಾಯಾಲಯದ ಮುಂದೆ ಸಲ್ಲಿಸಲು ಸಾಧ್ಯವಿಲ್ಲ: ಇಂತಹ ಮೇಲ್ಮನವಿಗಳನ್ನು ಹೈಕೋರ್ಟ್ ಮಾತ್ರ ವಿಚಾರಣೆ ನಡೆಸಲು ಅರ್ಹವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಭಾರತೀಯ ದಂಡ ಸಂಹಿತೆಯಡಿ ಅಪರಾಧಗಳಿಗೆ ಸಂಬಂಧಿಸಿ ಸೆಷನ್ಸ್ ನ್ಯಾಯಾಲಯವು ಆರೋಪಿಯನ್ನು ಖುಲಾಸೆ ಮಾಡಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿ ದೋಷಿ ಎಂದು ತೀರ್ಮಾನಿಸಿದ ತೀರ್ಪನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕ್ರಿಮಿನಲ್ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಜಿ. ಬಸವರಾಜ ಅವರಿದ್ದ ಏಕಸದಸ್ಯ ಪೀಠವು, ಜಾಮೀನೀಯ ಅಪರಾಧಗಳಲ್ಲಿ ಖುಲಾಸೆಯ ವಿರುದ್ಧದ ಮೇಲ್ಮನವಿ ಸೆಕ್ಷನ್ 378 CrPc ಅಡಿಯಲ್ಲಿ ಹೈಕೋರ್ಟ್ಗೆ ಸಲ್ಲಿಸಬೇಕೇ ಹೊರತು ಸೆಷನ್ಸ್ ನ್ಯಾಯಾಲಯಕ್ಕೆ ಅಲ್ಲ. ಕ್ರಿಮಿನಲ್ ಪ್ರೊಸೀಜರ್ ಕೋಡ್, 1973ರ ಸೆಕ್ಷನ್ 378ಕ್ಕೆ 2005ರಲ್ಲಿ ನಡೆದ ತಿದ್ದುಪಡಿಯ ಹಿನ್ನೆಲೆಯಲ್ಲಿ, ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ ಖುಲಾಸೆ ಆದೇಶದ ವಿರುದ್ಧ ಜಾಮೀನೀಯ ಅಪರಾಧಗಳಿಗೆ ಸಂಬಂಧಿಸಿದ ಮೇಲ್ಮನವಿಗಳು ಸೆಷನ್ಸ್ ನ್ಯಾಯಾಲಯದ ಮುಂದೆ ಅಲ್ಲದೆ, ಕೇವಲ ಹೈಕೋರ್ಟ್ ನ ಮುಂದೆ ಮಾತ್ರ ಸಲ್ಲಿಸಬೇಕು. ಇಂತಹ ಸಂದರ್ಭಗಳಲ್ಲಿ ಸೆಷನ್ಸ್ ನ್ಯಾಯಾಲಯ ನೀಡುವ ಯಾವುದೇ ಮೇಲ್ಮನವಿ ತೀರ್ಪು ನ್ಯಾಯಾಧಿಕಾರವಿಲ್ಲದದ್ದಾಗಿದ್ದು, ಕಾನೂನಿನ ದೃಷ್ಟಿಯಲ್ಲಿ ಶೂನ್ಯ (nullity) ಆಗಿರುತ್ತದೆ ಎಂದು ಎಂದು ಸ್ಪಷ್ಟಪಡಿಸಿತು.
ಮೇಲ್ಮನವಿದಾರರು ಎತ್ತಿದ ನ್ಯಾಯಾಧಿಕಾರ ಆಕ್ಷೇಪಣೆಯನ್ನು ಪರಿಗಣಿಸಿ, ಸೆಕ್ಷನ್ 378 CrPCಗೆ ಮಾಡಲಾದ ತಿದ್ದುಪಡಿಯ ವ್ಯಾಪ್ತಿ ಮತ್ತು ಪರಿಣಾಮವನ್ನು ವಿಶ್ಲೇಷಿಸಿದ ನ್ಯಾಯಪೀಠವು, “ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 378ಕ್ಕೆ ತಿದ್ದುಪಡಿ ಮಾಡಿದ ನಂತರ, ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸಂಜ್ಞೆಯೋಗ್ಯ ಹಾಗೂ ಜಾಮೀನು ರಹಿತ (non-bailable) ಅಪರಾಧಗಳಿಗೆ ಸಂಬಂಧಿಸಿ ನೀಡಿದ ಖುಲಾಸೆ ಆದೇಶದ ವಿರುದ್ಧದ ಮೇಲ್ಮನವಿ ಸೆಷನ್ಸ್ ನ್ಯಾಯಾಲಯದ ಮುಂದೆ ಸಲ್ಲಿಸಬಹುದು. ಆದರೆ, ಇತರ ಎಲ್ಲಾ ಸಂದರ್ಭಗಳಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ ಖುಲಾಸೆ ತೀರ್ಪಿನ ವಿರುದ್ಧದ ಮೇಲ್ಮನವಿ ಹೈಕೋರ್ಟ್ ನ ಮುಂದೆ ಮಾತ್ರ ಸಲ್ಲಿಸಬೇಕಾಗುತ್ತದೆ ಎಂದು ವಿವರಿಸಿತು.
ಮೇಲ್ಮನವಿದಾರರ ಪರವಾಗಿ ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡ ವಕೀಲ ಸಬಪ್ಪ ಬಿ. ಮಳೆಗುಲ್ ಹಾಜರಿದ್ದರು. ರಾಜ್ಯದ ಪರವಾಗಿ ಅಸ್ಮಾ ಕೌಸರ್, ಹೆಚ್ಚುವರಿ ಸರ್ಕಾರಿ ಅಭಿಯೋಜಕಿ (Additional State Public Prosecutor) ಹಾಜರಿದ್ದರು .
ಏನಿದು ಪ್ರಕರಣ
ಇದು ರಸ್ತೆ ಅಪಘಾತದ ಪ್ರಕರಣವಾಗಿದ್ದು, ಆರೋಪಿಯು ಬಸ್ ಅನ್ನು ಅಜಾಗರೂಕ ಹಾಗೂ ನಿರ್ಲಕ್ಷದಿಂದ ಚಾಲನೆ ಮಾಡಿದ್ದರಿಂದ ಹಲವರಿಗೆ ಗಾಯಗಳಾಗಿದ್ದು. ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆ, 1860ರ ಸೆಕ್ಷನ್ಗಳು 279, 337, 338 ಮತ್ತು 304-ಎ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು.
ವಿಚಾರಣೆ ಪೂರ್ಣಗೊಂಡ ನಂತರ, ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಆರೋಪಿಯನ್ನು ಖುಲಾಸೆಗೊಳಿಸಿದ್ದರು. ಈ ಖುಲಾಸೆ ಆದೇಶದ ವಿರುದ್ದ ರಾಜ್ಯ ಸರ್ಕಾರವು ಸೆಷನ್ಸ್ ನ್ಯಾಯಾಲಯದ ಮುಂದೆ ಮೇಲ್ಮನವಿ ಸಲ್ಲಿಸಿತು. ಸೆಷನ್ಸ್ ನ್ಯಾಯಾಲಯವು ಮೇಲ್ಮನವಿಯನ್ನು ಅಂಗೀಕರಿಸಿ, ಖುಲಾಸೆ ಆದೇಶವನ್ನು ರದ್ದುಪಡಿಸಿ ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಿ ಜೈಲುಶಿಕ್ಷೆ ಹಾಗೂ ದಂಡ ವಿಧಿಸಿತ್ತು.
ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಆರೋಪಿಯು ಹೈಕೋರ್ಟ್ ಮೆಟ್ಟಿಲೇರಿದ್ದರು. ಸಂಬಂಧಿಸಿದ ಎಲ್ಲಾ ಅಪರಾಧಗಳು ಜಾಮೀನೀಯ ಸ್ವಭಾವದ್ದಾಗಿರುವುದರಿಂದ ಖುಲಾಸೆಯ ವಿರುದ್ಧದ ಮೇಲ್ಮನವಿಯನ್ನು ವಿಚಾರಣೆ ನಡೆಸಲು ಸೆಷನ್ಸ್ ನ್ಯಾಯಾಲಯಕ್ಕೆ ಯಾವುದೇ ನ್ಯಾಯಾಧಿಕಾರವಿಲ್ಲ ಎಂದು ವಾದಿಸಿದ್ದರು.
ಆರೋಪಿ ಸಲ್ಲಿಸಿದ್ದ ಮೇಲ್ಮನವಿ ಅಂಗೀಕರಿಸಿದ ಹೈಕೋರ್ಟ್ ನ್ಯಾಯಪೀಠವು, ಜಾಮೀನೀಯ ಅಪರಾಧಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿದ ಖುಲಾಸೆಯ ವಿರುದ್ಧದ ಮೇಲ್ಮನವಿಯನ್ನು ವಿಚಾರಣೆ ನಡೆಸಲು ಸೆಷನ್ಸ್ ನ್ಯಾಯಾಲಯಕ್ಕೆ ಯಾವುದೇ ನ್ಯಾಯಾಧಿಕಾರವಿಲ್ಲ ಎಂದು ಘೋಷಿಸಿದೆ. ವಿಚಾರಣಾ ನ್ಯಾಯಾಲಯ ನೀಡಿದ ಖುಲಾಸೆ ತೀರ್ಪನ್ನು ಹೈಕೋರ್ಟ್ ಪುನಃಸ್ಥಾಪಿಸಿ ದೃಢಪಡಿಸಿದೆ ಹಾಗೂ ಆರೋಪಿಯಿಂದ ಜಮಾ ಮಾಡಲಾದ ಯಾವುದೇ ದಂಡ ಮೊತ್ತವಿದ್ದಲ್ಲಿ ಅದನ್ನು ಹಿಂದಿರುಗಿಸಲು ನಿರ್ದೇಶನ ನೀಡಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
