ಸೇನಾ ಕಾರ್ಯಾಚರಣೆ ನೇರ ಪ್ರಸಾರಕ್ಕೆ ನಿರ್ಬಂಧ: ಮಾಧ್ಯಮಗಳಿಗೆ ಕೇಂದ್ರ ಕಡಿವಾಣ

ನವದೆಹಲಿ: ದೇಶದ ಭದ್ರತಾ ದೃಷ್ಟಿಯಿಂದ ಸೇನಾ ಕಾರ್ಯಾಚರಣೆಯನ್ನು ಯಾವುದೇ ನೇರ ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ.
ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳು ಮತ್ತು ಭದ್ರತಾ ಪಡೆಗಳ ಚಲನವಲನಗಳ ನೇರ ಪ್ರಸಾರವನ್ನು ಮಾಡದಂತೆ ಮಾಧ್ಯಮಗಳಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿರ್ಬಂಧ ವಿಧಿಸಿದೆ.
ಈ ಸಂಬಂಧ ಮಾರ್ಗಸೂಚಿಯನ್ನ ಬಿಡುಗಡೆ ಮಾಡಲಾಗಿದೆ. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಈ ಬಗ್ಗೆ ಸೂಚನಾ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ಈ ಮೂಲಕ ಸೇನಾ ಕಾರ್ಯಾಚರಣೆಯ ಬೇಕಾಬಿಟ್ಟಿ ಸುದ್ದಿ ಪ್ರಚಾರ ನಡೆಸುವ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದೆ.
ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವಲ್ಲಿ ಮಾಧ್ಯಮಗಳು, ಡಿಜಿಟಲ್ ವೇದಿಕೆಗಳು ಮತ್ತು ವ್ಯಕ್ತಿಗಳ ಪಾತ್ರ ಮಹತ್ವದ್ದಾಗಿದೆ. ರಕ್ಷಣಾ ಕಾರ್ಯಾಚರಣೆಗಳು ಅಥವಾ ಭದ್ರತಾ ಪಡೆಗಳ ಚಲನವಲನಕ್ಕೆ ಸಂಬಂಧಿಸಿದಂತೆ ಮೂಲಗಳನ್ನು ಆಧಾರಿಸಿದ ವರದಿಯನ್ನು ತಡೆಯುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ರೀಯಲ್ ಟೈಮ್ ಕವರೇಜ್, “ಮೂಲಗಳ ಪ್ರಕಾರ” ಎಂದು ಹೇಳಿಕೊಳ್ಳುವ ಸುದ್ದಿಗಳು, ರಕ್ಷಣಾ ಕಾರ್ಯಾಚರಣೆಗಳು ಮತ್ತು ಇತರ ವಿದ್ಯಮಾನಗಳ ಸುದ್ದಿ ಪ್ರಸಾರ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ದೇಶದ ಜನತೆಯ ಸುರಕ್ಷತೆಯ ದೃಷ್ಟಿಯಿಂದ ರಕ್ಷಣಾ ಸಚಿವಾಲಯ ಮತ್ತು ಭದ್ರತಾ ಸಿಬ್ಬಂದಿಗಳ ಕಾರ್ಯಾಚರಣೆಯ ಸುದ್ದಿಯೂ ನಿರ್ಬಂಧಕ್ಕೊಳಪಟ್ಟಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ