ವಕೀಲರ ಸಂಘಗಳನ್ನ ಬಾಯ್ಸ್ ಕ್ಲಬ್ ಗಳಾಗಲು ಬಿಡುವುದಿಲ್ಲ – ಹೈಕೋರ್ಟ್

ಬೆಂಗಳೂರು: ತುಮಕೂರು ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಏಪ್ರಿಲ್ 5ರಂದು ನಡೆಯಬೇಕಿದ್ದ ಚುನಾವಣೆಗೆ ತಡೆ ನೀಡಿದ ಕರ್ನಾಟಕ ಹೈಕೋರ್ಟ್ . ‘ಪ್ರಾಚೀನ ಪುರುಷರ ಕೂಡು ತಾಣಗಳಂತಾಗಿರುವ ವಕೀಲರ ಸಂಘಗಳು ಮಹಿಳೆಯರ ವ್ಯಾಪಕ ಪಾಲುದಾರಿಕೆಗೆ ದಾರಿ ಮಾಡಿಕೊಡಬೇಕು. ಈ ಸಂಘಗಳನ್ನು ಇನ್ನು ಮುಂದೆಯೂ ಬಾಯ್ಸ್ ಕ್ಲಬ್ ಆಗಿ ಮುಂದುವರಿಯಲು ಬಿಡುವುದಿಲ್ಲಎಂದು ತಿಳಿಸಿದೆ.
‘ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಶೇ 33ರಷ್ಟು ಮೀಸಲು ಕಲ್ಪಿಸಲು ವಕೀಲರ ಸಂಘಕ್ಕೆ ಆದೇಶಿಸಬೇಕು’ ಎಂದು ಕೋರಿ ತುಮಕೂರಿನ ವಕೀಲೆ ಕೆ.ಆರ್.ಮೋಹನ ಕುಮಾರಿ ಸೇರಿದಂತೆ ಎಂಟು ಮಹಿಳಾ ವಕೀಲರು ಹೈಕೋರ್ಟ್ ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಇನ್ಮುಂದೆ ವಕೀಲರ ಸಂಘಗಳನ್ನು ಬಾಯ್ಸ್ ಕ್ಲಬ್ ಆಗಿ ಮುಂದುವರೆಯಲು ಅನುಮತಿಸಲಾಗುವುದಿಲ್ಲ ಎಂದು ಹೇಳಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲೆ ಕೆ.ಎಸ್.ವಿದ್ಯಾಶ್ರೀ ಅವರು ಹಾಜರಾಗಿ, ”ಮಹಿಳಾ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಮೀಸಲು ಕಲ್ಪಿಸಲು ಕೋರಿ ಅರ್ಜಿದಾರರು ತುಮಕೂರು ವಕೀಲರ ಸಂಘಕ್ಕೆ ಮನವಿ ಪತ್ರವನ್ನು ಸಲ್ಲಿಸಿದ್ದರು. ಮಹಿಳೆಯರಿಗೆ ಮೀಸಲಾತಿ ಒದಗಿಸಲು ಉಪ – ಕಾನೂನುಗಳನ್ನು ತಿದ್ದುಪಡಿ ಮಾಡಲು ಸಂಘಕ್ಕೆ ಸಾಕಷ್ಟು ಸಮಯವಿತ್ತು. ಆದರೂ ಅರ್ಜಿದಾರರ ಮನವಿ ತಿರಸ್ಕರಿಸಲಾಗಿದೆ. ಸುಪ್ರೀಂ ಕೋರ್ಟ್ ತೀರ್ಪು ಆಧರಿಸಿ ಬೆಂಗಳೂರು ವಕೀಲರ ಸಂಘವು ಕಳೆದ ಚುನಾವಣೆಯಲ್ಲಿ ಖಜಾಂಚಿ ಹುದ್ದೆಯನ್ನು ಮಹಿಳಾ ಅಭ್ಯರ್ಥಿಗೆ ಮೀಸಲಿಟ್ಟಿತ್ತು” ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ನಾಲ್ವರು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿ ವಿಚಾರಣೆಯನ್ನು ಇದೇ ಏ. 21ಕ್ಕೆ ಮುಂದೂಡಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ